ಈ ಸಲ ಆಪರೇಷನ್‌ ಕಮಲ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Published : Apr 22, 2023, 04:42 AM IST
ಈ ಸಲ ಆಪರೇಷನ್‌ ಕಮಲ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಸಾರಾಂಶ

ಅತಂತ್ರ ವಿಧಾನಸಭೆ ಚಾನ್ಸೇ ಇಲ್ಲ, ವರುಣ ಸ್ಪರ್ಧೆ ಯತೀಂದ್ರ ಆಯ್ಕೆ, ನಾನು ಕೋಲಾರದ ಟಿಕೆಟ್‌ ಕೇಳಲಿಲ್ಲ, ವರಿಷ್ಠರು ಕೊಡಲಿಲ್ಲ, ಡಿಕೆಶಿ ನನ್ನ ಶತ್ರು ಅಲ್ಲ: ಸಿದ್ದರಾಮಯ್ಯ 

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ಏ.22):  ಈ ಬಾರಿಯ ವಿಧಾನಸಭಾ ಚುನಾವಣೆಯ ‘ಸೆಂಟರ್‌ ಫಿಗರ್‌’ ಎಂದು ಯಾರಾದರೂ ಇದ್ದರೆ ಅದು ನಿಸ್ಸಂಶಯವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಚುನಾವಣೆಗೆ ವೇಗೋತ್ಕರ್ಷ ದೊರೆಯುತ್ತಿದ್ದಂತೆ ಅತಿ ಹೆಚ್ಚು ಚರ್ಚಿತವಾದ ವಿಚಾರ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಮತ್ತು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದು. ಎದುರಾಳಿಗಳಿಗಂತೂ ಸಿದ್ದರಾಮಯ್ಯ ಅವರೇ ನೇರ ಟಾರ್ಗೆಟ್‌! 

ಇನ್ನು ಕಾಂಗ್ರೆಸ್‌ ಪಕ್ಷದ ಒಳಗೂ ಸಿದ್ದರಾಮಯ್ಯ ಅವರಿಗೆ ಎದುರಾದ ಒಳಸುಳಿಗಳು ಹಲವು. ಇದು ತಮ್ಮ ರಾಜಕೀಯ ಜೀವನದ ಕಟ್ಟಕಡೆಯ ಚುನಾವಣೆ ಎಂದು ಘೋಷಿಸಿಕೊಂಡು ಬಯಸಿದ ಕೋಲಾರ ಕ್ಷೇತ್ರದ ಬದಲಾಗಿ ತಮ್ಮ ಮೂಲ ನೆಲೆ ವರುಣದಲ್ಲೇ ಸ್ಪರ್ಧೆಗೆ ಅಣಿಯಾಗಿರುವ ಸಿದ್ದರಾಮಯ್ಯ ಈ ಬಾರಿಯ ಚುನಾವಣಾ ಕಣ ಹೇಗಿದೆ? ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಮುಂದೇನು? ತಮಗೆ ಕೋಲಾರ ಟಿಕೆಟ್‌ ಕೈ ತಪ್ಪಿದ್ದು ಏಕೆ? ವರುಣದಲ್ಲಿ ತಮ್ಮನ್ನು ಕಟ್ಟಿಹಾಕುವ ಪ್ರಯತ್ನಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಸಿದ್ದು ಅವನ್ಯಾರು, ಇವನ್ಯಾರು ಅನ್ನೋದನ್ನ ನಿಲ್ಲಿಸಲಿ: ಸೋಮಣ್ಣ

ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಟಾರ್ಗೆಟ್‌ ಸಿದ್ದರಾಮಯ್ಯ ಆಗಿದ್ದಾರಲ್ಲ, ಏಕೆ?

ಜನರಿಗೆ ನನ್ನ ಮೇಲೆ ವಿಶ್ವಾಸವಿದೆ. ಹೆಚ್ಚು ಪ್ರೀತಿಯಿದೆ. ಇದರಿಂದ ಬಿಜೆಪಿಯವರಿಗೆ ಭಯ. ಹೀಗಾಗಿ ನನ್ನನ್ನು ಟಾರ್ಗೆಟ್‌ ಮಾಡುತ್ತಾರೆ. ಹೇಗಾದರೂ ಮಾಡಿ ನನ್ನ ತೇಜೋವಧೆ ಮಾಡಬೇಕು ಎಂಬುದು ಅವರ ಉದ್ದೇಶ. ಆ ಮೂಲಕ ನನ್ನ ಪಾಪ್ಯುಲಾರಿಟಿಯನ್ನು ಕಡಿಮೆ ಮಾಡಿಸಬೇಕು ಅಂತ ಪ್ರಯತ್ನ. ಆದರೆ, ಅದು ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದಿದ್ದರೆ, ಅದನ್ನು ಅಳಿಸಿ ಹಾಕಲು ಸಾಧ್ಯವಾಗುವುದಿಲ್ಲ.

