ಬಿಎಸ್‌ವೈ 75ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ನಾನು ಹೋಗಿ ಶುಭ ಕೋರಿದ್ದೆ: ಸಿದ್ದರಾಮಯ್ಯ
ಕಲಬುರಗಿ(ಜು.15): ನಮ್ಮ ಸ್ನೇಹಿತರು, ಬೆಂಬಲಿಗರು ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ನಮ್ಮ ಹುಟ್ಟುಹಬ್ಬ ನಾವು ಮಾಡ್ಕೋತಿದ್ರೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ನನ್ನ ಜನ್ಮದಿನದ ಬಗ್ಗೆ ಮಾತನಾಡ್ತಾ ಇದ್ದಾರೆ. ಈ ಹಿಂದೆ ಯಡಿಯೂರಪ್ಪ ಸಹ 75ನೇ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲವಾ? ಆಗ ನಾನೂ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿ ಶುಭಕೋರಿ ಬಂದಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಎಂದು ಕರೆದಿದ್ದೇ ಮಾಧ್ಯಮದವರು. ಅದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮಯ್ಯನವರ 75ನೇ ಅಮೃತ ಉತ್ಸವ ಅಷ್ಟೇ. ನನ್ನ ಹುಟ್ಟುಹಬ್ಬ ಆಚರಣೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾರಿಗೂ ನಡುಕ ಇಲ್ಲ. ನಮ್ಮವರಲ್ಲಿ ಯಾಕೆ ನಡುಕ ಇರುತ್ತೆ, ಇದೆಲ್ಲಾ ಸುಳ್ಳು ಎಂದರು.
ಆರೆಸ್ಸೆಸ್ ಆಳ- ಅಗಲ:
ದೇವನೂರು ಮಹಾದೇವ ಅವರು ಆರೆಸ್ಸೆಸ್ ಆಳ- ಅಗಲ ಪುಸ್ತಕದಲ್ಲಿ ಸಾವರ್ಕರ್, ಹೆಡಗೇವಾರು, ಆರ್‌ಎಸ್‌ಎಸ್ ಯಾವ ಕಾಲದಲ್ಲಿ ಏನ್ ಏನ್ ಹೇಳಿದ್ದಾರೋ ಅದನ್ನೇ ಅವರು ಬರೆದಿದ್ದಾರೆ. ಆದ್ರೆ ಸತ್ಯ ಹೇಳಲು ಬಂದವರ ಮೇಲೆ ಆರೋಪ ಮಾಡೋದು, ಕೇಸ್ ಹಾಕೋದನ್ನು ಬಿಜೆಪಿಯವರು ಮಾಡ್ತಾರೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮೂಲಭೂತ ಹಕ್ಕಿಗೆ ನಿರ್ಬಂಧ ಹೇರಲು ಇವರು ಯಾರು ಎಂದು ಕಿಡಿಕಾರಿದರು.
ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ
ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಬಂಧಿತವಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮಂಪರು ಪರೀಕ್ಷೆ ನಡೆಸಬೇಕು. ಕೇವಲ ಅಧಿಕಾರಿಗಳನ್ನು ಮಾತ್ರ ಬಂಧಿಸಿದರೆ ಸಾಕಾಗುವುದಿಲ್ಲ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರನ್ನು ಬಂಧಿಸಬೇಕು. ಬಂಧಿತ ಅಧಿಕಾರಿ ಪಾಲ್ ಮತ್ತು ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಮಾತ್ರ ಎಲ್ಲವೂ ಹೊರಗೆ ಬರಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಅಶ್ವತ್ಥನಾರಾಯಣ ವಿರುದ್ಧ ಕಿಡಿ:
ಪಿಎಸ್‌ಐ ಹಗರಣದಲ್ಲಿ ಸಿದ್ದರಾಮಯ್ಯರೇ ಪ್ರಮುಖ ಪಾತ್ರಧಾರಿ ಎನ್ನುವ ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಾಮಂಡಲರಾದರು. ನಾನು ಸಿಎಂ ಇದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು ತಾನೇ? ಆಗ ಇವರು ಯಾಕೆ ಮಾತಾಡಲಿಲ್ಲ? ಈಗೇಕೆ ಮಾತನಾಡುತ್ತಿದ್ದಾರೆ? ಆಗ ಅಶ್ವತ್ಥನಾರಾಯಣ ಕಡುಬು ತಿನ್ನುತ್ತಿದ್ದರೇ? ಆಗ ಅವರ ಬಾಯಲ್ಲಿ ಕಡುಬು ಇತ್ತಾ? ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಪ್ರವಾಹ ಎದುರಿಸಲು ಮುಂಜಾಗ್ರತೆ ಯಾಕಿಲ್ಲ?
ಪ್ರವಾಹ ಸಮಸ್ಯೆ ಬಗ್ಗೆ ಸರ್ಕಾರ ಮುಂಚಿತವಾಗಿ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಹರಿಹಾಯ್ದರು. ಕಲಬುರಗಿಯಲ್ಲಿ ಕೆಲಕಾಲ ತಂಗಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಸಂಕಷ್ಟಕ್ಕೆ ಸಿಲುಕಿದ ನಂತರ ಕ್ರಮಕ್ಕೆ ಮುಂದಾಗುತ್ತಾರೆ.2019 ರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ .ಈಗ ಅದೇ ಗ್ರಾಮಗಳಿಗೆ ಪ್ರವಾಹ ಬರುತ್ತಿದೆ. ಮನೆ ಮತ್ತು ಜೀವ ಕಳಕೊಂಡವರಿಗೆ ಪರಿಹಾರ ಕೊಡಬೇಕು .ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಬರುವುದೇ ಇಲ್ಲ ಎಂದು ಆಕ್ಷೇಪಿಸಿದರು.