ಒಂದು ಸಲ ಹಟ ಹಿಡಿದರೆ ಬಿಡದ ಸಿದ್ದು, ಸುರ್ಜೇವಾಲಾ ಮೂಲಕ ಒತ್ತಡ ಹಾಕಿಸಿ ರಾಹುಲ್ ಗಾಂಧಿಯನ್ನು ದಾವಣಗೆರೆ ಸಮಾವೇಶಕ್ಕೆ ಬರಲು ಒಪ್ಪಿಸಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಚುನಾವಣೆಗೆ ಮುಂಚೆ ಸಿದ್ದು ಮುನಿಸಿಕೊಂಡರೆ ನಷ್ಟಹೆಚ್ಚು ಎಂದು ಲೆಕ್ಕ ಹಾಕಿಯೇ ರಾಹುಲ್ ಕೂಡ ಬರಲು ಒಪ್ಪಿದ್ದಾರೆ.
India Gate Column by Prashant Natu
ರಾಜಕಾರಣದಲ್ಲಿ ಕೆಲವರ ನಸೀಬಿನಲ್ಲಿ ಬರೀ ಪಲ್ಲಕ್ಕಿ ಹೊರುವುದೇ ಇರುತ್ತದೆ. ಇನ್ನು ಕೆಲವರಿಗೆ ಪಲ್ಲಕ್ಕಿ ಯಾರೇ ಹೊರಲಿ ಉತ್ಸವ ಮೂರ್ತಿ ಆಗುವ ಭಾಗ್ಯ ದೇವರು ಬರೆದು ಕಳುಹಿಸಿರುತ್ತಾನೆ. ಅಪರೂಪದಲ್ಲಿ ಕೆಲವೇ ಕೆಲವರು ಪಲ್ಲಕ್ಕಿ ಹೊತ್ತು ಹೊತ್ತು, ಕೊನೆಗೆ ಮೂರ್ತಿ ಆಗಿ ಮೆರೆಯುತ್ತಾರೆ. ಈಗ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆದಿರುವುದು ನಾವೇ ಉತ್ಸವ ಮೂರ್ತಿ ಆಗಬೇಕು, ಆಗ ಮಾತ್ರ ಪಲ್ಲಕ್ಕಿ ಹೊರುತ್ತೇವೆ ಎಂಬ ರೀತಿಯ ಪೈಪೋಟಿ.
ಒಮ್ಮೆ ಮುಖ್ಯಮಂತ್ರಿ ಆಗಿ ನಂತರ ಚುನಾವಣೆ ಸೋತಿರುವ ಸಿದ್ದುಗೆ 75 ವರ್ಷ ತುಂಬುತ್ತಿರುವಾಗ 2023 ಕೊನೆಯ ಅವಕಾಶ ಎನ್ನಿಸಿದೆ. ಹೀಗಾಗಿ ಜನ್ಮದಿನದ ಹೆಸರಿನಲ್ಲಿ ಲಕ್ಷಾಂತರ ಜನ ಸೇರಿಸಿ, ಹೊರಗಿನವರಿಗಿಂತ ಜಾಸ್ತಿ ಒಳಗಿನವರಿಗೆ ನಾನು ಇನ್ನೂ ಓಡುವ ಕುದುರೆ ಎಂದು ತೋರಿಸುವ ಧಾವಂತದಲ್ಲಿದ್ದಾರೆ. ಅದೇ ಶಿವಕುಮಾರ್ ಸಿದ್ದುಗೆ ಬಾಸಿಂಗ ಕಟ್ಟಲು ನಾನೇಕೆ ಚಪ್ಪರ ಹಾಕಬೇಕು ಎಂಬ ಬೇಸರದಲ್ಲಿದ್ದಾರೆ.
