ಕೋವಿಡ್ ಸಮಯದಲ್ಲಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಂದಿದ್ರಾ, ಬಿಜೆಪಿ ಅವರು ಬಂದಿದ್ರಾ? ಇಲ್ಲ, ಮನೆ ಮನೆಗೆ ಬಂದಿದ್ದು ನಾನು, ಡಿಕೆ ಸುರೇಶ್ ಇಬ್ಬರೇ. ನಿಮ್ಮದು ಟೂರಿಂಗ್ ಟಾಕೀಸ್ ರಾಜಕಾರಣ.. ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ರಾಮನಗರ (ಆ.4): ಭೋವಿ ನಿಗಮ, ಟ್ರಕ್ ಟರ್ಮಿನಲ್ ಹಗರಣದಲ್ಲಿ ಯಾಕೆ ನಿಮ್ಮ ಸಿಎಂ, ಮಂತ್ರಿಗಳು ರಾಜೀನಾಮೆ ಕೊಡಲಿಲ್ಲ? ನಿಮ್ಮ ಪಕ್ಷದವರೇ ಏನು ಹೇಳಿದ್ರು ಅಂತಾ ಗೊತ್ತಿಲ್ವ? ಅಮಿತ್ ಶಾ, ಮೋದಿ ಬಗ್ಗೆ ಕುಮಾರಸ್ವಾಮಿ ಏನು ಮಾತಾಡಿದ್ರು ಅಂತಾ ನಾವು ತೋರಿಸಬೇಕಾ? ಎಂದು ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ಈ ಹಿಂದೆ 'ಅಪ್ಪ-ಮಗನ ನಂಬಬೇಡ ಹುಷಾರಾಗಿರು ಅಂತಾ ಯಡಿಯೂರಪ್ಪ ಹೇಳಿದ್ರು. ಈಗ ನೀವೇ ಇಬ್ರು ತಬ್ಬಾಡ್ಕೊಂಡಿದ್ದೀರಿ. ಕುಮಾರಸ್ವಾಮಿ ಹೇಳ್ತಾರೆ, ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ, ಭಾಗ ಆಗಿಬಿಟ್ಟಿದ್ದೀವಿ ಅಂತಾ ನಾನು ಪೆನ್‌ಡ್ರೈವ್ ಹಂಚಿದ್ದೇನೆಂದು ಹೇಳಿದ್ರಿ. ನಾನು ಇಂತಹ ನೀಚ ಕೆಲಸ ಮಾಡೊಲ್ಲ. ಏನಿದ್ರೂ ನಾನು ಫೇಸ್ ಟು ಫೇಸ್ ಫೈಟರ್. ನನ್ನ ವಿರುದ್ಧ ಒಮ್ಮೆ ಸೋತಿದ್ರಿ. ಬೇಕಾದ್ರೆ ಇನ್ನೊಮ್ಮೆ ಫೈಟ್ ಮಾಡೋಣ ಬಾ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.
'ಕಾಂಗ್ರೆಸ್‌ಗೆ ಮಾನ ಮಾರ್ಯಾದೆ ಇದ್ಯಾ?' ಜನಾಂದೋಲ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಎಡವಟ್ಟು!
ಮುಂದೆ ಚನ್ನಪಟ್ಟಣ ಎಲೆಕ್ಷನ್ ಬರುತ್ತೆ. ಯಾರೇ ಅಭ್ಯರ್ಥಿ ಆದ್ರೂ ನಾನು, ಸಿದ್ದರಾಮಯ್ಯ ಅವರೇ ಅಭ್ಯರ್ಥಿ ಅಂತಲೇ ತಿಳ್ಕೊಳ್ಳಿ. ಇಡೀ ದೇಶದ ಜನ ನಿಮ್ಮನ್ನು ನೋಡ್ತಾ ಇದ್ದಾರೆ. ನಾವೆಲ್ಲಾ ಮೇಕೆದಾಟು ಪಾದಯಾತ್ರೆ ಮಾಡಿದ್ವಿ. ನೀವು ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡ್ತಾ ಇದ್ದೀರಿ. ನಮ್ಮ ಸರ್ಕಾರ ಬಂದ್ರೆ ಐದೇ ನಿಮಿಷಕ್ಕೆ ಮೇಕೆದಾಟು ಯೋಜನೆಗೆ ಸೈನ್ ಹಾಕಿಸ್ತೀನಿ ಅಂದ್ರಿ. ಅಧಿಕಾರಕ್ಕೆ ಬಂದಿದೆ. ನೀವು ಮಂತ್ರಿಗಳೂ ಆಗಿದ್ದೀರಿ ಹೇಳಿ ಈಗ ಮೇಕೆದಾಟುಗೆ ಅನುಮತಿ ಕೊಡಿಸಿದ್ರಾ ಕುಮಾರಸ್ವಾಮಿ ಅವರೇ ಎಂದು ಪ್ರಶ್ನಿಸಿದರು.
