* ಹಿಜಾಬ್, ಹಲಾಲ್ ಬಳಿಕ ಇದೀಗ ಮೈಕ್ ನಿಷೇಧದ ಕೂಗು
* ಸೀದಿಗಳ ಮೇಲಿನ ಮೈಕ್ ತೆರವಿಗೆ ಹಿಂದೂಪರ ಸಂಘಟನೆಗಳ ಆಗ್ರಹ
* ಇದಕ್ಕೆ ತೀವ್ರ ವಿರೋಧಿಸಿದ ಕಲಬುರಗಿ ಉತ್ತರ ಕಾಂಗ್ರೆಸ್ ಶಾಸಕಿ ಖನಿಜ್ ಫಾತಿಮಾ
ವರದಿ : ಶರಣಯ್ಯ ಹಿರೇಮಠ, ಕಲಬುರಗಿ
ಕಲಬುರಗಿ (ಏ.4): ಹಿಜಾಬ್, ಹಲಾಲ್ ಬಳಿಕ ಇದೀಗ ಮೈಕ್ (Loud Speaker) ನಿಷೇಧದ ಕೂಗು ಹೆಚ್ಚಾಗಿದೆ. ಮಸೀದಿಯಲ್ಲಿ (Mosques) ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಆದ್ರೆ, ಇದಕ್ಕೆ ಕಲಬುರಗಿ ಉತ್ತರ ಕಾಂಗ್ರೆಸ್ ಶಾಸಕಿ ಖನಿಜ್ ಫಾತಿಮಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಖನಿಜ್ ಫಾತಿಮಾ, ಮಸೀದಿಗಳ ಮೇಲಿನ ಮೈಕ್ ತೆರವಿಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಗ್ರಹವನ್ನು ವಿರೋಧಿಸಿದ್ದು, ಸರ್ಕಾರ ಆಡಳಿತದ ಪ್ರತಿಯೊಂದು ಕ್ಷೇತ್ರದಲ್ಲಿ ವಿಫಲವಾಗಿದೆ. ಅದನ್ನು ಮರೆಮಾಚಲು ಜನರ ಮಧ್ಯೆ ಜಗಳ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ಆಯಿತು. ಹಲಾಲ್ ಆಯಿತು. ಇದೀಗ ಮಸೀದಿಗಳ ಮೇಲೆ ಕಣ್ಣು ಬಿದ್ದಿದೆ. ಚುನಾವಣೆ ಹತ್ತಿರ ಬಂತು. ಬಿಜೆಪಿಯವರು ಒಂದಿಲ್ಲವೊಂದು ವಿವಾದ ಹುಟ್ಟಿಹಾಕ್ತಾರೆ ಎಂದು ಶಾಸಕಿ ಖನಿಜ್ ಫಾತಿಮಾ ಬಿಜೆಪಿ ವಿರುದ್ಧ ಹರಿಹಾಯ್ದರು.
ಹಿಜಾಬ್, ಹಲಾಲ್ ಆಯ್ತು, ಈಗ ಹೊಸ ಅಸ್ತ್ರ; ಮಸೀದಿ ಮೈಕ್‌ಗಳ ನಿಷೇಧಕ್ಕೆ ಒತ್ತಾಯ
ಮಸೀದಿಗಳ ಮೇಲೆ ಮೈಕ್ ನಿನ್ನೆ ಮೊನ್ನೆಯದಲ್ಲ. ಏಕಾಏಕಿ ಈ ವಿವಾದ ಯಾಕೆ ಸೃಷ್ಟಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಸರ್ಕಾರ ಈ ಬೇಡಿಕೆಗೆ ಮಣಿಯಬಾರದು ಎಂದು ಒತ್ತಾಯಿಸಿದ್ದಾರೆ.
ಅಜಾ ಹೇಳಿದ ಮೇಲೆಯೇ ಜನರು ಎಚ್ಚರವಾಗ್ತಾರೆ. ರಂಜಾನ್ ಸಂದರ್ಭದಲ್ಲಿ ಸೈರನ್ ಕೊಡೊದು ಧಾರ್ಮಿಕ ಆಚರಣೆಗಳಲ್ಲಿ ಒಂದು ಎಂದಿರುವ ಖನಿಜಾ ಫಾತಿಮಾ, ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ, ಆದರೆ ಪೂರ್ಣ ಪ್ರಮಾಣದಲ್ಲಿ ಅಜಾ ನಿಲ್ಲಿಸಲು ಆಗಲ್ಲ. ಧಾರ್ಮಿಕ ಭಾವನೆಗಳಿಗೆ ಮನ್ನಣೆ ನೀಡಿ ಮೈಕ್ ಸೌಂಡ್ ಕಡಿಮೆ ಇಟ್ಟು ಅಜಾ ಕೊಡಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಧ್ವನಿವರ್ಧಕ ನಿಷೇಧಕ್ಕೆ ಶ್ರೀರಾಮ ಸೇನೆ ಆಗ್ರಹ
ರಾಜ್ಯದಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರಗಳಲ್ಲಿರುವ ಧ್ವನಿವರ್ಧಕಗಳನ್ನು ತೆರವು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ನಾವು ಈ ಹಿಂದೆಯೇ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸಿದ್ದೇವು. ಆದರೆ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಂದಲೇ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗುತ್ತಿರುವುದು ದುರ್ದೈವ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಈಗ ಕೊನೆಯದಾಗಿ ಜಿಲ್ಲಾಧಿಕಾರಿಗಳಿಗೆ ಮುಸ್ಲಿಂ ಪ್ರಾರ್ಥನಾ ಮಂದಿರ ಮೇಲಿರುವ ಧ್ವನಿ ವರ್ಧಕ ತೆರವು ಮಾಡಿಸಲು ಮನವಿ ಪತ್ರ ನೀಡಿದ್ದೇವೆ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಶ್ರೀರಾಮ ಸೇನೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಪ್ರಮೋದ್ ಮುತಾಲಿಕ್ ಇದೇ ವೇಳೆ ಎಚ್ಚರಿಸಿದರು.
ಮಹಾರಾಷ್ಟ್ರದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕವನ್ನು ನಿಷೇಧಿಸುವಂತೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಡೆಸುತ್ತಿರುವ ಹೋರಾಟಕ್ಕೆ, ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಮಠದ ಸಿದ್ಧಲಿಂಗ ಸ್ವಾಮಿ ಬೆಂಬಲ ಘೋಷಿಸಿದ್ದಾರೆ.ಹಿಂದುಗಳ ಪವಿತ್ರ ಹಬ್ಬವಾದ ಯುಗಾದಿ ದಿನದಂದು ರಾಜ್ ಠಾಕ್ರೆ ಅವರು ಮಸೀದಿಗಳ ಮೇಲಿನ ಧ್ವನಿವರ್ಧಕವನ್ನು ಬ್ಯಾನ್ ಮಾಡುವಂತೆ ಸಂದೇಶ ನೀಡಿದ್ದಾರೆ.