ಟಿಕೆಟ್ ಘೋಷಣೆ ವಿಳಂಬ: ರಾಯಚೂರಲ್ಲಿ ರಂಗೇರದ ಚುನಾವಣಾ ಅಖಾಡ..!

By Girish Goudar  |  First Published Apr 14, 2023, 8:58 AM IST

ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಸರ್ಕಸ್, ಮಾನ್ವಿ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸದ ಬಿಜೆಪಿ. 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಏ.14):  ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇದೇ ಅಂದರೆ ಏಪ್ರಿಲ್- 20 ಕೊನೆಯ ದಿನ. ಆದ್ರೆ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷವು ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ.

Latest Videos

undefined

ಮೊದಲಿಗೆ ಜೆಡಿಎಸ್ ಆರು ಕ್ಷೇತ್ರದಲ್ಲಿ ಅಭ್ಯರ್ಥಿಗನ್ನ ಘೋಷಣೆ ಮಾಡಿದ್ರೆ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರ ಹೆಸರು ಘೋಷಣೆ ಮಾಡಿತ್ತು. ಬಿಜೆಪಿ ಮೊದಲ ಪಟ್ಟಿಯಲ್ಲಿ 7 ವಿಧಾನಸಭಾ ಕ್ಷೇತ್ರದ ಪೈಕಿ 6 ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಇನ್ನೊಂದು ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಬಿಜೆಪಿ ಉಳಿಸಿಕೊಂಡಿದೆ. ಹೀಗಾಗಿ ಇಷ್ಟೊತ್ತಿಗಾಗಲೇ ರಂಗೇರಬೇಕಿದ್ದ ಚುನಾವಣಾ ಕಣದಲ್ಲಿ ಈಗ ಬರೀ ಟಿಕೆಟ್ ಯಾರಿಗೆ ಸಿಗಬಹುದು ಎಂಬ ಚರ್ಚೆ ಜೋರಾಗಿದೆ. ಮತ್ತೊಂದು ಕಡೆ ಹಾಲಿ ಟಿಕೆಟ್ ಗಾಗಿ ಕಾದುಕಾದು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ರೋಸಿ ಹೋಗಿದ್ದಾರೆ.

ರಾಯಚೂರಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುತ್ತೇನೆ: ಡಾ.ಶಿವರಾಜ್ ಪಾಟೀಲ್

ಟಿಕೆಟ್ ಘೋಷಣೆಗೆ ಕಾಂಗ್ರೆಸ್ ವಿಳಂಬ ಧೋರಣೆ:

ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮೊದಲ ಪಟ್ಟಿಯಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ದದ್ದಲ್ ಹಾಗೂ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹೆಸರು ಘೋಷಣೆ ‌ಮಾಡಿದ್ರು. ಎರಡನೇ ಪಟ್ಟಿ ಬಿಡುಗಡೆ ಮಾಡಿದ್ರು, ರಾಯಚೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಯಾವ ಅಭ್ಯರ್ಥಿಯ ಹೆಸರು ಸಹ ಘೋಷಣೆ ಮಾಡಲಿಲ್ಲ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಇದ್ರೂ ಅವರ ಹೆಸರು ಸಹ ಘೋಷಣೆ ಮಾಡದೇ ಕಾಂಗ್ರೆಸ್ ಹೈಕಮಾಂಡ್ ಮತ್ತಷ್ಟು ಕುತೂಹಲ ಹೆಚ್ಚಾಗುತ್ತೆ ಮಾಡಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಬೆಟ್ಟಿಂಗ್ ಸಹ ಶುರುವಾಗಿದೆ. ಡಿ.ಎಸ್. ಹೂಲಗೇರಿಗೆ ಟಿಕೆಟ್ ಸಿಗುತ್ತೆ ಅಂತ ಕೆಲವರು ಹೇಳಿದ್ರೆ, ಇನ್ನೂ ಕೆಲವರು ಆರ್. ರುದ್ರಯ್ಯಗೆ ಟಿಕೆಟ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. 

