
ಬೆಂಗಳೂರು (ಜ.26): ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದು ನಿಜ. ಆದರೆ, ಈಗ ನಾನು ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಇಂತಹ ಆರೋಪ ಮಾಡುತ್ತಿದ್ದಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಚುನಾವಣೆಗೆ ಮುನ್ನ ಪಕ್ಷಕ್ಕೆ ಆಹ್ವಾನಿಸಿದಾಗ ಶ್ರೀರಾಮುಲು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಆ ರೀತಿ ಆಗ ಸುಮಾರು 50 ಜನಕ್ಕೆ ಕೇಳಿದ್ದೇನೆ. ಆದರೆ, ಈಗ ನನಗೆ ಶ್ರೀರಾಮುಲು ಸಿಕ್ಕಿಯೂ ಇಲ್ಲ, ನನ್ನ ಬಳಿ ಮಾತನಾಡಿಯೂ ಇಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ನಾನು ಆಹ್ವಾನವನ್ನೂ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಈ ರೀತಿ ಮಾತನಾಡುತ್ತಿದ್ದಾನೆ ಎಂದರು. ನಾನು ಶ್ರೀರಾಮುಲು ಸಂಪರ್ಕದಲ್ಲಿರುವುದನ್ನು ಆತ ನೋಡಿದ್ದಾನೆಯೇ? ಆತ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ.
ಡಿಕೆಶಿ ಜೊತೆ ಯಾವುದೇ ಮುನಿಸಿಲ್ಲ, ಒಗ್ಗಟ್ಟಾಗಿದ್ದೇವೆ: ಸಚಿವ ಸತೀಶ್ ಜಾರಕಿಹೊಳಿ
ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ. ಆತ ಆ ಪಕ್ಷಕ್ಕೆ(ಬಿಜೆಪಿ) ಕಾಲಿಟ್ಟು ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ ಎಂದು ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದರು. ಕೆಲವು ಸಚಿವರು ಶ್ರೀರಾಮುಲು ಪಕ್ಷಕ್ಕೆ ಬಂದರೆ ಸ್ವಾಗತ ಎನ್ನುತ್ತಿದ್ದಾರಲ್ಲ ಎಂದು ಕೇಳಿದಾಗ, ನನ್ನ ಮುಂದೆ ಈ ವಿಚಾರ ಪ್ರಸ್ತಾಪವಾಗಲಿ, ಆಗ ಚರ್ಚೆ ಮಾಡೋಣ ಎಂದರು.
ಕಾಯೋದಕ್ಕೆ ಸಿದ್ಧ: ಅಭಿಮಾನಿಗಳು ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನನಗೆ ಯಾವುದೇ ಅವಸರ ಇಲ್ಲ. ನಾನು ಕಾಯೋದಕ್ಕೆ ರೆಡಿ ಎಂದು ಹೇಳಿದರು. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಕಾರ್ಯಕ್ರಮ ಮುಗಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಿಂಭಾಗದಲ್ಲಿದ್ದ ಕಾರಿನತ್ತ ತೆರಳಿದರು.
ಹಲವು ಬಾರಿ ನಾನು ತ್ಯಾಗ ಮಾಡಿದ್ದೇನೆ, ನನಗೆ ಹುದ್ದೆ ಅವಶ್ಯಕತೆ ಇಲ್ಲ: ಡಿ.ಕೆ.ಶಿವಕುಮಾರ್
ಈ ವೇಳೆ ಡಿ.ಕೆ. ಶಿವಕುಮಾರ್ ಅವರು ಜೊತೆಗೆ ಹೋಗಿ ಬೀಳ್ಕೊಟ್ಟು ಬಂದರು. ನಂತರ ಡಿ.ಕೆ.ಶಿವಕುಮಾರ ಬೆಂಬಲಿಗರು ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು. ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಅವರ ಇಚ್ಛೆ ಅವರು ಕೂಗುತ್ತಾರೆ. ಆದರೆ, ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.