
ಚವಡಾಪುರ(ಫೆ.08): 40 ಪರ್ಸೆಂಟ್ ಕಮಿಷನ್, ಬಡವರ ಮೇಲೆ ಬೆಲೆ ಏರಿಕೆ ಬರೆ, ಲಂಚಾವತಾರ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರ ಅಲಿಬಾಬಾ ಔರ್ ಚಾಲಿಸ್ ಚೋರ್ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಅಫಜಲ್ಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರದಲ್ಲಿ ರಾಜ್ಯ 20 ವರ್ಷ ಹಿಂದೆ ಹೋಗಿದೆ. ಬಿಜೆಪಿಗರು ನುಡಿದಂತೆ ನಡೆಯುವವರಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ನೀಡಿದ್ದ 163 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೆರಿಸಿದ್ದೇನೆ. ಬಿಜೆಪಿಗರು 600 ಭರವಸೆಗಳಲ್ಲಿ ಕೇವಲ 60 ಈಡೇರಿಸಿದ್ದಾರೆ. ಕಲಬುರಗಿ ಭಾಗದಲ್ಲಿ ತೊಗರಿ ನೆಟೆರೋಗಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಕೃಷಿ ಮಂತ್ರಿಗೆ ನೆಟೆರೋಗ ಏನೆಂದು ಕೇಳಿದರೆ ಗೊತ್ತಿಲ್ಲ ಎನ್ನುತ್ತಾನೆ. ಇಂತವರು ರೈತರಿಗೇನು ಪರಿಹಾರ ನೀಡುತ್ತಾರೆ?ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಗ್ಯಾರಂಟಿ: ಸಿದ್ದರಾಮಯ್ಯ
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಪ್ರವಾಹ, ಬರಗಾಲ, ಕೊರೋನಾದಂತ ಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಬಂದು ಜನರ ಕಷ್ಟಕೇಳದ ಪ್ರಧಾನಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ತಿಂಗಳಿಗೊಮ್ಮೆ ಬರುತ್ತಿದ್ದಾರೆ. ರಾಜ್ಯ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ ಹೀಗಾಗಿ ಪ್ರಧಾನಿಗಳನ್ನು ಕರೆಸುತ್ತಿದ್ದಾರೆ. ನಮೋ ಎಂದರೆ ನರೇಂದ್ರ ಮೋದಿ ಅಲ್ಲ, ನಮಗೆಲ್ಲ ಮೋಸ ಎಂದರ್ಥ, ಬಿಜೆಪಿಗರ ಬಂಡವಾಳ ಈಗ ಜನರ ಮುಂದೆ ಬಯಲಾಗಿದೆ. ಬಿಜೆಪಿಗರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ನಾನು ಸಿದ್ಧನಿದ್ದೇನೆ. ಪಿಎಸ್‌ಐ ಹಗರಣ ದೇಶದ ಗಮನ ಸೆಳೆದಿದೆ, ಈ ಹಗರಣದ ಮೂಲ ಅಫಜಲ್ಪುರವೇ ಆಗಿದೆ. ನಿಮ್ಮ ಮಕ್ಕಳ ಭವಿಷ್ಯದ ಚೆಲ್ಲಾಟ ಆಡುತ್ತಿರುವ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಲು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕರಾದ ಈಶ್ವರ ಖಂಡ್ರೆ, ಜಮೀರ್ ಅಹ್ಮದ ಖಾನ್, ಮಾಜಿ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು.
ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಮತ ನೀಡಲ್ಲ: ಸಿದ್ದರಾಮಯ್ಯ
ಕಾರ್ಯಕ್ರಮಕ್ಕೂ ಮುನ್ನ ಮುಖಂಡ ರಾಜೇಂದ್ರ ಪಾಟೀಲ್ ರೇವೂರ ಬೆಂಬಲಿಗರು ಮಲ್ಲಾಬಾದ ಗ್ರಾಮದಿಂದ ಫಂಕ್ಷನ ಹಾಲ್‌ವರೆಗೆ 10 ಕಿ.ಮಿ. ಬೈಕ್ ರಾರಯಲಿ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಫಂಕ್ಷನ್ ಹಾಲ್‌ವರೆಗೆ ಆಕಾಂಕ್ಷಿಗಳಾದ ರಾಜೇಂದ್ರ ಪಾಟೀಲ್, ಅರುಣಕುಮಾರ ಪಾಟೀಲ್, ಜೆ.ಎಂ ಕೊರಬು, ಡಾ. ಸಂಜು ಪಾಟೀಲ್ ಅಭಿಮಾನಿಗಳ ಕಟೌಟ್‌ಗಳು ರಾರಾಜಿಸಿದವು. ವೇದಿಕೆಯ ಬಳಿ ಡಾ. ಸಂಜುಕುಮಾರ ಪಾಟೀಲ್ ಬೆಂಬಲಿಗರು ಅವರ ಭಾವಚಿತ್ರ ಪ್ರದರ್ಶಿಸಿ ಘೊಷಣೆಗಳನ್ನು ಕೂಗಿದ ಘಟನೆ ನಡೆಯಿತು.
ಜೆ.ಎಂ ಕೊರಬು ಬೆಂಬಲಿಗರು ಸಿದ್ದರಾಮಯ್ಯನವರಿಗೆ ಬೃಹತ್ ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಗದೇವ ಗುತ್ತೇದಾರ, ಪಪ್ಪು ಪಟೇಲ್, ಎಸ್.ವೈ ಪಾಟೀಲ್, ಮಕ್ಬೂಲ್ ಪಟೇಲ್, ಮತೀನ್ ಪಟೇಲ್, ಸಿದ್ದಾರ್ಥ ಬಸರಿಗಿಡ, ರಮೇಶ ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.