ಪಕ್ಷದೊಳಗೂ ನೀವೇ ಟಾರ್ಗೆಟ್‌?

ಪಕ್ಷದೊಳಗೆ ನನಗೆ ಯಾರೂ ಶತ್ರುಗಳಿಲ್ಲ. ಡಿ.ಕೆ.ಶಿವಕುಮಾರ್‌ ತಾನು ಸಿಎಂ ಆಗಬೇಕು ಎಂಬ ಆಕಾಂಕ್ಷೆ ಹೊಂದಿದ್ದರೆ ಆತ ನನ್ನ ಶತ್ರು ಅಲ್ಲ. ಒಟ್ಟಾರೆ, ಮುಖ್ಯಮಂತ್ರಿ ಹುದ್ದೆ ಪೈಪೋಟಿ ಎಂಬುದು ನಿಮ್ಮ ಪಕ್ಷದಲ್ಲಿ ಗುಪ್ತಗಾಮಿನಿ...
(ಪ್ರಶ್ನೆ ತುಂಡರಿಸಿ) ಅದೇನು ಗುಪ್ತಗಾಮಿನಿಯಲ್ಲ. ಬಹಿರಂಗವಾಗಿಯೇ ಇದೆ. ಆದರೆ, ಅಂತಿಮವಾಗಿ ಚುನಾವಣೆ ನಂತರ ಶಾಸಕರು ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್‌ ಮುಖ್ಯಮಂತ್ರಿ ಯಾರಾಗಬೇಕು ಎಂಬ ತೀರ್ಮಾನ ಕೈಗೊಳ್ಳುತ್ತದೆ. ಅದು ಪ್ರಜಾಪ್ರಭುತ್ವ ಪ್ರಕ್ರಿಯೆ.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದಾದರೆ ಬೆಂಬಲಿಸುತ್ತೇನೆ ಎಂದಿದ್ದಾರಲ್ಲ ಕೆಪಿಸಿಸಿ ಅಧ್ಯಕ್ಷರು?

ನಾನು ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿರುವಾಗ ನಾನು ಈ ಪ್ರಶ್ನೆಗೆ ಉತ್ತರ ಕೊಡಬೇಕಾ?
ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಯಕೆ ನಿಮಗಿತ್ತು. ಹೈಕಮಾಂಡ್‌ ಅವಕಾಶ ನೀಡಲಿಲ್ಲ?

ನಾನು ಎರಡು ಕ್ಷೇತ್ರಗಳನ್ನು ಕೊಡಿ ಎಂದು ಹೈಕಮಾಂಡ್‌ ಅನ್ನು ಕೇಳಿರಲಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರದ ನಾಯಕರು ಮತ್ತು ಜನರು ನಾನು ಕೋಲಾರದಿಂದ ಸ್ಪರ್ಧಿಸಬೇಕು ಎಂದು ಬಯಸಿದ್ದರು. ಹೈಕಮಾಂಡ್‌ ಒಪ್ಪಿದರೆ ಸ್ಪರ್ಧಿಸುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೆ. ಆದರೆ, ಹೈಕಮಾಂಡ್‌ ನಿಲ್ಲು ಎಂದು ನನಗೆ ಹೇಳಲಿಲ್ಲ. ಹೀಗಾಗಿ ನಿಲ್ಲಲಿಲ್ಲ.

ಹೈಕಮಾಂಡ್‌ ನಿಮಗೆ ಕೋಲಾರದಿಂದ ಸ್ಪರ್ಧಿಸಬೇಡಿ ಎಂದು ಹೇಳಿತೇ?

ಇಲ್ಲ. ಹೈಕಮಾಂಡ್‌ ನನಗೆ ಕೋಲಾರದಿಂದ ನಿಲ್ಲಬೇಡಿ ಎಂದು ಹೇಳಲಿಲ್ಲ. ಆದರೆ, ಕ್ಯಾಂಡಿಡೇಟ್‌ ಆಗಿ ಬೇರೆಯವರನ್ನು ಅನೌನ್ಸ್‌ ಮಾಡಿದರು.

ರಾಹುಲ್‌ ಗಾಂಧಿ ನಿಮಗೆ ಕೋಲಾರ ಬೇಡ ಎಂದರಂತೆ?

ಇಲ್ಲ, ಪಾಪ... ಅವರೇನೂ ಆ ತರಹ ಹೇಳಲಿಲ್ಲ.