ನಾವಿಬ್ಬರೂ ಜೋಡೆತ್ತುಗಳಾಗಿ ಬಂಡಿ ಓಡಿಸಿದರೆ ಮಾತ್ರ ಗುರಿ ಮುಟ್ಟಬಹುದು, ಇಲ್ಲವಾದಲ್ಲಿ ದಿಲ್ಲಿಯಲ್ಲಿ ಕುಳಿತಿರುವ ಚದುರಂಗ ಚತುರರು ಈಗ ದೂರದಲ್ಲಿ ಕಾಣುತ್ತಿರುವ ಆಕಾರವನ್ನು ಕ್ಷಣಾರ್ಧದಲ್ಲಿ ಮರೀಚಿಕೆ ಮಾಡಬಲ್ಲರು ಎಂಬುದು ಇಬ್ಬರಿಗೂ ಅರ್ಥ ಆಗುತ್ತಿಲ್ಲವೇ? ರಾಜಕಾರಣವೆಂದರೆ ಸನ್ಯಾಸ ಅಲ್ಲ, ಆದರೆ ಸದಾ ಕುರುಕ್ಷೇತ್ರವೇ ನಡೆಯಬೇಕು ಎಂದೇನೂ ಇಲ್ಲ.
Maharashtra Politics: ಮಹಾರಾಷ್ಟ್ರಕ್ಕೆ ಫಡ್ನಿವೀಸ್ ಏಕೆ ಸಿಎಂ ಆಗಲಿಲ್ಲ?
ಸಿದ್ದು ಮತ್ತು ಡಿಕೆಶಿ ಸಾಮರ್ಥ್ಯ
ಸಿದ್ದು ಇವತ್ತಿನ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್‌ಗೆ ತಮ್ಮ ಹೆಸರಿನ ಮೇಲೆ ವೋಟು ತರಬಲ್ಲ ಮಾಸ್ ಲೀಡರ್. ಆದರೆ ಇವತ್ತಿನ ಚುನಾವಣೆಗಳನ್ನು ಅವಶ್ಯಕತೆಗೆ ತಕ್ಕಂತೆ ನಿಭಾಯಿಸಬಲ್ಲ ಪ್ರಬಂಧನ ಮತ್ತು ಸಂಘಟನಾ ಸಾಮರ್ಥ್ಯ ಇಲ್ಲ. ಅದೇ ಡಿ.ಕೆ.ಶಿವಕುಮಾರ್‌ಗೆ ಬೆಂಗಳೂರು ಗ್ರಾಮಾಂತರ ಬಿಟ್ಟರೆ ಹೊರಗೆ ಮತದಾರನನ್ನು ಸೆಳೆಯುವ ಶಕ್ತಿ ಕಡಿಮೆ. ಆದರೆ ಪಕ್ಷದ ಕಾರ್ಯಕರ್ತರನ್ನು ಕೆಲಸಕ್ಕೆ ಹಚ್ಚುವ, ಒಂದು ಕಡೆ ಕುಳಿತು ಚುನಾವಣೆ ನಿರ್ವಹಿಸುವ ಶಕ್ತಿ ಇದೆ. ಸಿದ್ದುಗೆ ಕುರುಬ ಮತ್ತು ಮುಸ್ಲಿಂ ಮತಗಳನ್ನು ಒಟ್ಟಿಗೆ ತರುವ ಶಕ್ತಿ ಇದೆ. ಆದರೂ ಸಿದ್ದು ಬೇಡ ಎನ್ನುವ ಕಾರಣಕ್ಕೆ ಲಿಂಗಾಯತ ಮತ್ತು ಒಕ್ಕಲಿಗರು ಕ್ಷೇತ್ರವಾರು ಕ್ರೋಢೀಕರಣಗೊಳ್ಳುವ ಸಾಧ್ಯತೆಯೂ ಇದ್ದೇ ಇದೆ.
