ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ

Published : Jul 17, 2023, 11:59 PM IST
ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ

ಸಾರಾಂಶ

ಶಿಗ್ಗಾಂವಿ ಕ್ಷೇತ್ರವನ್ನು ಶಿಕ್ಷಣ ಕಾಶಿಯನ್ನಾಗಿ ಬೆಳೆಸುವ ಗುರಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ (ಜು.17): ಶಿಗ್ಗಾಂವಿ ಕ್ಷೇತ್ರವನ್ನು ಶಿಕ್ಷಣ ಕಾಶಿಯನ್ನಾಗಿ ಬೆಳೆಸುವ ಗುರಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿ ಬಳಗದ ವತಿಯಿಂದ ಎಸ್‌ಬಿಬಿಎಂಡಿ ಪ್ರೌಢ ಶಾಲೆ, ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ದ್ವಾರಬಾಗಿಲು ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು. ಸಿಬಿಎಸ್‌ಸಿ ಸಂಸ್ಥೆಯಂತಹ 2ರಿಂದ 3 ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದು ಇಲ್ಲಿನ ಮಕ್ಕಳು ಉನ್ನತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಾನು ಕೆಲಸ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕಳೆದ ವರ್ಷ 330ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಮಂಜೂರಾತಿ ಮಾಡಲಾಗಿದೆ. ಈಗಾಗಲೇ 200 ಶಾಲಾ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದು, ಉಳಿದ 100ಕ್ಕೂ ಹೆಚ್ಚು ಕೊಠಡಿಗಳು ಬೇರೆ ಬೇರೆ ಯೋಜನೆಗಳ ಮೂಲಕ ಬರುವ ಅಕ್ಟೋಬರ್‌, ನವೆಂಬರ್‌ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು. ನಮ್ಮ ಆಡಳಿತಾವಧಿಯಲ್ಲಿ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೇ.12 ಅನುದಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 8000ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಕೊಡುವ ಸಂದರ್ಭದಲ್ಲಿ ಎರಡು ಯೋಜನೆಗಳ ವಿಶೇಷ ಅನುದಾನದ ಅಡಿಯಲ್ಲಿ 330 ಶಾಲಾ ಕೋಟಿಗಳ ನಿರ್ಮಾಣ ಮಾಡಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಒಂದು ಕ್ರಾಂತಿಯನ್ನು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ಪಾಸಿಟಿವ್‌ ಮನಸ್ಥಿತಿಯೇ ಒಂದು ಔಷಧ ಇದ್ದಂತೆ: ಡಾ.ಸಿ.ಎನ್‌.ಮಂಜುನಾಥ್‌

ಜೊತೆಗೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಚ್‌ ಕ್ಲಾಸ್‌ಗಳನ್ನು ಮತ್ತು ಸ್ಮಾರ್ಚ್‌ ಕ್ಲಾಸ್‌ಗಳಿಗೆ ಬೇಕಾಗಿರುವ ಎಲ್ಲ ವ್ಯವಸ್ಥೆಗಳನ್ನು, ಆಧುನಿಕ ಕಲಿಕಾ ವಿಧಾನಗಳನ್ನು ಕ್ಷೇತ್ರದ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಸುಮಾರು 50 ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಈಗಾಗಲೇ ದತ್ತು ಪಡೆದುಕೊಂಡಿವೆ. ಖಾಸಗಿ ಸಂಸ್ಥೆ ಮೂಲಕ ಮಕ್ಕಳ ಕಲಿಕಾ ಗುಣಮಟ್ಟಹೆಚ್ಚಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ನಡೆಯುತ್ತಿದೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಇರುವಂತಹ ಹಳೆಯ ಹಂಚಿನ ಶಾಲಾ ಕೊಠಡಿಗಳನ್ನು ತೆಗೆದು ಸಂಪೂರ್ಣ ಆರ್‌ಸಿಸಿ ಕೊಠಡಿಗಳನ್ನು ನಿರ್ಮಾಣ ಮಾಡಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತನ್ನು ನೀಡಲಾಗುವುದು ಎಂದು ಹೇಳಿದರು.

