ಬೆಂಗಳೂರು: ಆರ್‌.ಆರ್‌.ನಗರದಲ್ಲಿ ಮುನಿರತ್ನ, ಕುಸುಮಾ ಕದನ

Published : Apr 30, 2023, 08:00 AM IST
ಬೆಂಗಳೂರು: ಆರ್‌.ಆರ್‌.ನಗರದಲ್ಲಿ ಮುನಿರತ್ನ, ಕುಸುಮಾ ಕದನ

ಸಾರಾಂಶ

ಕಳೆದ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಿಂತ ಶೇ.45ಕ್ಕೂ ಹೆಚ್ಚಿನ ಮತ ಪಡೆದು ಭಾರೀ ಅಂತರದಲ್ಲಿ ಗೆದ್ದಿದ್ದ ಹಾಲಿ ಶಾಸಕ ಮುನಿರತ್ನ ಈ ಬಾರಿ ಅದೇ ಸಾಧನೆ ಮೆರೆಯುವರೇ ಅಥವಾ ಪೈಪೋಟಿಗೆ ಮಣಿಯುವರೇ ಎಂಬ ಕದನ ಕುತೂಹಲ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ.

ಗಿರೀಶ್‌ ಗರಗ

ಬೆಂಗಳೂರು(ಏ.30):  ಒಕ್ಕಲಿಗ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿ ದೊಡ್ಡ ಪೈಪೋಟಿ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಿಂತ ಶೇ.45ಕ್ಕೂ ಹೆಚ್ಚಿನ ಮತ ಪಡೆದು ಭಾರೀ ಅಂತರದಲ್ಲಿ ಗೆದ್ದಿದ್ದ ಹಾಲಿ ಶಾಸಕ ಮುನಿರತ್ನ ಈ ಬಾರಿ ಅದೇ ಸಾಧನೆ ಮೆರೆಯುವರೇ ಅಥವಾ ಪೈಪೋಟಿಗೆ ಮಣಿಯುವರೇ ಎಂಬ ಕದನ ಕುತೂಹಲ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ.

ಇಂತಹ ಕುತೂಹಲ ಉಂಟಾಗಲು ಕಾರಣ ಕಾಂಗ್ರೆಸ್‌ನ ಎಚ್‌.ಕುಸುಮಾ ನೀಡುತ್ತಿರುವ ಪ್ರಬಲ ಸ್ಪರ್ಧೆ. ಮೇಲ್ನೋಟಕ್ಕೆ ಬಿಜೆಪಿ ಹಿಡಿತದಲ್ಲಿರುವಂತೆ ಕಾಣುತ್ತಿರುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಎರಡು ಬಾರಿ ಗೆಲುವು ಸಾಧಿಸಿವೆ. ಕ್ಷೇತ್ರದಲ್ಲಿ ಜೆಡಿಎಸ್‌ ಈವರೆಗೆ ಖಾತೆ ತೆರೆದಿಲ್ಲ. ನಾಲ್ಕನೇ ಬಾರಿಗೆ ಶಾಸಕರಾಗಲು ಕಸರತ್ತು ನಡೆಸಿರುವ ಮುನಿರತ್ನ ಅವರಿಗೆ ಕಾಂಗ್ರೆಸ್‌ನ ಕುಸುಮಾ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಡಾ.ವಿ.ನಾರಾಯಣಸ್ವಾಮಿ ಕೂಡ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ.

ಒಕ್ಕಲಿಗ ಸ್ತ್ರೀ ಬಗ್ಗೆ ಕೆಟ್ಟ ಮಾತು ಆಡಿದ್ರೆ ನೇಣಿಗೇರಿಸಿ: ಮುನಿರತ್ನ

ಕಳೆದೆರಡು ಅವಧಿಯಲ್ಲಿ ಶಾಸಕರಾಗಿರುವ ಮುನಿರತ್ನ ಕ್ಷೇತ್ರದ ಚಿತ್ರಣವನ್ನು ಸಾಕಷ್ಟುಬದಲಿಸಿದ್ದಾರೆ. ಸಾವಿರಾರು ಕೋಟಿ ರು. ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ವಿಷಯಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರದಲ್ಲಿ ತೊಡಗಿದೆ. ಅದಕ್ಕೆ ಪ್ರತಿಯಾಗಿ ಟೆಂಡರ್‌ ಹಗರಣ ಸೇರಿ ಇನ್ನಿತರ ವಿಷಯಗಳನ್ನು ಕಾಂಗ್ರೆಸ್‌ ಮುನ್ನೆಲೆಗೆ ತಂದು ಮತದಾರರ ಮನವೊಲಿಕೆಗೆ ಪ್ರಯತ್ನಿಸುತ್ತಿದೆ. ಕುಸುಮಾ ಕಳೆದ ಉಪ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದ ಜನರ ಜತೆಗಿನ ಒಡನಾಟ ಕಡಿದುಕೊಂಡಿಲ್ಲ. ಇದು ಕಾಂಗ್ರೆಸ್‌ಗೆ ಸಕಾರಾತ್ಮಕ ಅಂಶವಾಗುವ ಸಾಧ್ಯತೆಗಳಿವೆ.