ಅದರಲ್ಲಿ ಸ್ವಲ್ಪ ಮಟ್ಟಿಗೆ ಒಕ್ಕಲಿಗ ಮತಗಳನ್ನು ದೇವೇಗೌಡರ ಬುಟ್ಟಿಯಿಂದ ತರುವ ಶಕ್ತಿ ಇರುವುದು ಡಿಕೆಶಿಗೆ ಮಾತ್ರ. ಹಾಗೆ ನೋಡಿದರೆ ಡಿಕೆಶಿ ದೌರ್ಬಲ್ಯವೇ ಸಿದ್ದು ಸಾಮರ್ಥ್ಯ. ಸಿದ್ದು ದೌರ್ಬಲ್ಯವೇ ಡಿಕೆಶಿ ಸಾಮರ್ಥ್ಯ. ಆದರೆ ಒಂದೇ ಒರೆಯಲ್ಲಿ ಎರಡು ಕತ್ತಿಗಳು ಇರುವುದು ಸಾಧ್ಯ ಇಲ್ಲ ನೋಡಿ. ಹೀಗಾಗಿಯೇ ಹಿಂದೆ ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ, ಯಡಿಯೂರಪ್ಪ ಮತ್ತು ಅನಂತಕುಮಾರ್ ಮಧ್ಯೆ ಅತಿಹೆಚ್ಚು ಘರ್ಷಣೆಗಳು ನಡೆದವು. ಹಾಗೆ ಘರ್ಷಣೆ ಆದಾಗಲೆಲ್ಲಾ ಪಕ್ಷಗಳು ಶಿಥಿಲವಾದವು. ಒಂದೇ ವ್ಯತ್ಯಾಸ ಎಂದರೆ ಅವರು ಅಧಿಕಾರ ಬಂದ ನಂತರ ಪೈಪೋಟಿಗೆ ಬಿದ್ದರು. ಆದರೆ ಇವರು ಅಧಿಕಾರ ಬರುವ ಮುನ್ನವೇ ಘರ್ಷಣೆಗೆ ನಿಂತಿದ್ದಾರೆ.
ಡಿಕೆಶಿ ಪ್ಲಾನ್ ಏನಿತ್ತು?
2016ರಲ್ಲಿ ಒಂದು ದಿನ ಸಂಜೆಯ ಹೊತ್ತು ದಿಲ್ಲಿ ಕರ್ನಾಟಕ ಭವನದಲ್ಲಿ ಲಿಫ್ಟ್ ಹತ್ತುತ್ತಿದ್ದ ಶಿವಕುಮಾರ್ ಪತ್ರಕರ್ತರನ್ನು ನೋಡಿ ಕ್ಯಾಮರಾ ಬೇಡ, ಹಾಗೇ ಬನ್ನಿ, ಕಾಫಿ ಕುಡಿಯೋಣ ಎಂದು ಕರೆದರು. ಬಹಳ ಬೇಸರದಲ್ಲಿದ್ದರು. ನೋಡಿ, ನಾನು ಅಧ್ಯಕ್ಷನಾಗುವ ಸಮಯ ಹತ್ತಿರ ಬಂದಿದ್ದೇ ಎಲ್ಲರೂ ಸೇರಿ ಕೆಡಿಸಿಬಿಟ್ಟರು. ನನ್ನದೇ ಪಾರ್ಟಿಯವರು, ಮೀಡಿಯಾದವರು ಸೇರಿ ನನ್ನನ್ನು ವಿಲನ್ ಮಾಡಿಬಿಟ್ಟಿದ್ದೀರಿ. ನಾನು ಯಾವಾಗ ಪಕ್ಷದ ಹಿತಕ್ಕೆ ವಿರುದ್ಧ ನಡೆದುಕೊಂಡಿದ್ದೇನೆ? 2018ಕ್ಕೆ ಆಗಲ್ಲ ನನಗೆ ಗೊತ್ತು, ಆದರೆ 2023ಕ್ಕೆ ನನಗೆ ಒಂದು ಅವಕಾಶ ಸಿಗಬಹುದು ನೋಡೋಣ ಎಂದು ಮನಸ್ಸಿನಲ್ಲಿ ಇದ್ದುದ್ದನ್ನು ಹೇಳಿಕೊಂಡರು.
