
ಬೆಂಗಳೂರು(ಜೂ.14): ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬಗೆಹರಿದು ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆದು ಆಡಳಿತ ಹಳಿಗೆ ಬರುತ್ತಿದೆ ಎನ್ನುವಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ‘ನಾನೇಕೆ ಮುಖ್ಯಮಂತ್ರಿ ಆಗಬಾರದು’ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ದಲಿತ ಸಂಘಟನೆಗಳಿಂದ ಆಯೋಜಿಸಿದ್ದ ‘ಪರಿಶಿಷ್ಟಸಮುದಾಯಗಳ ಸಹೋದರತ್ವ ಸಮಾವೇಶ’ದಲ್ಲಿ ಮಾತನಾಡಿದ ಅವರು, ನಾನೂ ಮುಖ್ಯಮಂತ್ರಿ ಏಕೆ ಆಗಬಾರದು ಎಂದು ಮಾರ್ಮಿಕವಾಗಿ ನುಡಿದರು.
ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ: ಸಚಿವ ಪರಮೇಶ್ವರ್
ದಲಿತರು ಎಡ-ಬಲ ಎನ್ನುತ್ತಿದ್ದರೆ ಏನೂ ಆಗುವುದಿಲ್ಲ. ಒಗ್ಗಟ್ಟಿದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ನಾನು ಏಕೆ ಮುಖ್ಯಮಂತ್ರಿ ಆಗಬಾರದು? ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ ಏಕೆ ಮುಖ್ಯಮಂತ್ರಿ ಆಗಬಾರದು? ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಉನ್ನತ ಸಚಿವ ಸ್ಥಾನ ನಿರ್ವಹಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ಅವಕಾಶಗಳನ್ನು ತಪ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ಮಂಡನೆಗೆ ಕ್ರಮ:
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ನನ್ನ ಅಧ್ಯಕ್ಷತೆಯಲ್ಲೇ ರಚಿಸಲಾಗಿತ್ತು. ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲೇ ಮಂಡಿಸುತ್ತೇವೆ ಎಂದು ತಿಳಿಸಿದ್ದೇನೆ. ಅದರಂತೆ ಮುಂಬರುವ ಅಧಿವೇಶನದಲ್ಲೇ ವರದಿ ಮಂಡಿಸಲು ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಪೊಲೀಸರಿಗೆ ಕುಂಕುಮ, ವಿಭೂತಿ ನಿಷೇಧಿಸಿಲ್ಲ: ಗೃಹ ಸಚಿವ ಪರಮೇಶ್ವರ್
ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮನುವಾದವನ್ನು ನಾವು ಸೋಲಿಸಬೇಕಿದೆ. ಜಾತಿ, ಧರ್ಮ, ವರ್ಣ ಮರೆತು ಪ್ರಜಾಪ್ರಭುತ್ವದ ಉಳಿವಿಗಾಗಿ ಒಗ್ಗೂಡಬೇಕಾಗಿದೆ. ಮುಂದಿನ ಪೀಳಿಗೆಯು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಚಂದ್ರಪ್ಪ, ಪ್ರಚಾರ ಸಮಿತಿ ಸಹ ಅಧ್ಯಕ್ಷ ಎಚ್.ಪಿ.ಸುಧಾಮ್ ದಾಸ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಗೋಪಾಲ್ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.