ವರದಿ :- ಶರಣಯ್ಯ ಹಿರೇಮಠ
ಕಲಬುರಗಿ (ಫೆ.8) :- ಕಾಂಗ್ರೆಸ್ ಪಕ್ಷದ 'ಪ್ರಜಾ ಧ್ವನಿ ಯಾತ್ರೆ' ಮೂರನೇ ದಿನವಾದ ಇಂದೂ ಸಹ ಬಿಸಿಲೂರು ಕಲಬುರಗಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಮಾಜಿ ಸಿಎಂ ಸಿದ್ರಾಮಯ್ಯರನ್ನು ಸ್ವಾಗತಿಸಲು ಟಿಕೇಟ್ ಆಕಾಂಕ್ಷಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ.
undefined
ಪ್ರಜಾ ಧ್ವನಿಯಾತ್ರೆ(Prajadhwaniyatre) ಅಫಜಲಪುರ(Afjalpur)ಕ್ಕೆ ಆಗಮಿಸಿದಾಗ ಸಿದ್ರಾಮಯ್ಯ(Siddaramaiah) ಸ್ವಾಗತಕ್ಕೆ ಟಿಕೆಟ್ ಆಕಾಂಕ್ಷಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಹಾಲಿ ಶಾಸಕ ಎಂ.ವೈ ಪಾಟೀಲ್ ಮತ್ತು ಈ ಕ್ಷೇತ್ರದ ಇನ್ನೊಬ್ಬ ಪ್ರಬಲ ಟಿಕೇಟ್ ಆಕಾಂಕ್ಷಿ ಜೆ.ಎಂ. ಕೊರಬು ನಡುವೆ ತೀವ್ರ ಪೈಪೋಟಿ ಕಂಡುಬಂತು.
'ವೇಸ್ಟ್ ಫೆಲ್ಲೊ, ನಾನ್ ಸೆನ್ಸ್' ಎಂದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ
ಸಮಾವೇಶದ ವೇದಿಕೆ ಹೊರತುಪಡಿಸಿ ಅಫಜಲಪುರ ಪಟ್ಟಣಾದ್ಯಂತ ಜೆಎಂ ಕೊರಬು ಬ್ಯಾನರಗಳು ರಾರಾಜಿಸಿದವು. 20 ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಲಾದ ಹಾರವನ್ನು ಕ್ರೇನ್ ಮೂಲಕ ಸಿದ್ರಾಮಯ್ಯ ಅವರಿಗೆ ಹಾಕಿ ಅವರ ಮನ ಗೆಲ್ಲಲು ಟಿಕೆಟ್ ಆಕಾಂಕ್ಷಿಗಳು ಹರಸಾಹಸ ಪಟ್ಟರು. ಕೆಲವರು ಸಿದ್ರಾಮಯ್ಯಗೆ ಟಗರು ಮರಿ ಕಾಣಿಕೆ ಕೊಟ್ಟರೆ, ಮತ್ತೆ ಕೆಲವು ಆಕಾಂಕ್ಷಿಗಳು ಬೆಳ್ಳಿ ಕಿರಿಟ, ಕಂಬಳಿ ಹೊದಿಸಿ ಸತ್ಕರಿಸಿ ಗಮನ ಸೆಳೆಯುವ ಯತ್ನ ನಡೆಸಿದರು.
ಸಿದ್ರಾಮಯ್ಯ ಅವರ ಕಟ್ಟಾ ಅನುಯಾಯಿ ಮತ್ತು ಸಮಾಜ ಸೇವಕ ಜೆ.ಎ. ಕೊರಬು ಟೀಂ ಒಂದು ಕಡೆ ಸಿದ್ರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಶಾಸಕ ಎಂ.ವೈ ಪಾಟೀಲ್ ಮತ್ತು ಅವರ ಪುತ್ರರು ಮತ್ತೊಂದೆಡೆ ಸಿದ್ರಾಮಯ್ಯ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸಲು ಯತ್ನಿಸಿದರು. ಒಟ್ಟಿನಲ್ಲಿ ಸಿದ್ರಾಮಯ್ಯರ ಮನಸ್ಸು ಗೆಲ್ಲಲು ಟಿಕೆಟ್ ಆಕಾಂಕ್ಷಿಗಳು ಹಲವು ಕಸರತ್ತು ನಡೆಸಿದ್ದು ಅಫಜಲಪುರದಲ್ಲಿ ಕಂಡು ಬಂತು.