ಬಾಳಾಠಾಕ್ರೆ ಕಟ್ಟಿದ ಹಿಂದುತ್ವದ ಸೌಧವನ್ನು ಬಲಿ ಕೊಟ್ಟರೇ ಮಗ, ಮೊಮ್ಮಗ?
ಡಿಕೆಶಿ ಮೂಲ ಯೋಜನೆ ಪ್ರಕಾರ 2023ಕ್ಕೆ ಸಿದ್ದು, ಖರ್ಗೆ ಇಬ್ಬರೂ ಸ್ಪರ್ಧೆ ಮಾಡುವುದಿಲ್ಲ ಎಂದು ಇತ್ತು. ಈಗ ನೋಡಿದರೆ ಖರ್ಗೆ ಮುಖ್ಯಮಂತ್ರಿ ಆಗುವ ಆಸೆ ಬಿಟ್ಟಂತಿದೆ, ಆದರೆ ಸಿದ್ದು ಮತ್ತೊಮ್ಮೆ ಮುಖ್ಯಮಂತ್ರಿ ನಾನೇ ಎಂದು ಮುನ್ನುಗ್ಗುತ್ತಿದ್ದಾರೆ. ದಿಲ್ಲಿ ರಾಜಕಾರಣದಲ್ಲಿ ಪ್ರಬಂಧನ ಸಾಮರ್ಥ್ಯಕ್ಕೆ ಅಂಕಗಳು ಜಾಸ್ತಿ. ಆದರೆ ರಾಜ್ಯದ ಪಾಲಿಟಿಕ್ಸ್‌ಗೆ ಬಂದರೆ ಜನಪ್ರಿಯತೆಗೆ ಮಾರ್ಕ್ಸ್ ಜಾಸ್ತಿ. ಹೀಗಾಗಿ ಡಿಕೆಶಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ರಾಹುಲ್ ಗಾಂಧಿ ಏಕೆ ಬರುತ್ತಿದ್ದಾರೆ?
ಸಿದ್ದು ಬೆಂಬಲಿಗರು ದಾವಣಗೆರೆ ಸಮಾವೇಶ ಹಮ್ಮಿಕೊಂಡಿರುವುದೇ ಶಕ್ತಿ ಪ್ರದರ್ಶನಕ್ಕೆ ಎನ್ನುವುದು ಹೊಸ ವಿಷಯ ಏನಲ್ಲ. ಹೀಗಾಗಿ ಆ ಸಮಾವೇಶಕ್ಕೆ ರಾಹುಲ್ ಗಾಂಧಿ ಬರಲಿಕ್ಕಿಲ್ಲ ಎಂದು ಡಿಕೆಶಿ ಭಾವಿಸಿದ್ದರು. ಆದರೆ ಒಂದು ಸಲ ಹಟ ಹಿಡಿದರೆ ಬಿಡದ ಸಿದ್ದು, ರಣದೀಪ್ ಸುರ್ಜೇವಾಲಾ ಮೂಲಕ ಒತ್ತಡ ಹಾಕಿಸಿ ರಾಹುಲ್ ಗಾಂಧಿಯನ್ನು ಒಪ್ಪಿಸಿಯೇ ಬಿಟ್ಟರು. ಇವತ್ತಿನ ಸ್ಥಿತಿಯಲ್ಲಿ ಚುನಾವಣೆಗೆ ಮುಂಚೆ ಸಿದ್ದು ಮುನಿಸಿಕೊಂಡರೆ ನಷ್ಟಹೆಚ್ಚು ಎಂದು ಲೆಕ್ಕ ಹಾಕಿಯೇ ರಾಹುಲ್ ಸುತ್ತಮುತ್ತಲಿನ ನಾಯಕರು ಸಿದ್ದು ಕಾರ್ಯಕ್ರಮಕ್ಕೆ ಹೋಗೋದು ಒಳ್ಳೆಯದು ಎಂದು ಒಪ್ಪಿಸಿದ್ದಾರೆ.
