ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ (ಜು.18): ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೆಚ್ಚಾಗುತ್ತಿದೆ. ಜೊತೆಗೆ ಸಾರಿಗೆ ನಿಗಮಕ್ಕೂ ಸಹ ಆದಾಯ ಹೆಚ್ಚಳವಾಗಿದೆ.
ಶೀಘ್ರವೇ ಗೃಹಜ್ಯೋತಿ ಯೋಜನೆಯೂ ಜಾರಿಯಾಗಲಿದೆ ಎಂದರು. ನೆರೆಯ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್‌ನಿಂದ ಹೊರ ಬಂದಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರು ಮೊದಲು ಪ್ರತಿಪಕ್ಷ ಸ್ಥಾನದ ನಾಯಕನನ್ನು ಆಯ್ಕೆ ಮಾಡಲಿ ಎಂದು ತಿರುಗೇಟು ನೀಡಿದ ಅವರು, ಬಿಜೆಪಿಗೆ ವಿರೋಧ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆಯೂ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರ: ಎಚ್.ವಿಶ್ವನಾಥ್
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿವೆ: ಮಕ್ಕಳಿಗೆ ಶಿಕ್ಷಣ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಈಗಾಗಲೇ ಬ್ಯಾಗ್ ಹೊರೆಯನ್ನು ತಗ್ಗಿಸಲು ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೊಟ್ಟೆಯನ್ನು 10ನೇ ತರಗತಿವರೆಗೂ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತಿದ್ದಂತೆ ಯೋಜನೆಗೆ ಒಪ್ಪಿಗೆ ಸೂಚಿಸಿದರು. ಇನ್ನೂ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲಾಗಿದೆ. ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದಕ್ಕಾಗಿಯೇ ರಾಜ್ಯದಲ್ಲಿಯೇ ಜನತೆ ಬಹುಮತ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಪರ ಧ್ವನಿ ಎತ್ತದ ಸಂಸದರು: ರಾಜ್ಯದ ಇತಿಹಾಸದಲ್ಲಿ ಬಿಜೆಪಿ ಸರ್ಕಾರ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿರುವ ದಾಖಲೆಯೇ ಇಲ್ಲ. ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ರಾಜ್ಯದಿಂದ ಸುಮಾರು 4 ಲಕ್ಷ ಕೋಟಿ ರು. ಸಂದಾಯವಾಗುತ್ತದೆ. ಆದರೆ, ರಾಜ್ಯಕ್ಕೆ ನೀಡುವ ಪಾಲು ಕೇವಲ .54 ಸಾವಿರ ಕೋಟಿ ಮಾತ್ರ. ಈ ಬಗ್ಗೆ ಇಲ್ಲಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರುಗಳು ಒಮ್ಮೆಯೂ ದೆಹಲಿಯಲ್ಲಿ ಧ್ವನಿ ಎತ್ತುತ್ತಿಲ್ಲ. ರಾಜ್ಯ ಸರ್ಕಾರ ಜನರು ನೀಡಿದ ತೆರಿಗೆ ಹಣವನ್ನು ಜನರಿಗೆ ತಲುಪಿಸುವ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಜನತೆಯನ್ನು ಮರುಳು ಮಾಡುವ ಕೆಲಸ ಮಾಡಿದೆ. ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಿ, ಗ್ಯಾಸ್ ಒಲೆ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಿದ್ದಾರೆಯೇ ಹೊರತು ಜನತೆಗೆ ಉಪಯೋಗವಾಗಲಿಲ್ಲ.
ಪಾಸಿಟಿವ್ ಮನಸ್ಥಿತಿಯೇ ಒಂದು ಔಷಧ ಇದ್ದಂತೆ: ಡಾ.ಸಿ.ಎನ್.ಮಂಜುನಾಥ್
ಗ್ರಾಮೀಣ ಮಹಿಳೆಯರ ಕಣ್ಣೀರು ಒರೆಸುತ್ತೇವೆ ಎಂದ ಕೇಂದ್ರ ಬಿಜೆಪಿ ಸರ್ಕಾರ, ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿ, ಮನೆಯ ಯಜಮಾನ ಇದೀಗ ಸಿಲಿಂಡರ್ ಕೊಳ್ಳಲು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಈ ಹಿಂದೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರು., ಹಾಕುವುದಾಗಿ ತಿಳಿಸಿದ್ದರು. ಆದರೆ, ಸ್ವಿಸ್ ಬ್ಯಾಂಕ್‌ನಲ್ಲಿ ಬಿಜೆಪಿಯವರದ್ದೆ ಹೆಚ್ಚಿನ ಹಣ ಇರಬೇಕು. ಆದ್ದರಿಂದ ಈವರೆಗೂ ಹಣ ವಾಪಾಸ್ ತರಲು ಅವರಿಗೆ ಸಾಧ್ಯವಾಗಿಲ್ಲ ಎಂದು ಕುಟುಕಿದರು. ಈ ಸಂದರ್ಭದಲ್ಲಿ ಆನವಟ್ಟಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಮುಖಂಡರಾದ ತಬಲಿ ಬಂಗಾರಪ್ಪ, ಎಚ್. ಗಣಪತಿ ಹುಲ್ತಿಕೊಪ್ಪ, ಎಂ.ಡಿ. ಶೇಖರ್, ಜಯಶೀಲಪ್ಪ ಸೇರಿದಂತೆ ಇತರರಿದ್ದರು.