ಕೋಲಾರ ಕ್ಷೇತ್ರದ ಸಮೀಕ್ಷೆಯು ನಿಮಗೆ ಪೂರಕವಾಗಿ ಇರಲಿಲ್ಲವಂತೆ?

ಇಲ್ಲ. ಆ ರೀತಿಯಿಲ್ಲ. ನಾನು ಕೋಲಾರದಲ್ಲಿ ಸ್ಪರ್ಧಿಸಿದ್ದರೆ ಭಾರಿ ಬಹುಮತಗಳಿಂದ ಗೆಲ್ಲುತ್ತಿದ್ದೆ. ಆ ಕೋಲಾರದ ಸಾಮಾಜಿಕ ಸ್ವರೂಪವನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಲ್ಲಿ, ಸುಮಾರು 60 ಸಾವಿರ ಮುಸ್ಲಿಮರಿದ್ದಾರೆ. 50 ಸಾವಿರ ಪರಿಶಿಷ್ಟರಿದ್ದಾರೆ. ಒಬಿಸಿ ಇದ್ದಾರೆ. ಮೇಜರ್‌ ಕಮ್ಯುನಿಟಿಗಳು ಕಡಿಮೆ ಇವೆ. ಜತೆಗೆ, ನನಗೆ ಮೇಜರ್‌ ಕಮ್ಯುನಿಟಿಯ ಮತಗಳು ಬರುತ್ತಿದ್ದವು. ಹೀಗಾಗಿ, ಕೋಲಾರ ನನಗೆ ಬಹಳ ಫೇವರಬಲ್‌ ಕ್ಷೇತ್ರ.

ಕಡೆಗೂ ಕೋಲಾರದಿಂದ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ಬೇಸರವಿದೆಯೇ?

ಯಾಕೆ ಬೇಸರ ಆಗಬೇಕು? ಕೋಲಾರದ ಜನರು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಕೇಳಿದ್ದರು. ಹೈಕಮಾಂಡ್‌ ಹೇಳಿದರೆ ನಿಲ್ಲುತ್ತೇನೆ ಎಂದು ಹೇಳಿದ್ದೆ. ಹೈಕಮಾಂಡ್‌ ಹೇಳಲಿಲ್ಲ. ಅದಕ್ಯಾಕೆ ನನಗೆ ಬೇಸರ ಆಗಬೇಕು?

ಮಾಜಿ ಮುಖ್ಯಮಂತ್ರಿಯಾಗಿದ್ದವರು ಕ್ಷೇತ್ರಕ್ಕಾಗಿ ಅಲೆದಾಡುತ್ತಾರೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ?

ನಾನು ಅಡ್ಡಾಡುತ್ತಿದ್ದೆ ಅಂತ ಹೇಳಿದವರು ಯಾರು? ನನಗೆ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬರುವಂತೆ ಆಫರ್‌ ಇತ್ತು. ಬಾದಾಮಿಯ ಜನ ನನ್ನ ಮನೆವರೆಗೂ ಬಂದು ಅತ್ತು-ಕರೆದು ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಎಂದು ಕೋರಿದರು. ಹೀಗಿದ್ದರೂ ನನಗೆ ಕ್ಷೇತ್ರ ಇಲ್ಲ ಎಂದು ಹೇಗೆ ಹೇಳುತ್ತಾರೆ. ಕ್ಷೇತ್ರ ಇಲ್ಲದವರ ಬಳಿ ಜನರೇ ಬಂದು ನಮ್ಮ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಿ ಎಂದು ಅತ್ತು-ಕರೆದು ಮಾಡುತ್ತಾರಾ? ಬಾದಾಮಿ ದೂರದ ಕ್ಷೇತ್ರ ಅಂತ ಬೇಡ ಅಂತ ನಾನು ಹೇಳಿದ್ದೆ. ಸಮೀಪದ ಕ್ಷೇತ್ರ ಹುಡುಕುತ್ತಿದ್ದಾಗ ಕೋಲಾರದವರು ಕರೆದರು. ಅಂತಿಮವಾಗಿ ನಾನು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಮುಂದೆ ವರುಣದಿಂದ ಸ್ಪರ್ಧಿಸುವುದಾಗಿ ನಾನೇ ಹೇಳಿದೆ.

ವರುಣ ಆಯ್ಕೆ ಯಾರದ್ದು? ನಿಮ್ಮದೋ ಅಥವಾ ಹೈಕಮಾಂಡ್‌ನದ್ದೋ?