ರಾಜ್ಯದ ಜನರ ಮುಂದೆ ಇವರ ನವರಂಗಿ ಬಣ್ಣ ನೋಡಬೇಕು. ಮಂಡ್ಯ ಸಮಾವೇಶದಲ್ಲಿ ದೊಡ್ಡ ಸ್ಕ್ರೀನ್ ಹಾಕಿ ಇವರು ಹೇಳಿರೋ ಸ್ಟೇಟ್ ಮೆಂಟ್ ಜನ ನೋಡಬೇಕು. ಯಡಿಯೂರಪ್ಪ ಅವರೇ ನೀವು ಅಂದು ಯಾಕೆ ನೀವು ಕಣ್ಣೀರು ಹಾಕಿದ್ರಿ ಅಂತಾ ಹೇಳಬೇಕು. ಯಾರು ರಾಜೀನಾಮೆ ಕೊಡಿಸಿದ್ದು ಅನ್ನೋದು ತಿಳಿಸಬೇಕು. ನಾವು ನಿಮ್ಮ ಮುಂದೆ ಪ್ರತಿದಿನ ಮೂರು ಪ್ರಶ್ನೆಗಳನ್ನು ಕೇಳ್ತಿದ್ದೀವಿ ಉತ್ತರ ಕೊಡಿ ನೋಡೋಣ. ಕೊವಿಡ್ ಸಂದರ್ಭದಲ್ಲಿ ಎಷ್ಟು ಲೂಟಿ ಹೊಡೆದಿದ್ದೀರಿ?
ಟೈಂ ಕೊಡ್ತಿನಿ ದಾಖಲೆ ತೋರಿಸಿ:
ನಾನು ಹೇಳಿರೋದ್ರಲ್ಲಿ ಏನು ಸುಳ್ಳು ಉತ್ತರ ಕೊಡಬೇಕಲ್ವಾ? ಎಷ್ಟು ಜನಕ್ಕೆ ಸೈಟ್ ಕೊಟ್ಟಿದ್ದೀರಿ, ಮನೆ ಕೊಟ್ಟಿದ್ದೀರಿ, ಕಾರ್ಯಕರ್ತರಿಗೆ ಸ್ಥಾನ ಕೊಟ್ಟಿದ್ದೀರಿ. ಬಗರ್ ಹುಕ್ಕುಂ ಸಾಗುವಳಿಯಲ್ಲಿ ಸೈಟ್ ಹಂಚಿದ್ದೀರಾ, ಎಷ್ಟು ದುಡ್ಡು ತಂದು ಅಭಿವೃದ್ಧಿ ಮಾಡಿದ್ದೀರಿ ಹೇಳಬೇಕಲ್ವಾ? ಸುಮ್ನೆ ಅಧಿಕಾರ ಉಪಯೋಗಿಸಿಕೊಂಡು ಜನರಿಗೆ ಯಮಾರಿಸಬಾರದು ಅಲ್ಲಾ, ಅವರ ಋಣ ತೀರಿಸಬೇಕು. ಎಲ್ಲರದ ಪಟ್ಟಿ ಬಿಡುಗಡೆ ಮಾಡಬೇಕು ಅಲ್ವಾ, ಟೈಮ್ ಕೊಟ್ಟಿದ್ದೀನಿ ಎಲ್ಲಾ ದಾಖಲೆ ಕೊಡಲಿ ಇದನ್ನೆಲ್ಲಾ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ನಾನು ಎಲ್ಲದಕ್ಕೂ ರೆಡಿ ಇದ್ದೇನೆ:
ಅಜ್ಜಯ್ಯನ ಮೇಲೆ ಆಣೆ ಮಾಡಿ ಹೇಳಲಿ ಪ್ರಾಮಾಣಿಕವಾಗಿ ಆಸ್ತಿ ಮಾಡಿದ್ದಾರಾ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಅದಕ್ಕೆ ಒಳ್ಳೆಯ ವೇದಿಕೆ ಸಿದ್ಧಪಡಿಸಬೇಕು. ಸುಮ್ಮನೆ ಅಲ್ಲಿ ಇಲ್ಲಿ ಮಾತನಾಡೋದಲ್ಲ. ಎಲ್ಲ ದಾಖಲೆಗಳಲ್ಲಿ ಉಳಿಯಬೇಕು. ಇದೆಲ್ಲ ಪಬ್ಲಿಕ್ ಡಿಬೇಟ್‌ನಲ್ಲಿ ಚರ್ಚೆ ಆಗಬೇಕು. ನಿಮ್ಮ ಯಾವುದಾದರೂ ಚಾನೆಲ್‌ನಲ್ಲಿ ಮಾಡಬೇಕು. ಇಲ್ಲವಾದಲ್ಲಿ ಅಸೆಂಬ್ಲಿಯಲ್ಲಿ ಮಾತನಾಡೋಣ. ಅವರ ಸಹೋದರ ಅಸೆಂಬ್ಲಿಯಲ್ಲಿ ಇದ್ದಾರೆ ಅವರ ಕೈಯಲ್ಲೇ ಉತ್ತರ ಕೊಡಿಸಲಿ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ. ಅದಕ್ಕಾಗಿಯೇ ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಿದ್ದೇನೆ. ಅವರ ಪಾಪದ ಕೊಡ ತುಂಬಿ ತುಳುಕಿ ಜನ ಯಾಕೆ ಓಡಿಸಿದ್ದಾರೆ ಅಂತಾ ಉತ್ತರ ಕೊಡಪ್ಪ ಅಂತಾ ಕೇಳಿದ್ದೀನಿ ಎಂದರು.