ಇನ್ನೂ ಕೆಲವರು ಎಚ್.ಬಿ. ಮುರಾರಿ ನೀಡುತ್ತಾರೆ ಎನ್ನಲಾಗುತ್ತಿದೆ. ಆದ್ರೆ ಬಹುತೇಕ ಹಾಲಿ ಶಾಸಕ ಡಿ.ಎಸ್. ಹೂಲಗೇರಿಗೆ ಟಿಕೆಟ್ ನೀಡಬೇಕು ಎಂಬುವುದು ಚರ್ಚೆ ನಡೆದಿದೆ. ಇನ್ನೂ ಸಿಂಧನೂರು ‌ಕ್ಷೇತ್ರದ ಟಿಕೆಟ್ ಮಾಜಿ ಶಾಸಕರಿಗೆ ನೀಡಬೇಕಾ? ಅಥವಾ ಯುವ ನಾಯಕ ಬಸನಗೌಡ ಬಾದರ್ಲಿ ಗೆ ನೀಡಬೇಕಾ ಎಂಬುವುದು ಚರ್ಚೆ ಆಗುತ್ತಿದೆ. ಈಗ ಕಾಂಗ್ರೆಸ್ ನಲ್ಲಿ ಇದ್ದ ಕೆ.ಕರಿಯಪ್ಪ ಬಿಜೆಪಿಗೆ ಸೇರ್ಪಡೆ ಆಗಿ 13 ದಿನಕ್ಕೆ ಬಿಜೆಪಿ ಟಿಕೆಟ್ ನೀಡಿದೆ. ಇದು ಕೂಡ ಕಾಂಗ್ರೆಸ್ ಹೈಕಮಾಂಡ್ ಗೆ ಟಿಕೆಟ್ ನೀಡಲು ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ‌. 

ಇತ್ತ ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾತ್ರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ಯಾವುದೇ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕಗೆ ಕಾಂಗ್ರೆಸ್ ಟಿಕೆಟ್ ನೀಡಲು ತೀರ್ಮಾನ ಮಾಡಿದೆ ಎನ್ನಲಾಗುತ್ತಿದೆ. ಆದ್ರೆ ಬಿ.ವಿ.ನಾಯಕಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ನಲ್ಲಿ ಬಂಡಾಯದ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಶಾಸಕ ಹಂಪಯ್ಯ ನಾಯಕ ನೇತೃತ್ವದಲ್ಲಿ ಈಗಾಗಲೇ ಮಾನ್ವಿ ಮತ್ತು ಸಿರವಾರ ಕ್ಷೇತ್ರದಲ್ಲಿ ನೂರಾರು ಕಾರ್ಯಕರ್ತರ ಸಭೆ ಕೂಡ ಮಾಡಿ ಬಿ.ವಿ.ನಾಯಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆದ್ರೂ ಕೈ ಹೈಕಮಾಂಡ್ ‌ಬಿ.ವಿ.ನಾಯಕಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಯಾರು ಎಂಬುವುದೇ ದೊಡ್ಡ ಕುತೂಹಲ ಇದೆ. ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಚರ್ಚೆ ಆಗುತ್ತಿವೆ.

ರಾಯಚೂರು ನಗರದ ಬಿಜೆಪಿ ಟಿಕೆಟ್ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಗೆ ಹೈಕಮಾಂಡ್ ಅಳೆದುತೂಗಿ ಘೋಷಣೆ ಮಾಡಿದೆ. ಟಿಕೆಟ್ ಸಿಕ್ಕ ಮಾರನೇ ದಿನದಿದ್ದಲ್ಲೇ ಶಾಸಕ ಡಾ.ಶಿವರಾಜ್ ಪಾಟೀಲ್ ಭರ್ಜರಿ ಮತಬೇಟೆ ಶುರು ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ ಟಿಕೆಟ್ ಮಾಜಿ ಎಂಎಲ್ ಸಿ ಎನ್.ಎಸ್. ಬೋಸರಾಜು ಎನ್ನಲಾಗುತ್ತಿದೆ.ಆದ್ರೆ ಅಲ್ಪಸಂಖ್ಯಾತರು ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಕೂಗು ಇದೆ. 

