* ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಆಗುವ ಕಾಲ ಕೂಡಿ ಬಂತಾ?
* ಶ್ರೀರಾಮುಲು ಕನಸು ನನಸಾಗುವ ಸಮಯ
* ದೆಹಲಿಯಲ್ಲಿ ರಾಮುಲು ಜೊತೆ ಹೈಕಮಾಂಡ್ ಮಹತ್ವದ ಮಾತುಕತೆ
ಬೆಂಗಳೂರು, (ಜು.21): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಧ್ಯೆ ಸಚಿವ ಬಿ. ಶ್ರೀರಾಮುಲುಗೆ ಉಪಮುಖ್ಯಮಂತ್ರಿಯಾಗುವ ಕಾಲ ಕೂಡಿ ಬಂದಂತಿದೆ.
ಹೌದು.. ಹಲವು ವರ್ಷಗಳಿಂದ ಕಾದು ಡಿಸಿಎಂ ಹುದ್ದೆ ಎದುರು ನೋಡುತ್ತಿದ್ದ ಶ್ರೀರಾಮುಲು ಕನಸು ನನಸಾಗುವ ಸಮಯ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂಕರವೆಂಬಂತೆ ಈ ಬಗ್ಗೆ ಮಾತುಕತೆಗೆ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
undefined
ಹೈ ಕಮಾಂಡ್ ಬುಲಾವ್, ದಿಢೀರನೆ ದೆಹಲಿಗೆ ತೆರಳಿದ ಶ್ರೀರಾಮುಲು
ನಾಯಕತ್ವ ಬದಲಾವಣೆಯ ವೇಳೆ ಡಿಸಿಎಂಗಳ ಬದಲಾವಣೆಗೆ ಸಹ ಹೈಕಮಾಂಡ್ ಮುಂದಾಗಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿ.ಎಲ್.ಸಂತೋಷ್ ಸೇರಿಕೊಂಡು ಡಿಸಿಎಂ ಹುದ್ದೆ ಹಾಗೂ ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶ್ರೀರಾಮುಲು ಜೊತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ,
ಕೇಂದ್ರ ಸಂಪುಟ ಪುನಾರಚನೆ ವೇಳೆ ಹೆಚ್ಚಾಗಿ ಹಿಂದುಳಿದ ನಾಯಕರಿಗೆ ಬಿಜೆಪಿ ಮಣೆ ಹಾಕಿದೆ. ಅದರಂತೆ ಇದೀಗ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮತ ಸೆಳೆಯಲು ಬಿಜೆಪಿ ಹೈಕಮಾಂಡ್ ತಂತ್ರ ರೂಪಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸ್ಥಾನಕ್ಕೆ ಮೇಲ್ವರ್ಗದ ನಾಯಕನ್ನನ್ನು ಕೂಡಿಸಿ, ನಾಯಕ ಸಮುದಾಯದ ರಾಮುಲುಗೆ ಉಪಮುಖ್ಯಮಂತ್ರಿ ಕಟ್ಟುವ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಉಪಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿ ಹೈಕಮಾಂಡ್ ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಪ್ರಚಾರ ಸಮಾವೇಶಗಳಲ್ಲಿ ಭರವಸೆ ನೀಡಿತ್ತು. ಆದ್ರೆ, ಆ ಭರವಸೆ ಹಾಗೇ ಉಳಿದಿದ್ದರಿಂದ ನಾಯಕ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಬಿಜೆಪಿ ರಾಮುಲಿಗೆ ಅನ್ಯಾಯ ಮಾಡಿದೆ ಅಂತೆಲ್ಲಾ ಸಾಮಾಜಿಕ ಜಾಲತಾಣಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.
ಸದಾನಂದಗೌಡ್ರನ್ನ ಭೇಟಿಯಾದ ಶ್ರೀರಾಮುಲು, ಜನಾರ್ದನ ರೆಡ್ಡಿ
ಅಲ್ಲದೇ ಮೊನ್ನೆ ನಡೆದ ಮಸ್ಕಿ ಉಪಚುನಾವಣೆ ಸಂದರ್ಭದಲ್ಲೂ ಶ್ರೀರಾಮುಲು ಅವರನ್ನ ಡಿಸಿಎಂ ಮಾಡದ ಬಿಜೆಪಿಗೆ ವೋಟ್ ಇಲ್ಲ ಎನ್ನುವ ಗಾಳಿ ಹಬ್ಬಿತ್ತು. ಅದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಾರಕವಾಗಿಯೂ ಪರಿಣಮಿಸಿತ್ತು
ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಹಿಂದಿನಿಂದಲೂ ಕಣ್ಣಿಟ್ಟಿದ್ದ ಶ್ರೀರಾಮುಲು, ತಮ್ಮ ಆಕಾಂಕ್ಷೆಯನ್ನು ಸಮುದಾಯದ ಪೀಠಾಧಿಪತಿಗಳು, ಗಣ್ಯರ ಮೂಲಕ ವ್ಯಕ್ತ ಪಡಿಸುತ್ತಲೇ ಇದ್ದರು. ಆದರೆ, ಇದ್ಯಾವುದೂ ಇದುವರೆಗೆ ವರ್ಕೌಟ್ ಆಗಿರಲಿಲ್ಲ.
ಅಲ್ಲದೇ ಆರೋಗ್ಯ ಇಲಾಖೆಯನ್ನು ಕಿತ್ತುಕೊಂಡಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ರಾಮುಲು ಸಿಟ್ಟಾಗಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಕ್ರಮದ ವಿರುದ್ದ, ಒಂದು ಹಂತದಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು.
ಬಳಿಕ ವರಿಷ್ಠರಿಂದ ಬಂದ ಸಂದೇಶವೇ ಶ್ರೀರಾಮುಲು ಶಾಂತವಾಗಿರಲು ಕಾರಣ ಎನ್ನುವ ಮಾತು ಬಿಜೆಪಿ ಪಡಶಾಲೆಯಲ್ಲಿ ಓಡಾಡಿತ್ತು.ಇದೀಗ ಶ್ರೀರಾಮುಲು ಇಷ್ಟು ದಿನಗಳ ಕಾಲ ಕಾದಿರುವುದಕ್ಕೆ ಸೂಕ್ತ ಫಲ ಸಿಗುವ ಎಲ್ಲಾ ಸಾಧ್ಯತೆಗಳು ಇವೆ.