ಅದನ್ನು ನನ್ನ ಮಗ ಡಾ.ಯತೀಂದ್ರ ಸೂಚಿಸಿದ್ದು. ಆತ ಆಗಾಗ ವರುಣಗೆ ಬರುವಂತೆ ನನಗೆ ಹೇಳುತ್ತಿದ್ದ. ವರುಣದಿಂದ ಸ್ಪರ್ಧಿಸಿದರೆ, ನಾನು ಕ್ಷೇತ್ರ ನೋಡಿಕೊಳ್ಳುತ್ತೇನೆ. ನೀವು ಹೊರ ಕ್ಷೇತ್ರಗಳಲ್ಲಿ ಪಕ್ಷಕ್ಕಾಗಿ ಪ್ರಚಾರ ಮಾಡಬಹುದು ಎಂದು ಹೇಳುತ್ತಿದ್ದ. ಕಡೆಗೆ, ಇದು ನನ್ನ ಕೊನೆ ಎಲೆಕ್ಷನ್‌ ಆಗಿರೋದರಿಂದ ನನಗೂ ನನ್ನ ಗ್ರಾಮ ಸಿದ್ದರಾಮನಹುಂಡಿ ಇರುವ ವರುಣದಿಂದ ಸ್ಪರ್ಧಿಸಬೇಕು ಎನಿಸಿತು. ಈ ಭಾವನಾತ್ಮಕ ಕಾರಣಕ್ಕಾಗಿ ನಾನು ವರುಣದಿಂದ ಸ್ಪರ್ಧಿಸಲು ನಿರ್ಧರಿಸಿದೆ.

ವರುಣದಲ್ಲೂ ನಿಮ್ಮನ್ನು ಕಟ್ಟಿಹಾಕುವ ಪ್ರಯತ್ನ ನಡೆದಿದೆ?

ನೋಡಿ, ನನ್ನ ವಿರುದ್ಧ 2008ರಲ್ಲಿ ರೇವಣಸಿದ್ದಯ್ಯ ನಿಂತಿದ್ದರು. ಆಗ ನಾನು 28 ಸಾವಿರ ಲೀಡ್‌ನಲ್ಲಿ ಗೆದ್ದೆ. ಅನಂತರ ಕಾಪು ಸಿದ್ದಲಿಂಗಸ್ವಾಮಿ ನಿಂತಿದ್ದರು. ಆತನ ವಿರುದ್ಧ 31 ಸಾವಿರ ಲೀಡ್‌ನಲ್ಲಿ ಗೆದ್ದೆ. ಕಳೆದ ಬಾರಿ ಜೆಡಿಎಸ್‌ ಹಾಗೂ ಬಿಜೆಪಿ ವಿರುದ್ಧ ಮಗ ಯತೀಂದ್ರ 59 ಸಾವಿರ ಲೀಡ್‌ನಲ್ಲಿ ಗೆದ್ದ. ಈಗ ನೀವೇ ಹೇಳಿ, ಅದು ಕಾಂಗ್ರೆಸ್‌ ಪರ ಕ್ಷೇತ್ರನೋ ಅಥವಾ ಬಿಜೆಪಿ ಪರ ಕ್ಷೇತ್ರನೋ?

ಲಿಂಗಾಯತ ಸಮುದಾಯದ ಡಾಮಿನೆನ್ಸ್‌ ಇರುವ ಕ್ಷೇತ್ರ ಅಂತಾರೆ?

