ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಸ್ವಾಗತ: ಡಿ.ಕೆ.ಸುರೇಶ್

By Kannadaprabha NewsFirst Published Jul 22, 2021, 10:43 AM IST
Highlights
  • ಯಾವುದೇ ಸಮುದಾಯದವರು ಕೆಪಿಸಿಸಿ ಅಧ್ಯಕ್ಷರಾದರೂ ಸ್ವಾಗತಿಸುತ್ತೇವೆ
  •  ಪಕ್ಷದ ಹೈಕಮಾಂಡ್‌ ನಿರ್ದೇಶನ ಪಾಲಿಸುತ್ತೇವೆ ಎಂದ ಸಂಸದ ಡಿ.ಕೆ.ಸುರೇಶ್‌

ನವದೆಹಲಿ (ಜು.22):  ಲಿಂಗಾಯತರಲ್ಲ, ಯಾವುದೇ ಸಮುದಾಯದವರು ಕೆಪಿಸಿಸಿ ಅಧ್ಯಕ್ಷರಾದರೂ ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ನಿರ್ದೇಶನ ಪಾಲಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನು ನೇಮಿಸುವ ವಿಚಾರ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿ ದೆಹಲಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಮಾಧ್ಯಮದಿಂದ ಗೊತ್ತಾಗಿದೆಯೇ ಹೊರತು ನನಗೆ ಯಾವುದೇ ಮಾಹಿತಿ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಯಾರು ಬೇಕಾದರೂ ಆಗಲಿ, ಪಕ್ಷ ಮಾತ್ರ ಅಧಿಕಾರಕ್ಕೆ ಬರಬೇಕು. ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಈಗಾಗಲೇ ತಾವು ಪಕ್ಷದ ಬಾಗಿಲಿಗೆ ಚಪ್ಪಡಿ ಆಗುತ್ತೇನೆ ಎಂದಿದ್ದಾರೆ. ನಾವು ಪಕ್ಷದ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.

ಯೋಗೇಶ್ವರ್ ಒಬ್ಬ ಮೋಸಗಾರ : ಡಿಕೆ ಸುರೇಶ್

ಬಿಎಸ್‌ವೈ ಬೆಂಬಲಿಸಿದ್ದಕ್ಕೆ ಕಿಡಿ:

ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಂ.ಬಿ. ಪಾಟೀಲ… ಅವರು ಮುಖ್ಯಮಂತ್ರಿ ಬದಲಾವಣೆ ವಿಚಾರದ ಚರ್ಚೆ ನಡೆಯುತ್ತಿದ್ದಾಗ ಯಡಿಯೂರಪ್ಪ ಅವರನ್ನು ಬೆಂಬಲಿಸಬಾರದಿತ್ತು. ಮುಂದಕ್ಕಾದರೂ ಶಾಮನೂರು, ಎಂ.ಬಿ. ಪಾಟೀಲ ಅವರು ತಮ್ಮ ನಡೆ ತಿದ್ದುಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

ಸಿದ್ದು ಮುಂದಿನ ಸಿಎಂ ಎಂದವರ ವಿರುದ್ಧ ಸುರೇಶ್ ಕಿಡಿ: 'ಕೈ'ನಲ್ಲಿ ಕೋಲಾಹಲ

ಆಪರೇಷನ್‌ ಹಸ್ತ ಮಾಡುತ್ತಿಲ್ಲ- ಕಾಂಗ್ರೆಸ್‌ ಈಗ 2023ರ ಚುನಾವಣೆಗೆ ತಯಾರಿ ಮಾಡುತ್ತಿದೆ. ಆಪರೇಷನ್‌ ಹಸ್ತ ಮಾಡುತ್ತಿಲ್ಲ. ಈ ಬಗ್ಗೆ ಕೇಂದ್ರದ ನಾಯಕರಿಗೂ ಆಸಕ್ತಿ ಇಲ್ಲ. ಆಪರೇಷನ್ ಹಸ್ತ ಎಂಬುದೆಲ್ಲ ಸುಳ್ಳು ಎಂದು ಇದೇ ವೇಳೆ ಡಿ.ಕೆ.ಸುರೇಶ್‌ ತಿಳಿಸಿದರು.

ಚುನಾವಣೆಯು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಅದು ಕಾಂಗ್ರೆಸ್‌ ಇತಿಹಾಸ. ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ಎಲ್ಲರ ಉದ್ದೇಶ. ಸಮುದಾಯದ ಒತ್ತಡದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರ ನೇಮಿಸುವ ಅಭಿಪ್ರಾಯ ಬಂದಿರಬಹುದು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬುದು ಕೂಡ ಅವರವರ ವೈಯಕ್ತಿಕ ಅಭಿಪ್ರಾಯ. ಆದರೆ ಅದು ಕೊನೆಗೆ ಬೇರೆ ಬೇರೆ ದಾರಿಗಳನ್ನು ಹಿಡಿಯುತ್ತಿತ್ತು ಎಂದರು.

click me!