ಯಾವಾಗ ರಾಹುಲ್ ದಾವಣಗೆರೆಗೆ ಬರುತ್ತೇನೆ ಎಂದರೋ ಆಗ ಡಿಕೆಶಿಗೆ ಈ ಕಾರ್ಯಕ್ರಮಕ್ಕೆ ಹೋಗದೇ ಬೇರೆ ವಿಕಲ್ಪಗಳು ಉಳಿದಿರಲಿಲ್ಲ. ಡಿಕೆಶಿ ಒಬ್ಬರೇ ಬ್ಯಾಟಿಂಗ್ ಏನೋ ಚೆನ್ನಾಗಿ ಮಾಡುತ್ತಾರೆ, ಆದರೆ ತಂಡವನ್ನು ಫೀಲ್ಡಿಂಗ್‌ಗೆ ನಿಲ್ಲಿಸೋದು ಇದೆಯಲ್ಲ, ಅಲ್ಲಿ ಸಿದ್ದು ಸದಾ ಒಂದು ಕೈ ಮುಂದು.
ಸಿದ್ದುಗೆ ಸಮುದಾಯದ ಬಲ
ಸಿದ್ದುಗೆ ಕುರುಬರ ವೋಟ್ ಬ್ಯಾಂಕ್ ಸಾಮರ್ಥ್ಯವೂ ಹೌದು, ದೌರ್ಬಲ್ಯವೂ ಹೌದು. ರಾಜ್ಯದ 170 ಕ್ಷೇತ್ರಗಳಲ್ಲಿ 8% ಇರುವ ಕುರುಬ ಸಮುದಾಯ ಸಾಲಿಡ್ ಆಗಿ ಸಿದ್ದು ಹಿಂದೆ ಇದ್ದಾರೆ. ಜೊತೆಗೆ ಸಿದ್ದುರ ಪ್ರಶ್ನಾತೀತ, ಜಾತ್ಯಾತೀತ ನಿಲುವಿನಿಂದಾಗಿ ಮುಸ್ಲಿಮರು ಸಿದ್ದು ಹೆಸರಿಗೆ ವೋಟು ಹಾಕುತ್ತಾರೆ. ಆದರೆ ಸಿದ್ದು ಪುನರಪಿ ಮುಖ್ಯಮಂತ್ರಿ ಆಗಬೇಕಾದರೆ ಕುರುಬರ ಒಟ್ಟಿಗೆ ಇತರ ಹಿಂದುಳಿದ ಮತ್ತು ದಲಿತ ಸಮುದಾಯಗಳು ಒಟ್ಟಿಗೆ ಬರಬೇಕು. 5 ವರ್ಷದ ಆಡಳಿತದಲ್ಲಿ ಸಿದ್ದು ಎಷ್ಟೇ ನಿರಾಕರಿಸಿದರೂ ಕುರುಬರಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ.
ರಾಷ್ಟ್ರಪತಿ ಚುನಾವಣೆ: ದಕ್ಷಿಣ ಭಾರತದ ವ್ಯಕ್ತಿಗೆ ಅದೃಷ್ಟ? ಆದಿವಾಸಿ ಮಹಿಳೆಗೆ ಪಟ್ಟ?