ಇನ್ನೂ ಜೆಡಿಎಸ್ ಅಭ್ಯರ್ಥಿ ಯಾರು ಎಂಬುವುದು ಕಾಂಗ್ರೆಸ್ ಟಿಕೆಟ್ ಘೋಷಣೆ ಮೇಲೆ ಅವಲಂಬಿಸಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ  ಮತ್ತು ಜೆಡಿಎಸ್ ನಡುವೆ ಬಿಗ್ ಫೈಟ್ ಇದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡಬೇಕು ಎಂಬ ಚರ್ಚೆ ಬಂದಾಗ ಕ್ಷೇತ್ರದ ಜನರು ಬಿ.ವಿ.ನಾಯಕಗೆ ನೀಡಬೇಕು ಎಂದು ತಿಳಿಸಿದರು. ಆದ್ರೆ ಬಿ.ವಿ.ನಾಯಕಗೆ ದೇವದುರ್ಗದಿಂದ ಸ್ಪರ್ಧೆ ಮಾಡಲು ಹಿಂದೇಟು ಹಾಕಿದರು. 
ಹೀಗಾಗಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಿ.ವಿ.ನಾಯಕ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಸದ್ಯದ ಮಾಹಿತಿ ‌ಪ್ರಕಾರ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಶ್ರೀದೇವಿ ನಾಯಕಗೆ ನೀಡಲು ಚಿಂತನೆ ‌ನಡೆದಿದೆ.

ಮಾನ್ವಿ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸದ ಬಿಜೆಪಿ!

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೊದಲ ಪಟ್ಟಿಯಲ್ಲಿಯೇ 6 ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ‌ಮಾಡಿದೆ. ದೇವದುರ್ಗಕ್ಕೆ ಹಾಲಿ ಶಾಸಕ ಕೆ.ಶಿವನಗೌಡ ನಾಯಕ, ರಾಯಚೂರು ನಗರಕ್ಕೆ ಡಾ.ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣಕ್ಕೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಲಿಂಗಸೂಗೂರು ಕ್ಷೇತ್ರಕ್ಕೆ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಸಿಂಧನೂರು ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಬಂದ ಹಿಂದೂಳಿದ ನಾಯಕ ಕೆ.ಕರಿಯಪ್ಪ ಹೆಸರು ಘೋಷಣೆ ಮಾಡಿದೆ. ಆದ್ರೆ ಮಾನ್ವಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಾತ್ರ ಹೈಕಮಾಂಡ್ ಘೋಷಣೆ ‌ಮಾಡಿಲ್ಲ‌. ಮಾನ್ವಿ ಬಿಜೆಪಿ ಟಿಕೆಟ್ ಗಾಗಿ ಗಂಗಾಧರ ನಾಯಕ, ಮಾನಪ್ಪ ನಾಯಕ, ಬಳ್ಳಾರಿಯ ಕೆ.ಶಾಂತಾ ಮತ್ತು ಗುತ್ತಿಗೆದಾರ ಎಂ.ವೀರಣ್ಣ ಅವರ ಸೊಸೆಯ ಹೆಸರು ಕೇಳಿಬರುತ್ತಿದೆ. ಆದ್ರೆ ಬಿಜೆಪಿ ಅಚ್ಚರದ ಅಭ್ಯರ್ಥಿ ಒಬ್ಬರನ್ನು ಕಣಕ್ಕೆ ಇಳಿಸುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಇದು ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ.

ಕ್ಷೇತ್ರದ ನಾಯಕರಲ್ಲಿ ಮೂಡದ ಸಹಮತ

ರಾಜ್ಯದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಪ್ರಮುಖ ನಾಯಕರು ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದಿರುವುದು ಕಾಣುತ್ತೇವೆ. ಅದೇ ಬಂಡಾಯದ ಆತಂಕ ಈಗ ರಾಯಚೂರು ಜಿಲ್ಲೆಯಲ್ಲಿ ಕಾಣುತ್ತಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಎರಡು ಪಟ್ಟಿ ಬಿಡುಗಡೆ ಮಾಡಿದ್ರೂ ರಾಯಚೂರು ಜಿಲ್ಲೆಯ ಐದು ವಿಧಾನಸಭಾ ‌ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿದೆ. 

ಲಿಂಗಸೂಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಆದ ಬಳಿಕ ಬಂಡಾಯ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಲಿ ಶಾಸಕರಿಗೆ ಬಿಟ್ಟು ಬೇರೆ ನಾಯಕರಿಗೆ ಟಿಕೆಟ್ ನೀಡಿದ್ರೆ ಹಾಲಿ ಶಾಸಕರ ಬೆಂಬಲಿಗರು ಬೇರೆ ಪಕ್ಷ ಸೇರುವ ಕ್ಷಣಗಳು ಕ್ಷೇತ್ರದಲ್ಲಿ ಕಾಣಿಸುತ್ತಿದೆ. ಇನ್ನೂ ಸಿಂಧನೂರು ವಿಚಾರಕ್ಕೆ ಬರುವುದಾದ್ರೆ ಬಸನಗೌಡ ಬಾದರ್ಲಿಗೆ ಟಿಕೆಟ್ ನೀಡಿದ್ರೆ ಹಂಪನಗೌಡ ಬಾದರ್ಲಿ ‌ಸ್ವತಂತ್ರ ಅಭ್ಯರ್ಥಿ ಆಗಿ ಕಣಕ್ಕೆ ಇಳಿಯಲು ‌ಎಲ್ಲಾ ತಯಾರಿ ನಡೆದಿದೆ. ಇದು ಕಾಂಗ್ರೆಸ್ ಗೆ ಬಿಸಿತುಪ್ಪವಾಗಿ ಪರಿಗಣಿಸುವ ಸಾಧ್ಯತೆ ಇದೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬುವುದು ಕೈ ಹೈಕಮಾಂಡ್ ನಾಯಕರಿಗೆ ದೊಡ್ಡ ತಲೆನೋವು ಆಗಿದೆ. 

ಇನ್ನು ಮಾನ್ವಿ ವಿಚಾರಕ್ಕೆ ಬರುವುದಾದ್ರೆ ಹೈಕಮಾಂಡ್ ‌ಕಾಂಗ್ರೆಸ್ ಟಿಕೆಟ್ ನೀಡುವ ಮುನ್ನವೇ ಬಂಡಾಯ ಶುರುವಾಗಿದೆ. ಇತ್ತ ರಾಯಚೂರು ನಗರದಲ್ಲಿ ಎನ್.ಎಸ್.ಬೋಸರಾಜುಗೆ ಟಿಕೆಟ್ ‌ನೀಡದಿದ್ರೆ ಬಂಡಾಯದ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಎಫೆಕ್ಟ್ ಆಗುವ ಸಾಧ್ಯತೆ ಇದೆ. ದೇವದುರ್ಗ ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಈಗ ಕೋಟೆಯೂ ಛಿದ್ರವಾಗಿ ಹೋಗಿದೆ. ಆದ್ರೂ ಈ ಸಲ ಕಾಂಗ್ರೆಸ್ ಸೋಲು- ಗೆಲುವು ಏನೇ ಆಗಲಿವೆಂದು ಮಹಿಳಾ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಶಾಸಕ ಶಿವನಗೌಡ ನಾಯಕರ ಚಿಕ್ಕಪ್ಪಗೆ ಕಾಂಗ್ರೆಸ್ ಟಿಕೆಟ್ ಎಂಬ ಸುದ್ದಿ: ಬಿವಿ ನಾಯಕ ವಿರುದ್ಧ ಕಾರ್ಯಕರ್ತರು ಆಕ್ರೋಶ

ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ‌ಮಾಡಲು ವಿಳಂಬ ನೀತಿಯಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಇನ್ನೂ ಶುರುವಾಗಿಲ್ಲ. ರಾಯಚೂರು ಗ್ರಾಮೀಣ ಮತ್ತು ‌ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಅಭ್ಯರ್ಥಿಗಳು ಭರ್ಜರಿ ‌ಮತಬೇಟೆಗೆ ಇಳಿದಿದ್ದಾರೆ. ಅದು ಬಿಟ್ಟರೆ ಬಿಜೆಪಿಯ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಪಂಚರತ್ನ ಯಾತ್ರೆಯ ಸಂದೇಶಗಳು ತಿಳಿಸುತ್ತಾ ಓಟು ಕೇಳುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗದೇ ಇರುವುದರಿಂದ ಬಿಸಿಲು ಹೆಚ್ಚಾಗಿದ್ರೂ ಚುನಾವಣೆ ಕಾವು ಹೆಚ್ಚಾಗದೇ ತಣ್ಣಗೆ ಇದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!