ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಭೇಟಿ ಮಾಡಿದ ನಟ ಶಿವರಾಜ್‌ಕುಮಾರ್ ದಂಪತಿ ಸಿಎಂಗೆ ಅಭಿನಂದನೆ ತಿಳಿಸಿದರು. ಜೊತೆಗೆ ತಮ್ಮ ಸಚಿವ ಸಂಪುಟದಲ್ಲಿ ಗೀತಾ ಶಿವರಾಜ್‌ಕುಮಾರ್ ಅವರ ಸಹೋದರ ಸೊರಬ ಶಾಸಕ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೂ ಧನ್ಯವಾದ ಹೇಳಿದರು
ಬೆಂಗಳೂರು(ಜೂ.14): ಸ್ಯಾಂಡಲ್‌ವುಡ್‌ನ ಖ್ಯಾತ ನಟ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಅವರೊಂದಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಭೇಟಿ ಮಾಡಿದ ನಟ ಶಿವರಾಜ್‌ಕುಮಾರ್ ದಂಪತಿ ಸಿಎಂಗೆ ಅಭಿನಂದನೆ ತಿಳಿಸಿದರು. ಜೊತೆಗೆ ತಮ್ಮ ಸಚಿವ ಸಂಪುಟದಲ್ಲಿ ಗೀತಾ ಶಿವರಾಜ್‌ಕುಮಾರ್ ಅವರ ಸಹೋದರ ಸೊರಬ ಶಾಸಕ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೂ ಧನ್ಯವಾದ ಹೇಳಿದರು ಎಂದು ತಿಳಿದು ಬಂದಿದೆ.
ನಾನೇಕೆ ಮುಖ್ಯಮಂತ್ರಿ ಆಗಬಾರದು?: ಹೊಸ ಚರ್ಚೆಗೆ ನಾಂದಿ ಹಾಡಿದ ಪರಮೇಶ್ವರ್..!
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಅವರು ಕೂಡ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ವಿವಿಧೆಡೆ ಪ್ರಚಾರ ನಡೆಸಿದ್ದಕ್ಕಾಗಿ ನಟ ಶಿವರಾಜ್‌ಕುಮಾರ್ ಅವರನ್ನು ಅಭಿನಂಧಿಸಿದ್ದಾರೆ. ಈ ವೇಳೆ ಗೀತಾ ಅವರ ಸಹೋದರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಉಪಸ್ಥಿತರಿದ್ದರು.
ಲೋಕಸಭೆಗೆ ಗೀತಾ?:
ಈ ಮಧ್ಯೆ, ಮೇಲ್ನೋಟಕ್ಕೆ ಇದೊಂದು ಸ್ನೇಹ ಹಾಗೂ ಪರಸ್ಪರ ಅಭಿನಂದನಾಪೂರ್ವಕ ಭೇಟಿ ಎನ್ನಿಸಿದರೂ ಕೆಲ ರಾಜಕೀಯ ವಿಚಾರಗಳ ಚರ್ಚೆಗಳೂ ನಡೆದಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿಯಾದ ಗೀತಾ ಅವರು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.