ಪದೇ ಪದೇ ಲಿಂಗಾಯತರು ಜಾಸ್ತಿ ಇದ್ದಾರೆ ಅಂತ ಹೇಳುತ್ತಾರೆ. ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಎಲ್ಲ ಸಮುದಾಯದವರ ಬೆಂಬಲವೂ ಬೇಕು. ವರುಣದಲ್ಲಿ 2.36 ಲಕ್ಷ ಮತಗಳಿವೆ. ಲಿಂಗಾಯತರದ್ದು 40 ಸಾವಿರ ಮತ ಇದೆ ಎಂದು ಭಾವಿಸೋಣ. ಉಳಿದವು ಎಷ್ಟು? 1.90 ಲಕ್ಷ ಮತ ಯಾರವು? ಇನ್ನು ಆ ಕ್ಷೇತ್ರದಲ್ಲಿ 35 ಸಾವಿರ ಕುರುಬರ ಮತಗಳಿವೆ. ನಾನು ಕುರುಬರ 35 ಸಾವಿರ ಮತಗಳಿಂದಲೇ ಗೆಲ್ಲಲು ಸಾಧ್ಯವೇ? ಎಲ್ಲ ಸಮುದಾಯದವರ ಬೆಂಬಲ ಸಿಕ್ಕರೆ ತಾನೇ ಗೆಲ್ಲಲು ಸಾಧ್ಯ? ಕಳೆದ ಬಾರಿ ನನ್ನ ಮಗ ಯತೀಂದ್ರನಿಗೆ 59 ಸಾವಿರ ಲೀಡ್‌ ಬಂದಿತ್ತು. ಲಿಂಗಾಯತರು ಬೆಂಬಲ ನೀಡಿರದಿದ್ದರೆ ಅಷ್ಟುಲೀಡ್‌ ಬರಲು ಸಾಧ್ಯವೇ? ಆ ಕ್ಷೇತ್ರದಲ್ಲಿ ನನಗೆ ಎಲ್ಲ ಜಾತಿಯವರು ಮತ ಹಾಕುತ್ತಾರೆ. ಪಸೆÜರ್‍ಂಟೇಜ್‌ ಹೆಚ್ಚು-ಕಡಿಮೆಯಾಗಬಹುದು. ಕುರುಬರು 90 ಪರ್ಸೆಂಟ್‌ ಮತ ಹಾಕಬಹುದು. ಒಕ್ಕಲಿಗರು ಶೇ.50ರಷ್ಟುಮತ ಹಾಕಬಹುದು. ನಾಯಕರು ಶೇ.70 ಮತ ಹಾಕಬಹುದು. ಉಪ್ಪಾರರು ಶೇ.80 ಹಾಕಬಹುದು. ಪರಿಶಿಷ್ಟರು ಶೇ.80 ಹಾಕಬಹುದು. ಇದರಲ್ಲಿ ವ್ಯತ್ಯಾಸವಿರಬಹುದು. ಆದರೆ ಕಾಂಗ್ರೆಸ್‌ಗೆ ಎಲ್ಲ ಸಮುದಾಯಗಳ ಮತಗಳು ದೊರೆಯುತ್ತವೆ.

ಸೋಮಣ್ಣ ಅವರನ್ನು ಪ್ರತಿಸ್ಪರ್ಧಿಯಾಗಿ ಹೇಗೆ ನೋಡುವಿರಿ?

ಸೋಮಣ್ಣ ಆರ್‌ಎಸ್‌ಎಸ್‌ನವರ ಒತ್ತಡಕ್ಕೆ ಮಣಿದು ವರುಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಲ್ಲಿ ಸ್ಪರ್ಧಿಸುವ ಇಚ್ಛೆ ಸೋಮಣ್ಣಗೆ ಇರಲಿಲ್ಲ. ಈ ಆರ್‌ಎಸ್‌ಎಸ್‌ನವರು ಸೋಮಣ್ಣನ ಬಳಿ ದುಡ್ಡಿದೆ ಅಂತ ಹೇಳಿ ವರುಣದಲ್ಲಿ ನಿಲ್ಲಿಸಿದ್ದಾರೆ.

ವರುಣ ಹಾಗೂ ಶಿಕಾರಿಪುರ ಕ್ಷೇತ್ರಗಳಲ್ಲಿ ನಿಮ್ಮ ಮತ್ತು ಯಡಿಯೂರಪ್ಪ ನಡುವೆ ಒಳ ಒಪ್ಪಂದ ಆಗಿದೆ ಅಂತ ಕುಮಾರಸ್ವಾಮಿ ಆರೋಪಿಸುತ್ತಾರೆ?

ನಾನು ನನ್ನ ರಾಜಕೀಯ ಜೀವನದಲ್ಲಿ ಇದು ಸೇರಿದಂತೆ 14 ಚುನಾವಣೆಗಳನ್ನು ಎದುರಿಸಿದ್ದೇನೆ. ಯಾವತ್ತೂ ಪ್ರತಿಪಕ್ಷಗಳ ಜತೆ ಮಾತು ಕೂಡ ಆಡಿಲ್ಲ. ಯಾರ ಮನೆಗೂ ನಾನು ಯಾವತ್ತೂ ಹೋಗಿಲ್ಲ. ಏನಾದರೂ ಜನರ ಕೆಲಸ ಇದ್ದರೆ ಫೋನ್‌ ಮಾಡಿ ಹೇಳುತ್ತೇನೆಯೇ ಹೊರತು ಯಾರ ಮನೆ ಬಾಗಿಲಿಗೂ ನಾನು ಹೋದವನಲ್ಲ. ಕಳೆದ ಬಾರಿ ಯಡಿಯೂರಪ್ಪ ನಮ್ಮ ಅಭ್ಯರ್ಥಿ ಗೋಣಿ ಮಾಲತೇಶು ವಿರುದ್ಧ 51 ಸಾವಿರ ಮತಗಳಿಂದ ಗೆದ್ದಿದ್ದನಲ್ಲ ಅದು ಮಾಚ್‌ ಫಿಕ್ಸಿಂಗಾ? ಕುಮಾರಸ್ವಾಮಿ ರಾಜಕೀಯಕ್ಕಾಗಿ ಏನೋ ಹೇಳುತ್ತಾರೆ.

