
ಬಳ್ಳಾರಿ (ಜ.26): ‘ಬಿಜೆಪಿಯಲ್ಲಿಯೇ ಇರುತ್ತೇನೆ. ಪಕ್ಷ ಬಿಟ್ಟು ಎಲ್ಲೂ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಶೀಘ್ರವೇ ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜನಾರ್ದನ ರೆಡ್ಡಿ ಹಾಗೂ ನನ್ನ ನಡುವಿನ ಮಾತಿನ ಸಂಘರ್ಷದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನ್ನ ಜೊತೆ ಮಾತನಾಡಿದರು. ತರಾತುರಿಯಲ್ಲಿ ಯಾವುದೇ ರಾಜಕೀಯ ನಿಲುವು ತೆಗೆದುಕೊಳ್ಳಬೇಡಿ. ದೆಹಲಿಗೆ ಬನ್ನಿ ಮಾತನಾಡೋಣ ಎಂದು ಹೇಳಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಜರುಗಿದ ಕೋರ್ ಕಮಿಟಿಯಲ್ಲಾದ ಬೆಳವಣಿಗೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ನೀಡುವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಸಹ ಮಾತನಾಡಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ನೀವೇ ಕಾರಣ ಎಂದು ದೂರಿದ್ದ ಅಗರವಾಲ್ ಸಹ ತಮ್ಮ ಮಾತು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ದೆಹಲಿಗೆ ಹೋಗುವ ದಿನ ಖಚಿತವಾಗಿಲ್ಲ. ಶೀಘ್ರವೇ ತೆರಳುತ್ತೇನೆ. ನನಗಾಗಿರುವ ನೋವನ್ನು ರಾಷ್ಟ್ರೀಯ ನಾಯಕರ ಮುಂದೆ ಹೇಳಿಕೊಳ್ಳುತ್ತೇನೆ ಎಂದರು.
ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಸಾಧ್ಯವಾದಷ್ಟು ಬಿಜೆಪಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ದ್ರೋಹ ಬಗೆದಿಲ್ಲ. ರಾಜಕಾರಣದಲ್ಲಿ ಕ್ರೆಡಿಬಿಲಿಟಿ ಮುಖ್ಯ, ಅದನ್ನು ಕಳೆದುಕೊಳ್ಳಬಾರದು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಮಾತನಾಡಿದ್ದೇನೆ. ಇನ್ನು ಏನಿದ್ದರೂ ಪಕ್ಷದ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಮಾತಾಡುತ್ತೇನೆ. ಎಲ್ಲರೂ ನನಗೆ ಸಹಕಾರ ಕೊಡುತ್ತಿದ್ದಾರೆ. ಅವರಿಟ್ಟ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆಯುತ್ತೇನೆ ಎಂದರು. ಪಕ್ಷದ ಅಧ್ಯಕ್ಷ ವಿಜಯೇಂದ್ರ ಸಹ ಮಾತನಾಡಿದ್ದಾರೆ. ನಿಮಗೆ ಈ ರೀತಿ ಆಗಿರೋದು ನೋವಾಗಿದೆ ಎಂದಿದ್ದಾರೆ. ಎಲ್ಲವನ್ನೂ ಪಾರ್ಟಿಯವರಿಗೆ ಹೇಳಿದ್ದೇನೆ. ಪಕ್ಷದ ಎಲ್ಲರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ, ನಿಮ್ಮನ್ನು ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ಚಲುವರಾಯಸ್ವಾಮಿ
‘ಒಳ್ಳೆಯವನು ಎಂದು ಕಾಂಗ್ರೆಸ್‌ಗೆ ಕರೆದಿದ್ದಾರೆ’: ಇದೇ ವೇಳೆ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಶ್ರೀರಾಮುಲು ಒಳ್ಳೆಯವನು ಎಂಬ ಕಾರಣಕ್ಕಾಗಿಯೇ ಅವರು ಕರೆದಿದ್ದಾರೆ. ನನ್ನ ಮೇಲಿನ ಗೌರವದಿಂದ ಕರೆದಿದ್ದಾರೆ. ಕಾಂಗ್ರೆಸ್ ನಾಯಕರು ಅಭಿಮಾನದಿಂದ ಮಾತನಾಡಿಸುತ್ತಾರೆ. ನನಗೆ ಗೌರವ ಕೊಟ್ಟು ಪಕ್ಷಕ್ಕೆ ಕರೆದಿರುವ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ರೀರಾಮುಲು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.