ಮತ್ತು ಮೋದಿ ವರ್ಚಸ್ಸಿನಿಂದಾಗಿ ಇತರ ಹಿಂದುಳಿದ ಸಮುದಾಯಗಳು 2018 ಮತ್ತು 2019ರಲ್ಲಿ ಬಿಜೆಪಿಯತ್ತ ಹೆಚ್ಚು ವಾಲಿವೆ. ಈಗ ಸಿದ್ದು ದಾವಣಗೆರೆ ಸಮಾವೇಶದ ಮೂಲಕ ನೀವು ಲೋಕಸಭೆಗೆ ಏನಾದರೂ ಮಾಡಿಕೊಳ್ಳಿ, 2023ಕ್ಕೆ ಹಿಂದುಳಿದ ವರ್ಗದ ಸಿದ್ದು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದರೆ ಎಲ್ಲ ಹಿಂದುಳಿದ, ದಲಿತ ಸಮುದಾಯಗಳು ಒಟ್ಟಿಗೆ ಬರಬೇಕು ಎಂದು ಮನವರಿಕೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಸಮಾವೇಶದ ಅಹಿಂದ ವರ್ಗಗಳ ಶಕ್ತಿ ಪ್ರದರ್ಶನ ನೋಡಿ ಲಿಂಗಾಯತರು ಇನ್ನೂ ಹೆಚ್ಚು ಬಿಜೆಪಿಗೆ, ಒಕ್ಕಲಿಗರು ಇನ್ನೂ ಹೆಚ್ಚು ದೇವೇಗೌಡರ ಕಡೆ ವಾಲಿಕೊಂಡರೆ 2023ಕ್ಕೆ ತಮ್ಮ ಸ್ಥಾನ ಎಲ್ಲಿ ಎಂಬ ಚಿಂತೆ ಡಿಕೆಶಿಗೆ ಆರಂಭವಾಗಿದೆ.
ಹಿರಿಯರು ಸಿದ್ದು ಜೊತೆ ಏಕಿದ್ದಾರೆ?
ಡಿ.ಕೆ.ಶಿವಕುಮಾರ್ ಬಳಿ ಸಂಘಟನಾ ಶಕ್ತಿಯನ್ನು ಕ್ರೋಢೀಕರಿಸಲು ಸೌಕರ್ಯದ ಮೂಲಗಳ ಶಕ್ತಿ, ದಿಲ್ಲಿ ಸಂಪರ್ಕದ ಶಕ್ತಿ, ಜೊತೆಗೆ ಕಾರ್ಯಕರ್ತರನ್ನು ಹಿಡಿದಿಡುವ ಶಕ್ತಿಯಿದೆ. ಆದರೆ ನಾಯಕರ ಮಧ್ಯದಲ್ಲಿ ಶಿವಕುಮಾರ್‌ಗೆ ಜನಪ್ರಿಯತೆ ಕೊಂಚ ಕಡಿಮೆಯಿದೆ. ಇನ್ನೊಂದೆಡೆ, ಸಿದ್ದು ಜೊತೆಗಿನ ರಾಜಕೀಯ ಕಂಪ್ಯಾಟಿಬಿಲಿಟಿಯಿಂದಾಗಿ ಹಳೆ ತಲೆಗಳಾದ ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ರಾಯರೆಡ್ಡಿ, ಸಂತೋಷ್ ಲಾಡ್, ವಿನಯ ಕುಲಕರ್ಣಿ, ದಿನೇಶ್ ಗುಂಡೂರಾವ್, ಕೆ.ಎನ್.ರಾಜಣ್ಣ ಇವರೆಲ್ಲ ಸಿದ್ದು ಜೊತೆಗೆ ಹೆಚ್ಚು ಗಟ್ಟಿಯಾಗಿದ್ದಾರೆ.