ನೀವು ವರುಣದಲ್ಲಿ ಜೆಡಿಎಸ್‌-ಬಿಜೆಪಿ ಒಳ ಮೈತ್ರಿ ಮಾಡಿಕೊಂಡಿವೆ ಅಂತ ಹೇಳುತ್ತಿದ್ದೀರಿ?

ಸಾಮಾನ್ಯವಾಗಿ ಪರಿಶಿಷ್ಟನಾಯಕರು ಮೀಸಲು ಕ್ಷೇತ್ರಗಳಲ್ಲೇ ಸ್ಪರ್ಧಿಸುತ್ತಾರೆ. ಜನರಲ್‌ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನಗೆ ನೆನಪಿದ್ದಂತೆ ಈ ಹಿಂದೆ ಕೆ.ಎಚ್‌.ರಂಗನಾಥ್‌ ಅವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅದು ಬಿಟ್ಟರೆ ಬೇರೆ ಯಾರೂ ಸ್ಪರ್ಧಿಸಿಲ್ಲ. ಜೆಡಿಎಸ್‌ನವರು ವರುಣದಲ್ಲಿ ಅಭಿಷೇಕ್‌ ಅನ್ನೋರಿಗೆ ಟಿಕೆಟ್‌ ಘೋಷಣೆ ಮಾಡಿದ್ದರು. ಅನಂತರ ಪರಿಶಿಷ್ಟಸಮುದಾಯದ ನಾಯಕ ಭಾರತಿಶಂಕರ್‌ ಅವರಿಗೆ ಕೊಟ್ಟರು. ಅವರು ನರಸೀಪುರದಲ್ಲಿ ಹಿಂದೆ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದವರು. ಅವರಿಗೆ ಟಿ.ನರಸೀಪುರದಲ್ಲೇ ಟಿಕೆಟ್‌ ನೀಡಿದ್ದರೆ ಒಪ್ಪಬಹುದಿತ್ತು. ಆದರೆ, ವರುಣದಲ್ಲಿ ನಿಲ್ಲಿಸುವುದಕ್ಕೆ ಕಾರಣವೇನು? ಪರಿಶಿಷ್ಟರ ಮತಗಳನ್ನು ಡಿವೈಡ್‌ ಮಾಡಲಿ ಎಂದೇ ತಾನೆ.

ಟಿಕೆಟ್‌ ಹಂಚಿಕೆ ನಿಮಗೆ ಸಮಾಧಾನ ತಂದಿದೆಯೇ?
ನಾವೇ ಮಾಡಿರೋದಲ್ವ. ಸಮಾಧಾನ ಇಲ್ಲದೆ ಮಾಡುತ್ತೇವೆಯೇ?
ಪಟ್ಟಿಈ ಪರಿ ವಿಳಂಬ ಆಗಲು ಇಂಟರ್ನಲ್‌ ಫೈಟಿಂಗ್‌ ಕಾರಣವಂತೆ?

ಆ ತರಹ ಫೈಟ್‌ ಏನೂ ಇರಲಿಲ್ಲ. ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಂದೇ ಪಟ್ಟಿಯಲ್ಲಿ ಪ್ರಕಟ ಮಾಡಲು ಆಗುವುದಿಲ್ಲ. ಏಕೆಂದರೆ, ರಾಜಕೀಯ ತಂತ್ರಗಾರಿಕೆಯೂ ಇರುತ್ತದೆ. ಈಗ ಮಾನ್ವಿಯಲ್ಲಿ ನಾವು ಟಿಕೆಟ್‌ ನೀಡಲಿಲ್ಲ ಅಂತ ಬಿ.ವಿ.ನಾಯಕ್‌ ಒಂದೇ ದಿನದಲ್ಲಿ ಬಿಜೆಪಿಗೆ ಹೋಗಿ ಟಿಕೆಟ್‌ ಪಡೆಯಲಿಲ್ಲವೇ. ಇಂತಹದ್ದು ಆಗಬಾರದು ಅಂತ ವಿಳಂಬ ಮಾಡಿರುತ್ತೇವೆ.

ಕಡೆಯ 10-15 ಕ್ಷೇತ್ರಗಳ ವಿಚಾರದಲ್ಲಿ ನಿಮ್ಮ ಹಾಗೂ ಡಿ.ಕೆ. ಸಹೋದರರ ನಡುವೆ ತೀವ್ರ ಟಸಲ್‌ (ತಿಕ್ಕಾಟ) ಇತ್ತಂತೆ?