ಗುಟ್ಟು ಬಿಟ್ಟು ಕೊಡದ ಸಿದ್ರಾಮಯ್ಯ
ಆದ್ರೆ ಟಿಕೆಟ್ ಆಕಾಂಕ್ಷಿಗಳು ವೈಯಕ್ತಿಕವಾಗಿ ಅದೆಷ್ಟೇ ಶಕ್ತಿ ಪ್ರದರ್ಶನ ನಡೆಸಿದರೂ ಸಿದ್ರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಟಿಕೆಟ್ ವಿಚಾರದಲ್ಲಿ ತಮ್ಮ ಗುಟ್ಟು ಬಿಟ್ಟು ಕೊಡಲೇ ಇಲ್ಲ. ಸಿದ್ರಾಮಯ್ಯ ಭಾಷಣದ ವೇಳೆ ಅವರ ಪಕ್ಕದಲ್ಲಿ ನಿಲ್ಲಲು ಹಲವು ಟಿಕೆಟ್ ಆಕಾಂಕ್ಷಿಗಳು ಯತ್ನಿಸಿದರೂ ಸಿದ್ರಾಮಯ್ಯ ಅದಕ್ಕೆ ಅವಕಾಶ ಕೊಡದೇ ಕುಳಿತುಕೊಳ್ಳಲು ಸೂಚಿಸಿದ್ದು ಅವರ ದೂರಾಲೋಚನೆಗೆ ಸಾಕ್ಷಿಯಾಗಿತ್ತು. ಪಕ್ಷ ಯಾರಿಗೇ ಟಿಕೆಟ್ ಕೊಡಲಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿ ಹೊರಟ ಸಿದ್ರಾಮಯ್ಯ ಮತ್ತು ಟೀಂ , ಅಫಜಲಪುರ ಟಿಕೆಟ್ ಗುಟ್ಟು ಗುಟ್ಟಾಗಿ ಇಟ್ಟು ಹೊರಟು ಹೋದರು.
ಹೋಟೆಲ್‌ನಿಂದ ಆಡಳಿತ ನಡೆಸೋರಿಗೆ ಅಧಿಕಾರ ಬೇಡ: ಎಚ್‌ಡಿಕೆಗೆ ಟಾಂಗ್ ಕೊಟ್ಟ ಸಿದ್ದು
ಆಕಾಂಕ್ಷಿಗಳ ಪಟ್ಟಿ
ಈ ಬಾರಿ ಅಫಜಲಪುರ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ವೈ ಪಾಟೀಲ್ ವಯಸ್ಸಿನ ಕಾರಣ ಚುನಾವಣೆಯಿಂದ ಹಿಂದೆ ಸರಿಯುವ ಮಾತನಾಡಿದ್ದಾರೆ. ಹಾಗಾಗಿ ಅವರ ಪುತ್ರ ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಮತ್ತು ಇನ್ನೊಬ್ಬ ಪುತ್ರ ಡಾ. ಸಂಜಯ ಪಾಟೀಲ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಜೆಎಂ ಕೊರಬು ಸೇರಿದಂತೆ ಒಟ್ಟು ಏಳು ಜನ ಆಕಾಂಕ್ಷಿಗಳು ಅಫಜಲಪುರ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೆ ಈ ಬಾರಿ ಅಫಜಲಪುರ ಟಿಕೆಟ್ ಸಿಗುತ್ತದೆ ಎನ್ನುವುದು ಮಾತ್ರ ಪ್ರಜಾ ಧ್ವನಿ ಯಾತ್ರೆಯ ನಂತರವೂ ಗುಟ್ಟಾಗಿಯೇ ಉಳಿದಿದೆ. ಪ್ರಜಾ ಧ್ವನಿ ಯಾತ್ರೆಯಲ್ಲಿ ಅಭ್ಯರ್ಥಿ ಬಗ್ಗೆ ಒಂದಿಷ್ಟು ಸುಳಿವು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಆದರೆ ಟಿಕೆಟ್ ಆಕಾಂಕ್ಷಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ ಕುತೂಹಲ ಇನ್ನಷ್ಟು ಇಮ್ಮಡಿಗೊಂಡಿದ್ದು ಅಪ್ಪಟ ಸತ್ಯ..