ಇದಕ್ಕೆ ಒಂದು ಚುನಾವಣಾ ಕಾರಣವೂ ಇದೆ. ಸಿದ್ದು ಜೊತೆಗೆ ನಿಂತರೆ ಯಾವುದೇ ಕ್ಷೇತ್ರದಲ್ಲಿ ಕುರುಬರ ಮತಗಳು ಅನಾಯಾಸವಾಗಿ ಬರುತ್ತವೆ. 2015ರಲ್ಲಿರಬೇಕು, ಕೋಲಾರದಲ್ಲಿ 6 ಬಾರಿ ಗೆದ್ದಿದ್ದ, ವಯಸ್ಸಿನಲ್ಲೂ ಹಿರಿಯರಾದ ಕೆ.ಎಚ್.ಮುನಿಯಪ್ಪ ಕರ್ನಾಟಕ ಭವನದ ಹೊರಗಡೆ ನಿಂತಿದ್ದರು. ಭವನದ ಬಾಗಿಲು ಹತ್ತಿರ ನಿಂತಿದ್ದ ಶಿವಕುಮಾರ್ ‘ಮುನಿಯಪ್ಪ ಬನ್ನಿ ಇಲ್ಲಿ’ ಎಂದು ಜೋರಾಗಿ ಕೂಗಿ, ತಾವು ನಿಂತಲ್ಲಿಗೆ ಬನ್ನಿ ಎನ್ನುವಂತೆ ಕೈಸನ್ನೆ ಮಾಡಿದರು. ಮುನಿಯಪ್ಪ ಬೇಸರಿಸಿಕೊಂಡರು. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ನಡೆ-ನುಡಿಯಿಂದ ಯಾವ ಸಂದೇಶ ರವಾನೆಯಾಗುತ್ತದೆ ಎಂಬ ಬಗ್ಗೆ ಎಚ್ಚರಿಕೆಯಿಂದಿರಬೇಕಾಗುತ್ತದೆ.
India Gate: ಹಾರ್ದಿಕ್ ಕಾಂಗ್ರೆಸ್ ತೊರೆದಿದ್ದು ಯಾಕೆ?
ಲಿಂಗಾಯತ ವರ್ಸಸ್ ಹಿಂದುಳಿದ ವರ್ಗ
ಜಾತಿಯ ದೃಷ್ಟಿಯಿಂದ ನೋಡಿದಾಗ 2018ರ ಮತಗಳ ಕ್ರೋಢೀಕರಣಕ್ಕೂ, 2023ರ ವೋಟಿಂಗ್ ಪ್ಯಾಟರ್ನ್‌ಗೂ ತುಂಬಾ ವ್ಯತ್ಯಾಸ ಆಗಬಹುದು ಎಂದು ಅನ್ನಿಸುತ್ತಿಲ್ಲ. ಏಕೆಂದರೆ ಕುರುಬರು ಸಿದ್ದು ಜತೆಗೆ, ದಲಿತ ಬಲಗೈ ಮತ್ತು ಮುಸ್ಲಿಮರು ಕಾಂಗ್ರೆಸ್ ಜೊತೆಗೆ, ಲಿಂಗಾಯತರು ಮತ್ತು ದಲಿತ ಎಡಗೈ ಬಿಜೆಪಿ ಜತೆಗೆ ಮರಳಿ ನಿಲ್ಲುವ ಲಕ್ಷಣಗಳು ಕಾಣುತ್ತಿವೆ. ಆದರೆ ನಿಜಕ್ಕೂ ಕುತೂಹಲ ಇರುವುದು ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದ ನಂತರ ಬೊಮ್ಮಾಯಿ ಎಷ್ಟುಲಿಂಗಾಯತರ ವೋಟುಗಳನ್ನು ಉಳಿಸಿಕೊಳ್ಳುತ್ತಾರೆ, ಎಷ್ಟುಕಳೆದುಕೊಳ್ಳುತ್ತಾರೆ ಎನ್ನುವುದು ಭವಿಷ್ಯ ನಿರ್ಧರಿಸಲಿದೆ. ಅದೇ ರೀತಿ 2018 ಮತ್ತು 2019ರಲ್ಲಿ ಮೋದಿ ಮೋಡಿಗೆ ಒಳಗಾಗಿ ಬಿಜೆಪಿ ಹಿಂದೆ ಹೋದ ಎಷ್ಟುಕುರುಬೇತರ ಹಿಂದುಳಿದ ಮತಗಳನ್ನು ಸಿದ್ದು ಪುನರಪಿ ಸೆಳೆಯುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ. ಹೀಗಾಗಿ ಸಿದ್ದು ಸಂಘಟಿಸುತ್ತಿರುವ ದಾವಣಗೆರೆ ಸಮಾವೇಶವನ್ನು ಅಷ್ಟೊಂದು ಕುತೂಹಲದಿಂದ ಗಮನಿಸಲಾಗುತ್ತಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