ಯಾವ ಟಸಲ್‌ ಆಗಲಿಲ್ಲ. ಅದು ಕೇವಲ ತಂತ್ರಗಾರಿಕೆ. ಐದಾರು ಕ್ಷೇತ್ರಗಳ ಬಗ್ಗೆ ಸ್ವಲ್ಪ ಪೈಪೋಟಿಯಿತ್ತು ಅಷ್ಟೇ. ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅತ್ಯಂತ ಸುಲಲಿತವಾಗಿ ಆಯ್ಕೆ ಮಾಡಿದೆವು.

ಅರಕಲಗೂಡು ಕ್ಷೇತ್ರ ತಿಕ್ಕಾಟದ ವೇಳೆ ಸಂಸದ ಡಿ.ಕೆ.ಸುರೇಶ್‌ ರಾಜೀನಾಮೆಗೆ ಮುಂದಾಗಿದ್ದರು ಅಂತ ವದಂತಿಯಿದೆ?

ಆ ವಿಷಯ ನನಗೇನೂ ಗೊತ್ತಿಲ್ಲ. ನಾನು ಅರಕಲಗೂಡು ಕ್ಷೇತ್ರಕ್ಕೆ ಕೃಷ್ಣೇಗೌಡರಿಗೆ ಕೊಡಬೇಕು. ಆತ 100ಕ್ಕೆ 100ರಷ್ಟು ಗೆಲ್ಲುತ್ತಾನೆ ಎಂದು ಹೇಳಿದ್ದೆ. ಅವರು (ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌) ಶ್ರೀಧರ್‌ ಗೌಡಗೆ ಕೊಡಬೇಕು ಅಂತ ಹೇಳಿದರು. ಅಂತಿಮವಾಗಿ ಹೈಕಮಾಂಡ್‌ ಅವರು ಶ್ರೀಧರ್‌ಗೌಡ ಅವರಿಗೆ ಕೋಡೋಣ ಅಂತ ಹೇಳಿದರು. ಆಯ್ತು ಕೊಡಿ ಅಂತ ಹೇಳಿದೆ. ಅಷ್ಟೇ.

ಚುನಾವಣೆಗೆ ಇನ್ನೂ ಕೇವಲ 20 ದಿನ ಇದೆ. ನಿಮ್ಮ ಪ್ರಕಾರ ಕಣ ಹೇಗಿದೆ?

ಕರ್ನಾಟಕ ರಾಜ್ಯಾದ್ಯಂತ ತ್ರಿಕೋನ ಸ್ಪರ್ಧೆ ಇರುವುದಿಲ್ಲ. ದಕ್ಷಿಣ ಕರ್ನಾಟಕದ ಆರೇಳು ಜಿಲ್ಲೆಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತದೆ. ಉಳಿದಂತೆ ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸ್ಪರ್ಧೆಯಿರುತ್ತದೆ. ಜೆಡಿಎಸ್‌ ಅಲ್ಲಿ ಇಲ್ಲ. ಜೆಡಿಎಸ್‌ನವರು ನಾವು ಹಾಗೂ ಬಿಜೆಪಿಯಿಂದ ಯಾರಾರ‍ಯರು ಟಿಕೆಟ್‌ ಸಿಗದೆ ಹೊರಬರಬಹುದು ಅಂತ ಕಾದಿದ್ದು, ಆ ರೀತಿ ಸಿಕ್ಕವರನ್ನು ಅಭ್ಯರ್ಥಿ ಮಾಡಿದ್ದಾರೆæ. ಆದರೆ, ಜನರು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ನಾವು ನೂರಕ್ಕೆ ನೂರರಷ್ಟುಅಧಿಕಾರಕ್ಕೆ ಬರುತ್ತೇವೆ. ನಾವು 130ರಿಂದ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ.

ಆದರೆ, ಸರ್ವೇಗಳು ಬೇರೆಯದ್ದೇ ಹೇಳುತ್ತಿವೆಯಲ್ಲ?

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದಿಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ಇರಲು ಸಾಧ್ಯವಿಲ್ಲ. ಸುಭದ್ರ ಸರ್ಕಾರ ಇರದಿದ್ದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇದು ಜನರಿಗೆ ಗೊತ್ತಿದೆ. ಹೀಗಾಗಿ ಜನರು ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟಬಹುಮತ ನೀಡುತ್ತಾರೆ.

ವರುಣಾದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಸಚಿವ ಅಶ್ವತ್ಥನಾರಾಯಣ ಭವಿಷ್ಯ

ರಾಹುಲ್‌ ಗಾಂಧಿ ಅವರು, ಕಾಂಗ್ರೆಸ್‌ಗೆ ಸರಳ ಬಹುಮತ ಸಾಕಾಗಲ್ಲ. 150 ಸೀಟು ಬೇಕೇ ಬೇಕು. ಇಲ್ಲದಿದ್ದರೆ ಬಿಜೆಪಿ...

(ಪ್ರಶ್ನೆ ತುಂಡರಿಸಿ) ಇಲ್ಲ. ಪ್ರತಿ ಬಾರಿಯೂ ಆಪರೇಷನ್‌ ಕಮಲ ಮಾಡಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಕಳೆದ ಬಾರಿ ಬಿಜೆಪಿ 104 ಸೀಟು ಪಡೆದಿತ್ತು. 10 ರಿಂದ 15 ಸ್ಥಾನಗಳ ಕೊರತೆಯಿತ್ತು. ಹೀಗಾಗಿ ಆಪರೇಷನ್‌ ಕಮಲ ಮಾಡಿ ಸಕ್ಸಸ್‌ ಆದರು. ಆದರೆ, ಈ ಬಾರಿ ಬಿಜೆಪಿಗೆ 60 ರಿಂದ 65 ಸೀಟುಗಳು ಗೆದ್ದರೆ ಅದೇ ಹೆಚ್ಚು. ಅಷ್ಟುಕಡಿಮೆ ಸಂಖ್ಯೆಯಾದಾಗ ಆಪರೇಷನ್‌ ಕಮಲ ಮಾಡಿ 113 ಸಂಖ್ಯೆ ಮುಟ್ಟಲು ಸಾಧ್ಯವಿಲ್ಲ. ನನ್ನ ಪ್ರಕಾರ, ಈ ಚುನಾವಣೆಯಲ್ಲಿ 1. ಅತಂತ್ರ ವಿಧಾನಸಭೆ ಆಗೋದಿಲ್ಲ. 2. ಕಾಂಗ್ರೆಸ್‌ಗೆ ಸರಳ ಬಹುಮತ ಬರುತ್ತದೆ. 3. ಬಿಜೆಪಿಯವರು ಆಪರೇಷನ್‌ ಕಮಲ ಮಾಡಲು ಮುಂದಾದರೂ ಅದು ಯಶಸ್ವಿಯಾಗುವುದಿಲ್ಲ.

ಕುಟುಂಬ ರಾಜಕಾರಣ ವಿರೋಧಿಸುತ್ತೇನೆ ಎನ್ನುತ್ತೀರಿ, ಆದರೆ ಮೊಮ್ಮಗ ನನ್ನ ಉತ್ತರಾಧಿಕಾರಿ ಎಂದಿದ್ದೀರಿ, ಇದು ಸರಿಯೇ?

ರಾಜಕಾರಣ ವಂಶಪಾರಂಪರ್ಯ ಆಗಬಾರದು. ಆದರೆ, ಯೋಗ್ಯತೆ ಇದ್ದು, ಜನರು ಒಪ್ಪಿಕೊಂಡು ರಾಜಕಾರಣಕ್ಕೆ ಬಂದರೆ ತಪ್ಪಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಒಪ್ಪಿಗೆ ಯಾರಿಗೆ ಸಿಗುತ್ತದೆಯೋ ಅವರು ನಾಯಕರಾಗಬಹುದು. ನಾನು ಈಗ ಚುನಾವಣೆಗೆ ನಿಲ್ಲುತ್ತಿರುವುದು ನನ್ನ ಮಗ ಡಾ.ಯತೀಂದ್ರನ ಕ್ಷೇತ್ರದಲ್ಲಿ. ನನ್ನ ಮಗ ಈ ಬಾರಿ ಚುನಾವಣೆಗೆ ನಿಲ್ಲುತ್ತಿಲ್ಲ. ನನ್ನ ನಂತರ ಯತೀಂದ್ರ ರಾಜಕಾರಣದಲ್ಲಿರುತ್ತಾರೆ. ಅದಾಗಿ ಎಂಟ್ಹತ್ತು ವರ್ಷಗಳ ನಂತರ ಮೊಮ್ಮಗನನ್ನು ಜನ ಒಪ್ಪಿದರೆ ಆತ ರಾಜಕಾರಣಕ್ಕೆ ಬರುತ್ತಾನೆ ಎಂದು ಹೇಳಿದ್ದೇನೆಯೇ ಹೊರತು ಕುಟುಂಬ ರಾಜಕಾರಣ ಇರಬೇಕು ಎಂದು ಎಲ್ಲೂ ಹೇಳಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್