ರಾಜ್ಯಾದ್ಯಂತ ತಮಿಳುನಾಡಿಗೆ ನೀರು ಹರಿಸುವ ವಿರುದ್ಧ ವ್ಯಾಪಕ ಹೋರಾಟ ಆರಂಭವಾಗಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಾವೇರಿ ವಿಚಾರವಾಗಿ ಕೆಲಕಾಲ ಮಾತುಕತೆ ನಡೆಸಿದರು. ರಾಜ್ಯದಲ್ಲಿರುವ ವಾಸ್ತವ ಸ್ಥಿತಿಗತಿ ಕುರಿತು ವಿವರಣೆ ನೀಡಿದರು.
ನವದೆಹಲಿ (ಸೆ.23): ರಾಜ್ಯಾದ್ಯಂತ ತಮಿಳುನಾಡಿಗೆ ನೀರು ಹರಿಸುವ ವಿರುದ್ಧ ವ್ಯಾಪಕ ಹೋರಾಟ ಆರಂಭವಾಗಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಾವೇರಿ ವಿಚಾರವಾಗಿ ಕೆಲಕಾಲ ಮಾತುಕತೆ ನಡೆಸಿದರು. ರಾಜ್ಯದಲ್ಲಿರುವ ವಾಸ್ತವ ಸ್ಥಿತಿಗತಿ ಕುರಿತು ವಿವರಣೆ ನೀಡಿದರು.
ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಸಲಾಗದಂಥ ಕಠಿಣ ಆದೇಶವನ್ನೇನಾದರೂ ನ್ಯಾಯಾಲಯ ನೀಡಿದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ಜನರ ಹಿತವನ್ನು ಮುಂದಿಟ್ಟುಕೊಂಡು ಕೈಗೊಳ್ಳುವ ನಿರ್ಣಯಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯೆನಿಸುವುದಿಲ್ಲ ಎಂಬುದು ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಗಮನಿಸಿದ್ದೇನೆ.
ಸರ್ಕಾರ ಈ ಕುರಿತು ಕಾನೂನು ತಜ್ಞರ ಜತೆಗೆ ಚರ್ಚೆ ನಡೆಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಈ ಮೂಲಕ ನ್ಯಾಯಾಲಯದ ಆದೇಶದ ಹೊರತಾಗಿಯೂ ರಾಜ್ಯದ ರೈತರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯಾಸಾಧ್ಯತೆ ಕುರಿತು ಪರಿಶೀಲಿಸುವಂತೆ ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಬಿಜೆಪಿ-ದಳ ಮೈತ್ರಿ: ಜೆಡಿಎಸ್ ಜತೆ ಒಟ್ಟಾಗಿ ನವಭಾರತ ನಿರ್ಮಾಣವೆಂದ ಬಿಎಸ್‌ವೈ
ರಾಜ್ಯದಲ್ಲಿ 6ಕ್ಕೂ ಹೆಚ್ಚು ಮಂದಿ ಅಡ್ವೊಕೇಟ್ ಜನರಲ್ ಆಗಿ ಕೆಲಸ ಮಾಡಿದ ವಕೀಲರಿದ್ದಾರೆ, ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಾಧೀಶರಿದ್ದಾರೆ. ಕಾವೇರಿ ವಿಚಾರವಾಗಿ ಅವರನ್ನು ಕರೆಸಿ ಮಾತನಾಡುವ ಸಾಮಾನ್ಯ ಜ್ಞಾನವೂ ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದರು. ನಮ್ಮಲ್ಲಿ ನೀರಾವರಿ ಸಚಿವರೊಬ್ಬರು ಇದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಚದರಡಿಗೆ ಇಷ್ಟು ರೇಟ್ ಅಂತ ಪಿಕ್ಸ್ ಮಾಡಿಕೊಂಡು ಕೂತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೆಸರೆತ್ತದೆ ಇದೇ ವೇಳೆ ಆಕ್ರೋಶ ಹೊರಹಾಕಿದರು.