ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು ಟಿಕೆಟ್‌ಗಾಗಿ ಈಗಿನಿಂದಲೇ ಸಾಕಷ್ಟುಪೈಪೋಟಿ ನಡೆದಿದೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಟಿಕೆಟ್‌ಗೆ ಭಾರೀ ಬೇಡಿಕೆ ಶುರುವಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ನ.18): ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು ಟಿಕೆಟ್‌ಗಾಗಿ ಈಗಿನಿಂದಲೇ ಸಾಕಷ್ಟುಪೈಪೋಟಿ ನಡೆದಿದೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಟಿಕೆಟ್‌ಗೆ ಭಾರೀ ಬೇಡಿಕೆ ಶುರುವಾಗಿದೆ. ಹಾಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.ಚುನಾವಣೆ ತಯಾರಿ ನಡೆಸಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಮೊದಲಿಗೆ ನ. 5ರಿಂದ 15ರ ವರೆಗೆ ಅವಧಿ ನಿಗದಿಪಡಿಸಿತ್ತು. ಅದನ್ನೀಗ ನ. 21ರ ವರೆಗೆ ವಿಸ್ತರಿಸಲಾಗಿದೆ. ಈ ವರೆಗೆ ಏಳು ಕ್ಷೇತ್ರಗಳಿಂದ ಬರೋಬ್ಬರಿ 40ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಶುಲ್ಕ ನಿಗದಿಪಡಿಸುವುದರಿಂದ ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಬಹುದು. ಯಾರೂ ಬೇಕಾದವರೂ ಟಿಕೆಟ್‌ಗೆ ಅರ್ಜಿ ಸಲ್ಲಿಸುವುದಿಲ್ಲ ಎಂಬ ಯೋಚನೆಯಿಂದ .2.05 ಲಕ್ಷ (.5 ಸಾವಿರ ಅರ್ಜಿಗೆ, .2 ಲಕ್ಷ ಕೆಪಿಸಿಸಿಗೆ) ನಿಗದಿಪಡಿಸಿತ್ತು. ಆದರೂ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಜತೆಗೆ ಅತ್ತ ಅರ್ಜಿ ಸಲ್ಲಿಸಿ ಬಂದಿರುವ ಆಕಾಂಕ್ಷಿಗಳು ತಮಗೆ ಈ ಸಲ ಟಿಕೆಟ್ ಖಚಿತ ಎಂದು ಬೀಗುತ್ತಿದ್ದಾರೆ. ಅಲ್ಲದೇ, ಕ್ಷೇತ್ರದಲ್ಲೂ ಈಗಲೇ ಓಡಾಡುತ್ತಾ ಜನರ ಕಷ್ಟ-ಸುಖ ಕೇಳುವ ನೆಪದಲ್ಲಿ ಪ್ರಚಾರದಲ್ಲಿ ತೊಡಗಿರುವುದು ವಿಶೇಷ.
ಹಿಂದೂ ಹೆಣ್ಮಕ್ಕಳು ಮುಸ್ಲಿಂ ಯುವಕರ ಬೆನ್ನು ಬೀಳಬೇಡಿ: ಪ್ರಮೋದ ಮುತಾಲಿಕ್
ಬೇಡಿಕೆ ಕ್ಷೇತ್ರ: ಧಾರವಾಡ ಗ್ರಾಮೀಣ, ಪಶ್ಚಿಮ, ಪೂರ್ವ, ಸೆಂಟ್ರಲ್, ಕುಂದಗೋಳ, ನವಲಗುಂದ, ಕಲಘಟಗಿ ಸೇರಿ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿವೆ. ಇವುಗಳಲ್ಲಿ ಅತ್ಯಂತ ಬೇಡಿಕೆಯ ಕ್ಷೇತ್ರವೆಂದರೆ ಕುಂದಗೋಳ. ಇಲ್ಲಿ ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿ ಶಾಸಕಿಯಾಗಿದ್ದರೂ ಇಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ವಿಶೇಷ. ಈವರೆಗೆ ಬರೋಬ್ಬರಿ 15 ಆಕಾಂಕ್ಷಿಗಳು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಕುಸುಮಾವತಿ ಶಿವಳ್ಳಿ, ಮುತ್ತಣ್ಣ ಶಿವಳ್ಳಿ, ಗೌಡಪ್ಪ ಗೌಡರ, ಎಂ.ಎಸ್. ಅಕ್ಕಿ, ಜಗದೀಶ ಉಪ್ಪಿನ, ಶಿವಾನಂದ ಬೆಂತೂರ, ಅರವಿಂದ ಕಟಗಿ, ಸುರೇಶ ಸವಣೂರ, ಚಂದ್ರಶೇಖರ ಜುಟ್ಟಲ ಸೇರಿದಂತೆ 15 ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕಿ ಇದ್ದರೂ ಭಾರೀ ಬೇಡಿಕೆ ಕ್ಷೇತ್ರವೆನಿಸಿದೆ.
