ಸುಪ್ರೀಂ ಕೋರ್ಟ್ ಆದೇಶ ಬರುವ ಮುನ್ನವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು ತಪ್ಪು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ನವದೆಹಲಿ (ಸೆ.23): ಸುಪ್ರೀಂ ಕೋರ್ಟ್ ಆದೇಶ ಬರುವ ಮುನ್ನವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು ತಪ್ಪು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ವಿಷಯದ ಬಗ್ಗೆ ನಾನು ಬೆಂಗಳೂರಿನಲ್ಲಿದ್ದಾಗಲೇ ಕೋಲಾರದ ಎಂಎಲ್‌ಸಿಯನ್ನು ಕಳುಹಿಸಿ, ಸರ್ವ ಪಕ್ಷ ಸಭೆಗೆ ಬನ್ನಿ, ಸಲಹೆ ಕೊಡಿ ಎಂದು ಕೇಳಿದ್ದರು. ಆದರೆ ನಾನು ಈಗ ಬರುವ ಸ್ಥಿತಿಯಲ್ಲಿಲ್ಲ ಹಿಂದಿನಂತೆ ಈಗಲೂ ಸಹಕಾರ ನೀಡುವೆ ಎಂದಿದೆ.
ಇನ್ನು, ಕಾವೇರಿ ನೀರು ಪ್ರಾಧಿಕಾರದ ಸಭೆಯಲ್ಲಿ ಖುದ್ದು ಭಾಗವಹಿಸಿ ಇಲ್ಲಿನ ವಾಸ್ತವಾಂಶ ತೆರೆದಿಡಬೇಕಾದ ನಮ್ಮ ಅಧಿಕಾರಿಗಳು ಹಾಗೆ ವರ್ಚುಯಲ್ ಮೂಲಕ ಮಾತನಾಡಿದರೆ ಈ ಸಮಸ್ಯೆ ಬಗೆಹರಿಯುತ್ತಾ? ಎಂದು ಖಾರವಾಗಿಯೇ ನುಡಿದರು. ಇನ್ನು, ತಮಿಳುನಾಡಿನ ಹಿನ್ನೆಲೆ ನನಗೆ ಚೆನ್ನಾಗಿ ತಿಳಿದಿದೆ. ಹಿಂದೆ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ರಾಜ್ಯದವರೇ ನಾಲ್ಕು ಜನ ಮಂತ್ರಿಗಳು ಇದ್ದರಲ್ಲ? ಆಗ ಒಬ್ಬೇ ಒಬ್ಬ ಮಂತ್ರಿ ಕಾವೇರಿ ವಿಚಾರವಾಗಿ ದನಿ ಎತ್ತಲಿಲ್ಲ, ಆದರೆ ನಾನು ಅಧಿವೇಶನದಲ್ಲೇ ಕಣ್ಣೀರು ಹಾಕಿದೆ. ಹಾಗೆಯೇ ಕರ್ನಾಟಕ, ತಮಿಳುನಾಡು ಅಲ್ಲದವರನ್ನು ರಾಜ್ಯಕ್ಕೆ ಕಳುಹಿಸಿ ಇಲ್ಲಿನ ವಾಸ್ತವತೆ ತಿಳಿಯಿರಿ ಎಂದೂ ಸಲಹೆಯಿತ್ತೆ ಎಂದರು.
ಬಿಜೆಪಿ-ದಳ ಮೈತ್ರಿ: ಜೆಡಿಎಸ್ ಜತೆ ಒಟ್ಟಾಗಿ ನವಭಾರತ ನಿರ್ಮಾಣವೆಂದ ಬಿಎಸ್‌ವೈ
ಈಚೆಗೂ ರಾಜ್ಯಸಭೆಯಲ್ಲಿ ಕಾವೇರಿ ವಿಚಾರವಾಗಿ ಖರ್ಗೆ ಅವರೂ ಮಾತನಾಡಲಿಲ್ಲ. ಅವರೊಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷ, ಹಾಗೆ ಮಾತನಾಡಲು ಆಗದಿರಬಹುದು. ಆ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ ಎಂದ ಅವರು, ನಾನು ಮಾಜಿ ಪ್ರಧಾನಿಯಾಗಿ ಸುಪ್ರಿಂ ತೀರ್ಪಿನ ಬಗ್ಗೆಯೂ ಜಾಸ್ತಿ ಮಾತನಾಡಲಾರೆ ಎಂದಷ್ಟೆ ಹೇಳಿದರು. ಕಾವೇರಿ ನೀರು ಹಂಚಿಕೆ ಕುರಿತು ನಡೆದ ಸರ್ವಪಕ್ಷಗಳ ಮೊದಲ ಸಭೆಯಲ್ಲೇ ಪಕ್ಷದ ಪರವಾಗಿ ಕುಮಾರಸ್ವಾಮಿ ಭಾಗವಹಿಸಿ, ಪ್ರಾಧಿಕಾರಕ್ಕೆ ಇಲ್ಲಿನ ವಾಸ್ತವಾಂಶ ತಿಳಿಸದೆ ಈಗ ಸಂಕಷ್ಟ ಸಿಲುಕಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಎರಡನೇ ಸಭೆಯಲ್ಲಿ ಏನು ಚರ್ಚೆಗಳಾಗಿದೆಯೋ ತಿಳಿದಿಲ್ಲ ಆ ಕುರಿತು ನನ್ನದೇನೂ ವಿಶೇಷ ಅಭಿಪ್ರಾಯವೇನಿಲ್ಲ ಎಂದು ಹೇಳಿದರು.