
ಹೊಸಪೇಟೆ(ಜು.15): ಸಿದ್ದರಾಮೋತ್ಸವ, ಶಿವಕುಮಾರೋತ್ಸವದ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಕುರಿತು ಜನ ತೀರ್ಮಾನ ಮಾಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲವು ವಿಚಾರಗಳನ್ನು ಸಹಿಸಿಕೊಳ್ಳುವೆ. ಆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ನಾನು ವಿಜಯನಗರದಲ್ಲಿ ಆನಂದೋತ್ಸವ ಕೂಡ ಮಾಡುವುದಿಲ್ಲ ಎಂದರು. ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಜಲಾಶಯದ ಬಳಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 40 ವರ್ಷಗಳ ಆನಂತರ ಇದೇ ಮೊದಲ ಬಾರಿಗೆ ಅವಧಿಗೆ ಮುನ್ನ ಜಲಾಶಯ ಭರ್ತಿಯಾಗಿದೆ. ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರು ಸಮೃದ್ಧವಾಗಿ ಬೆಳೆದು ಅವರ ಬಾಳಲ್ಲಿ ಸಂತೋಷ ತರಲಿ ಮತ್ತು ಪ್ರತಿ ವರ್ಷವೂ ಇದೇ ತರಹ ಉತ್ತಮ ರೀತಿಯಲ್ಲಿ ಮಳೆ ಆಗಿ ಯಾವುದೇ ತರಹ ಹಾನಿ ಉಂಟಾಗದೇ ಅಣೆಕಟ್ಟು ಭರ್ತಿಯಾಗಲಿ ಎಂದು ಹಂಪಿಯ ವಿರೂಪಾಕ್ಷೇಶ್ವರನನ್ನು ಪ್ರಾರ್ಥಿಸಿ, ಗಂಗಾಮಾತೆಗೆ ಬಾಗಿನ ಸಮರ್ಪಿಸಿದ್ದೇವೆ ಎಂದರು.
ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ
ತುಂಗಭದ್ರೆ ಯಾವುದೇ ರೀತಿಯ ಹಾನಿ ಮಾಡದೇ ಶಾಂತವಾಗಿ ಹರಿದು ಸಮುದ್ರ ಸೇರಲಿ. ತುಂಗಭದ್ರಾ ಜಲಾಶಯದಲ್ಲಿನ ನೀರು ಎರಡು ಬೆಳೆಗೆ ಆಗಲಿದೆ. ನಿರಂತರ ತುಂಗಭದ್ರಾ ಜಲಾಶಯ ತುಂಬುತ್ತಿರಲಿ ಎಂದರು.
ಅಂಜನಾದ್ರಿ ಅಭಿವೃದ್ಧಿಗೆ ನೀಲನಕ್ಷೆ:
ಅಂಜನಾದ್ರಿಯ ಬೆಟ್ಟದ ಸಮಗ್ರ ಅಭಿವೃದ್ಧಿಗೆ 60 ಎಕರೆ ಜಾಗದ ಅವಶ್ಯಕತೆ ಇದ್ದು, ಮೊದಲನೇ ಹಂತದಲ್ಲಿ ಪ್ರವಾಸಿಗರಿಗೆ ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಇನ್ನಿತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆಯನ್ನು ಸಿದ್ಧಪಡಿಸಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಟ್ಟಡಗಳಿಗೆ ಕಾಂಕ್ರೀಟ್ ಬಳಸದೇ ಕೇರಳದ ಜಟಾಯು ತರಹ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸುವ ಉದ್ದೇಶದಿಂದ 15 ದಿನದೊಳಗೆ ನೀಲನಕ್ಷೆ ಸಿದ್ಧಪಡಿಸಲು ಪರಿಣತ ವಾಸ್ತುಶಿಲ್ಪತಜ್ಞರ ಏಜೆನ್ಸಿಯನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ
ಕೊಪ್ಪಳ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ತುಂಗಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ, ಶಿವಶಂಕರ, ನಗರಸಭೆ ಸದಸ್ಯ ಬುಜ್ಜಿ ಹನುಮಂತಪ್ಪ, ಮುಖಂಡ ಸಿದ್ದಾರ್ಥ ಸಿಂಗ್ ಇದ್ದರು.
ರೀಟ್ವೀಟ್ ಮಾಡಿ ಗುಜರಾತ್‌ಗೆ ಪ್ರತ್ಯುತ್ತರ: ಆನಂದ ಸಿಂಗ್
ಹೊಸಪೇಟೆ: ಗುಜರಾತ ಪ್ರವಾಸೋದ್ಯಮ ಇಲಾಖೆ ಪಂಪಾ ಸರೋವರ ಗುಜರಾತನಲ್ಲಿದೆ ಎಂದು ಟ್ವೀಟ್ ಮಾಡಿರುವುದಕ್ಕೆ ರೀಟ್ವೀಟ್ ಮಾಡಿಯೇ ಉತ್ತರಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳದ ಅಂಜನಾದ್ರಿ ಬೆಟ್ಟದ 60 ಎಕರೆ ಜಾಗದಲ್ಲಿ .100 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಅವರು ಜುಲೈ ಅಂತ್ಯದೊಳಗೆ ವೈಮಾನಿಕ ವೀಕ್ಷಣೆ ನಡೆಸಲಿದ್ದಾರೆ. ಅಂಜನಾದ್ರಿ ಬೆಟ್ಟ575 ಮೆಟ್ಟಿಲು ಹೊಂದಿದ್ದು, ಅವರಿಗೆ ಹತ್ತಲು ಸಾಧ್ಯವಾಗುವುದಿಲ್ಲ. ಹಾಗಾಗಿ ವೈಮಾನಿಕ ವೀಕ್ಷಣೆ ಮಾಡಲಿದ್ದಾರೆ ಎಂದರು.
ಅನ್ನಭಾಗ್ಯ ಅಕ್ಕಿಯನ್ನು ಸೋನಾಮಸೂರಿ ಅಕ್ಕಿಯಲ್ಲಿ ಮಿಶ್ರಣ ಮಾಡುವ ಬಗ್ಗೆ ದೂರು ಬಂದಿದ್ದು, ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಧಿಕಾರಿಗಳಿಗೆ ಕ್ರಮವಹಿಸಲು ಸರ್ಕಾರ ಸೂಚಿಸಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.