ಇನ್ನೂ ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿರುವ ಎನ್.ಎಚ್. ಕೋನರಡ್ಡಿ, ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಏಳು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದು ಅತ್ಯಂತ ಪೈಪೋಟಿ ಕ್ಷೇತ್ರವೆನಿಸಿದೆ. ಕಳೆದ ಆರು ಅವಧಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ರಜತ್ ಉಳ್ಳಾಗಡ್ಡಿಮಠ, ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ಸತೀಶ ಮೆಹರವಾಡೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಶಾಕೀರ ಸನದಿ ಸೇರಿದಂತೆ ಈವರೆಗೆ ಆರು ಜನ ಅರ್ಜಿ ಸಲ್ಲಿಸಿರುವುದು ವಿಶೇಷ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಎಸ್.ಆರ್. ಮೋರೆ ಅವರ ಪುತ್ರಿ ಕೀರ್ತಿ ಮೋರೆ, ಪಾಲಿಕೆ ಸದಸ್ಯ ಮಯೂರ ಮೋರೆ, ಕಾಂಗ್ರೆಸ್‌ನ ಹಿರಿಯ ಮುಖಂಡ ದೀಪಕ ಚಿಂಚೋರೆ, ನಾಗರಾಜ ಗೌರಿ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೇ ತೀವ್ರ ಪೈಪೋಟಿ ಇರುವ ಕಲಘಟಗಿ ಕ್ಷೇತ್ರಕ್ಕೆ ಟಿಕೆಟ್ ಬಯಸಿ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಜಿ ಸಚಿವ ಸಂತೋಷ ಲಾಡ್ ಅರ್ಜಿ ಸಲ್ಲಿಸಿದ್ದಾರೆ. ತಮಗೇ ಟಿಕೆಟ್ ಖಚಿತ ಎಂಬ ವಿಶ್ವಾಸ ಇಬ್ಬರದ್ದು. ಪೂರ್ವ ಕ್ಷೇತ್ರದಿಂದ ಈವರೆಗೆ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಹೊರತುಪಡಿಸಿ ಬೇರೆ ಯಾರು ಅರ್ಜಿ ಸಲ್ಲಿಸಿಲ್ಲ.
Viveka Scheme: ವಿವೇಕ ಯೋಜನೆಯಿಂದ ಶಿಕ್ಷಣ ಕ್ರಾಂತಿ: ಸಚಿವ ಮುನೇನಕೊಪ್ಪ
ಇನ್ನೂ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇಸ್ಮಾಯಿಲ್ ತಮಟಗಾರ ಅರ್ಜಿ ಸಲ್ಲಿಸಿದ್ದಾರೆ. ವಿನಯ್ ಕುಲಕರ್ಣಿಗೆ ಸದ್ಯ ಧಾರವಾಡ ಜಿಲ್ಲೆಗೆ ಪ್ರವೇಶವನ್ನು ಕೋರ್ಚ್ ನಿಷೇಧಿಸಿದೆ. ಆದರೂ ಚುನಾವಣೆ ಒಳಗಾಗಿ ಕೋರ್ಚ್‌ನಿಂದ ಅನುಮತಿ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ ಕುಲಕರ್ಣಿ. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಲುಜೋರಿನಿಂದ ತಯಾರಿ ನಡೆಯುತ್ತಿರುವುದಂತೂ ಸತ್ಯ. ಅರ್ಜಿ ಸಲ್ಲಿಸಲು ಇನ್ನು ಅವಧಿ ಇರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ಇನ್ನಷ್ಟುಹೆಚ್ಚಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.