ಕೆಎಲ್‌ಇ ಸ್ಥಾಪನೆಯ ಮೂಲ ಪುರುಷರು ತಾಲೂಕಿನ ಅರಟಾಳ ರುದ್ರಗೌಡ್ರು. ಅವರ ಕೊಡುಗೆಯಿಂದ ಕೆಎಲ್‌ಇ ಸಂಸ್ಥೆ 300ಕ್ಕೂ ಹೆಚ್ಚು ಎಂಜಿನಿಯರಿಂಗ್‌, ಮೆಡಿಕಲ್‌, ಫಾರ್ಮಸಿ ಸೇರಿದಂತೆ ತನ್ನದೇ ಆದ ಯುನಿವರ್ಸಿಟಿಗಳೊಂದಿಗೆ ಕೆಎಲ್‌ಇ ಸಂಸ್ಥೆಗಳು ರಾಜ್ಯದಲ್ಲಿ ಬೆಳೆದಿವೆ. ರುದ್ರಗೌಡರ ಮಾರ್ಗದರ್ಶನದಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿ ತಮ್ಮ ಆಸ್ತಿಯನ್ನು ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಗೆ ದಾನವಾಗಿ ಕೊಡುವ ಮೂಲಕ ಸಂಸ್ಥೆಯ ಉತ್ತುಂಗಕ್ಕೆ ಕಾರಣೀಕರ್ತರಾಗಿದ್ದಾರೆ. ಅದು ನಮ್ಮ ತಾಲೂಕಿನ ಹಿರಿಮೆಯಾಗಿದೆ ಎಂದರು.

ಶಿಗ್ಗಾಂವಿಯ ಮಣ್ಣು ಬಹಳ ಪವಿತ್ರವಾದುದು. ದಾನ, ಧರ್ಮಕ್ಕೂ ಹೆಸರುವಾಸಿಯಾಗಿದೆ. ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹಳ ದೊಡ್ಡ ಮಹನೀಯರನ್ನು ಈ ನಾಡಿಗೆ ಪರಿಚಯಿಸಿದಂತ ಕ್ಷೇತ್ರವಾಗಿದೆ ಎಂದ ಅವರು, 169 ವರ್ಷಗಳ ಇತಿಹಾಸ ಹೊಂದಿರುವಂತಹ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯು ಈ ನಾಡಿಗೆ ಇನ್ಫೊಸಿಸ್‌ ಮುಖ್ಯಸ್ಥರಾದಂತಹ ಸುಧಾ ಮೂರ್ತಿ, ಖ್ಯಾತ ಅರ್ಥಶಾಸ್ತ್ರಜ್ಞರಾದ ಹಿರೇಮಲ್ಲೂರು ಈಶ್ವರನ್‌, ಸ್ಪೆಷಲ್‌ ಡಿಸಿಯಾಗಿ ಕೆಲಸ ನಿರ್ವಹಿಸುತ್ತಿರುವ ತಿರ್ಲಾಪುರ್‌ ಅವರಂತಹ ಹಲವಾರು ಮಹನೀಯರನ್ನು ಈ ನಾಡಿಗೆ ಕೊಟ್ಟಕೀರ್ತಿ ಈ ಶಾಲೆಗೆ ಸಲ್ಲುತ್ತದೆ ಎಂದರು.

ನಿಂತು ನಿಂತು ಓಡುತ್ತಿರುವ ಮಂಡ್ಯದ ಮೈ ಶುಗರ್‌: ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿರಕ್ತಮಠದ ಮನಿಪ್ರ ಸಂಗನಬಸವ ಶ್ರೀ ವಹಿಸಿದ್ದರು. ಭಾರತ್‌ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗರ, ಎಸ್‌ಡಿಎಂಸಿ ಅಧ್ಯಕ್ಷ ರವಿ ಮಡಿವಾಳರ, ರಾಘವೇಂದ್ರ ದೇಶಪಾಂಡೆ, ಸುಭಾಸ ಚವ್ಹಾಣ, ಶಿವಾನಂದ ಮ್ಯಾಗೇರಿ ಸೇರಿದಂತೆ ಪುರಸಭೆ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