
ಮೈಸೂರು(ಏ.30): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಗುವ ಹಾದಿಗೆ ವರುಣ ತಂಪೆರೆದಿದ್ದಾನೆ. ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸಿಂಚನವಾಗಿದೆ. ಪ್ರಧಾನಿ ಮೋದಿ ಇಂದು(ಭಾನುವಾರ) ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ‍್ಯಾಲಿ ನಡೆಸಲಿದ್ದಾರೆ. ಜಂಬೂಸವಾರಿ ಸಾಗುವ ರಾಜಪಥದಲ್ಲಿ ಮೋದಿ ರ‍್ಯಾಲಿ ನಡೆಯಲಿದೆ. 4 ಕಿಲೋಮೀಟ ರ‍್ಯಾಲಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಂದು ಸಂಜೆ ರಾಜಮಾರ್ಗದಲ್ಲಿ ಮೋದಿ ರೋಡ್ ಶೋ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆಗೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಸಂಜೆ ನಗರದ ರಾಜಮಾರ್ಗದಲ್ಲಿ ರೋಡ್ ಶೋ ಮೂಲಕ ಮತದಾರರನ್ನು ಸೆಳೆಯಲು ಆಗಮಿಸುತ್ತಿದ್ದಾರೆ.
ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!
ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು, ಮೈಸೂರಿನ ಹೃದಯ ಭಾಗದಲ್ಲಿರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದ ಮೂಲಕ 4 ಕಿ.ಮೀ. ರೋಡ್ ಶೋ ನಡೆಸಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಬಿಜೆಪಿಯಿಂದ ಸಕಲ ಸಿದ್ಧತೆ
ಪ್ರಧಾನಿ ಮೋದಿ ರೋಡ್ ಶೋಗೆ ಬಿಜೆಪಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾರ್ಗದುದ್ದಕ್ಕೂ ಬಿಜೆಪಿಯ ಕೇಸರಿ ಧ್ವಜ ಹಾರಾಡಲಿದ್ದು, ರಾಜಮಾರ್ಗವು ಕೇಸರಿಮಯವಾಗಲಿದೆ. ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ನಡೆಸಲು ಒಂದು ಟನ್ ಹೂವನ್ನು ಸಂಗ್ರಹಿಸಲಾಗಿದೆ.
ರೋಡ್ ಶೋನಲ್ಲಿ ಸಾಂಪ್ರಾಯಿಕ ಧಿರಿಸು ಧರಿಸಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮೈಸೂರಿನ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳ ಪ್ರದರ್ಶನ ಆಯಾ ಕಟ್ಟಿನ ಸ್ಥಳಗಳಲಿ ನಡೆಯಲಿದೆ.
ಭಾನುವಾರ ಸಂಜೆ 5.30ಕ್ಕೆ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿಯುವ ಪ್ರಧಾನಿ ಮೋದಿ ಅವರು, ಅಲ್ಲಿಂದ ಕಾರಿನಲ್ಲಿ ಎಂಡಿಎ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ಗನ್‌ಹೌಸ್ ವೃತ್ತದವರೆಗೆ ಕಾರಿನಲ್ಲಿ ಸಾಗುತ್ತಾರೆ.
ಸಂಜೆ 5.45ರ ಹೊತ್ತಿಗೆ ಗನ್‌ಹೌಸ್ ವೃತ್ತದಲ್ಲಿ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ಆರಂಭಿಸಲಿದ್ದು, ರೋಡ್ ಶೋ ಗನ್‌ಹೌಸ್ ವೃತ್ತದಿಂದ ಸಂಸ್ಕೃತ ಪಾಠಶಾಲೆ ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಆಯುರ್ವೇದ ವೃತ್ತ, ಆರ್‌ಎಂಸಿ ವೃತ್ತ, ಹೈವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆಯ ಮೂಲಕ ಮಿಲೇನಿಯಂ ವೃತ್ತದವರೆಗೆ ಸಾಗಲಿದೆ.
ಬಳಿಕ ಮಿಲೇನಿಯ್ ವೃತ್ತದಲ್ಲಿ ತೆರೆದ ವಾಹನದಿಂದ ಇಳಿದು ಕಾರಿನಲ್ಲಿ ಮೈಸೂರು- ಬೆಂಗಳೂರು ರಸ್ತೆಯ ಜಂಕ್ಷನ್ ಮೂಲಕ ಹೊರ ವರ್ತುಲ ರಸ್ತೆಯಲ್ಲಿ ಸಾಗಿ ನಂಜನಗೂಡು ರಸ್ತೆಯಿಂದ ಮೈಸೂರು ವಿಮಾನ ನಿಲ್ದಾಣ ತಲುಪಲಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಹಿಂದಿರುಗಲಿದ್ದಾರೆ.
ಬುಲೆಟ್ ಪ್ರೂಫ್ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮ್ಯಾಜಿಕ್: ಡಿವಿಎಸ್, ಚಲವಾದಿ ಸಾಥ್
ಪ್ರಧಾನಿ ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ
ಪ್ರಧಾನಿ ಮೋದಿ ರೋಡ್ ಶೋ ಗನ್‌ಹೌಸ್ ವೃತ್ತದಿಂದ ಆರಂಭವಾಗಲಿದ್ದು, ಬನ್ನಿಮಂಟಪದ ಮಿಲೇನಿಯಂ ವೃತ್ತದವರೆಗಿನ 4 ಕಿ.ಮೀ. ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಅರೆಸೇನಾ ಪಡೆಯೊಂದಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. 800 ಮಂದಿ ಅರೆ ಸೇನಾ ಪಡೆ ಸಿಬ್ಬಂದಿ, 2500 ಮಂದಿ ಪೊಲೀಸರನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ಸಿವಿಲ್ ಮತ್ತು ಟ್ರಾಫಿಕ್ ಪೊಲೀಸರೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ವಾಹನ ಸಂಚಾರ ನಿರ್ಬಂಧ
ರೋಡ್ ಶೋ ಹಿನ್ನಲೆಯಲ್ಲಿ ಏ.30ರ ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೌಟಿಲ್ಯ ವೃತ್ತದಿಂದ ಎಂಡಿಎ ಜಂಕ್ಷನ್‌ವರೆಗಿನ ರಾಧಕೃಷ್ಣ ಮಾರ್ಗ, ಎಂಡಿಎ ಜಂಕ್ಷನ್‌ನಿಂದ ರಾಮಸ್ವಾಮಿ ವೃತ್ತದವರೆಗಿನ ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತದಿಂದ ಗನ್‌ಹೌಸ್ ವೃತ್ತದವರೆಗಿನ ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದಿಂದ ಹೈವೇ ವೃತ್ತದವರೆಗಿನ ಸಯ್ಯಾಜಿರಾವ್ ರಸ್ತೆ, ಹೈವೇ ವೃತ್ತದಿಂದ ಎಲ್‌ಐಸಿ ವೃತ್ತದವರೆಗಿನ ನೆಲ್ಸನ್ ಮಂಡೇಲಾ ರಸ್ತೆ, ಎಲ್‌ಐಸಿ ವೃತ್ತದಿಂದ ಕೆಂಪೇಗೌಡ ವೃತ್ತದವರೆಗಿನ ಹಳೆ ಮೈಸೂರು ಬೆಂಗಳೂರು ರಸ್ತೆ ಹಾಗೂ ಕೆಂಪೇಗೌಡ ವೃತ್ತದಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.