ಕೊವಿಡ್ ವೇಳೆ ಮನೆಮನೆಗೆ ಭೇಟಿ ನೀಡಿದ್ದು ನಾನು ಸುರೇಶ್ ಇಬ್ರೇ:
ಕೋವಿಡ್ ಸಮಯದಲ್ಲಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಂದಿದ್ರಾ, ಬಿಜೆಪಿ ಅವರು ಬಂದಿದ್ರಾ? ಇಲ್ಲ, ಮನೆ ಮನೆಗೆ ಬಂದಿದ್ದು ನಾನು, ಡಿಕೆ ಸುರೇಶ್ ಇಬ್ಬರೇ. ನಿಮ್ಮದು ಟೂರಿಂಗ್ ಟಾಕೀಸ್ ರಾಜಕಾರಣ. ಮಧುಗಿರಿ, ಮಂಡ್ಯ, ಚಿಕ್ಕಬಳ್ಳಾಪುರ, ರಾಮನಗರ, ಚನ್ನಪಟ್ಟಣ ಎಲ್ಲಕಡೆ ಹೋಗಿದ್ದೀರಿ. ಹಿಂದೆ ಬಿಜೆಪಿಯವರನ್ನೇ ಬ್ಲಾಕ್ ಮೇಲ್ ಮಾಡೋಕೆ ಹೋಗಿದ್ರಿ. ಪಾಪ ಬಿಜೆಪಿಯವ್ರು ಯೋಜನೆ ಮಾಡಿದ್ರು, ಮೈಸೂರು ಭಾಗದಲ್ಲಿ ಜನ ಬರೊಲ್ಲ ಅಂದು ನಿಮ್ಮ ಜೊತೆ ಸೇರಿ ಅವರು ಪಾದಯಾತ್ರೆ ಮಾಡ್ತಾ ಇದ್ದಾರೆ ಅಷ್ಟೇ. ನಿಮ್ಮ ಅಣ್ಣನ ಮಕ್ಕಳ ಹಗರಣ ನಡೀತಲ್ಲ ಹಾಸನದಲ್ಲಿ ಯಾಕೆ ಬಿಜೆಪಿಯವರು ಚರ್ಚೆ ಮಾಡಲಿಲ್ಲ. ಗಂಡಸ್ತನದ ಬಗ್ಗೆ ಎಲ್ಲಾ ಮಾತಾಡಿದ್ರಲ್ಲ ಪಾಪ ಆ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದು ಯಾರು ಅನ್ನೋದು ಹೇಳಬೇಕಲ್ವಾ? ನಿಮ್ಮ ಅಂಗಡಿ ಎಲ್ಲ ನನಗೆ ಗೊತ್ತಿದೆ. ನೀವು ಫ್ಯಾಕ್ಟರಿಗಳನ್ನ ಓಪನ್ ಮಾಡಿ ಜನರಿಗೆ ಒಂದು ಸೈಟ್ ಕೊಡಲಿಲ್ಲ, ಕೆಲಸ ಕೊಡಲಿಲ್ಲ ನೀವು ಆಯ್ತು ನಿಮ್ಮ ಕುಟುಂಬ ಆಯ್ತು ಅನ್ನೋ ರೀತಿ ಇದ್ದೀರಿ ಅಲ್ವ? ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ
ಚನ್ನಪಟ್ಟಣದಲ್ಲಿ ಜಮೀನು ಹುಡುಕಿದ್ದೇವೆ. ಬಡವರಿಗೆ ಸೈಟ್ ಕೊಡಲು ಜಾಗ ಗುರುತು ಮಾಡಿದ್ದೇವೆ. ಚನ್ನಪಟ್ಟಣ ಅಭಿವೃದ್ಧಿಗೆ 100 ಕೋಟಿ ಕೊಡಲು ಸಿಎಂ ಒಪ್ಪಿದ್ದಾರೆ. ಬಡಜನರಿಗೆ ಜಮೀನು ಮಂಜೂರು ಮಾಡಿ ಕೊಡ್ತೇವೆ. ಎಂಪಿ ಎಲೆಕ್ಷನ್ ನಲ್ಲಿ ಸುರೇಶ್ ಸೋತಿರಬಹುದು. ಚನ್ನಪಟ್ಟಣದಲ್ಲಿ 85 ಸಾವಿರ ಮತ ನಮಗೆ ಕೊಟ್ಟಿದ್ದೀರಿ. ನಿಮ್ಮನ್ನು ಬಿಡೋ ಪ್ರಶ್ನೆಯೇ ಇಲ್ಲ. ನಿಮ್ಮ ಕೈ ಹಿಡಿಯುತ್ತೇವೆ. ಯಾರು ಏನೇ ಮಾತಾಡಿದ್ರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಚನ್ನಪಟ್ಟಣ ಜನರಿಗೆ ಭರವಸೆ ನೀಡಿದರು.