ಕ್ಷೇತ್ರದಲ್ಲಿನ ಒಕ್ಕಲಿಗ ಮತಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಒಕ್ಕಲಿಗ ಮತಗಳು ಈ ಬಾರಿ ಕಾಂಗ್ರೆಸ್‌ ಪರವಾಗಿ ಚಲಾವಣೆಗೊಳ್ಳುವಂತೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ಆದರೂ, ಮುನಿರತ್ನ ಅವರು ನಿರ್ದಿಷ್ಟಒಕ್ಕಲಿಗ ಮತಗಳನ್ನು ತಮ್ಮೊಂದಿಗಿಟ್ಟುಕೊಂಡಿದ್ದಾರೆ. ಅದರ ಜತೆಗೆ ಎಸ್ಸಿ/ಎಸ್ಟಿ, ಲಿಂಗಾಯತ, ಬ್ರಾಹ್ಮಣ ಸಮುದಾಯ ಸೇರಿ ಇನ್ನಿತರ ಮತದಾರರು ಶೇ.60ಕ್ಕಿಂತ ಹೆಚ್ಚು ಮುನಿರತ್ನ ಪರ ಒಲವು ತೋರುತ್ತಿದ್ದಾರೆ.

ಬಿಜೆಪಿಯಲ್ಲಿದ್ದ ಬಿ.ಆರ್‌.ನಂಜುಂಡಪ್ಪ, ಮಂಜುಳಾ ನಾರಾಯಣಸ್ವಾಮಿ ಸೇರಿ ಇತರ ನಾಯಕರು ಇದೀಗ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮುನಿರತ್ನ ಅವರು ಬಿಜೆಪಿ ಸೇರ್ಪಡೆಗೊಂಡ ನಂತರದಿಂದಲೂ ಮೂಲ ಮತ್ತು ವಲಸಿಗ ತಿಕ್ಕಾಟ ನಡೆಯುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಸುಂಕದಕಟ್ಟೆಯಿಂದ ಸುಮನಹಳ್ಳಿವರೆಗೆ ರೋಡ್‌ ಶೋ ನಡೆಸಿದ್ದಾರೆ. ಇದು ಬಂಡಾಯ, ಒಕ್ಕಲಿಗ ಮತದಾರರ ಮನವೊಲಿಕೆಯಂತಹ ಸವಾಲನ್ನು ಎದುರಿಸುತ್ತಿರುವ ಮುನಿರತ್ನ ಅವರಿಗೆ ಬಲ ತಂದುಕೊಟ್ಟಿದೆ.

ಜಾತಿ ಲೆಕ್ಕಾಚಾರ

ಒಕ್ಕಲಿಗರು 1.25 ಲಕ್ಷ, ಎಸ್ಸಿ/ಎಸ್ಟಿ82 ಸಾವಿರ, ಲಿಂಗಾಯತರು 49 ಸಾವಿರ, ಬ್ರಾಹ್ಮಣರು 32 ಸಾವಿರ, ಇತರ ಭಾಷಿಕರು 88 ಸಾವಿರ, ಮುಸ್ಲಿಮರು 15 ಸಾವಿರ, ಕುರುಬರು 6 ಸಾವಿರ, ದೇವಾಂಗ ಸಮುದಾಯದವರು 5 ಸಾವಿರದಷ್ಟಿದ್ದಾರೆ.

ಕಳೆದ ಉಪ ಚುನಾವಣೆ ವಿವರ

ಮುನಿರತ್ನ (ಬಿಜೆಪಿ): 1,25,990 ಮತ
ಎಚ್‌.ಕುಸುಮಾ (ಕಾಂಗ್ರೆಸ್‌): 67,877
ವಿ.ಕೃಷ್ಣಮೂರ್ತಿ(ಜೆಡಿಎಸ್‌): 10,269
ಗೆಲುವಿನ ಅಂತರ: 58,113

News Hour Special with Munirathna: 'ನಿಮ್ಮನ್ನೆಲ್ಲಾ ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ರಂತೆ?'

ಕ್ಷೇತ್ರದ ಇತಿಹಾಸ

ಉತ್ತರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿನಗರ, 2008ರ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ವೇಳೆ ಹೊಸ ಕ್ಷೇತ್ರವಾಯಿತು. ಈವರೆಗೆ ಮೂರು ಸಾರ್ವತ್ರಿಕ ಚುನಾವಣೆ ಮತ್ತು ಒಂದು ಉಪಚುನಾವಣೆ ಕಂಡಿದೆ. 2008ರ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರವನ್ನು 2013 ಮತ್ತು 2018ರಲ್ಲಿ ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೆ, 2019ರಲ್ಲಿ ಶಾಸಕ ಮುನಿರತ್ನ ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಉಪಚುನಾವಣೆ ನಡೆದು ಮತ್ತೆ ಬಿಜೆಪಿ ತೆಕ್ಕೆಗೆ ಕ್ಷೇತ್ರ ಮರಳಿದೆ.

ಮತದಾರರ ವಿವರ

ಒಟ್ಟು ಮತದಾರರು: 4.85 ಲಕ್ಷ
ಪುರುಷರು: 2.50 ಲಕ್ಷ
ಮಹಿಳೆಯರು: 2.35 ಲಕ್ಷ
ಇತರರು: 1,761

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