ಕರ್ನಾಟಕ 'ಕಮಲ' ಪಾಳಯದಲ್ಲಿ ನವೋತ್ಸಾಹ: ಬಿಜೆಪಿ ಪರ ಒಲವು ಹೆಚ್ಚುವ ವಿಶ್ವಾಸದಲ್ಲಿ ಕೇಸರಿ ಪಡೆ

Published : Oct 25, 2022, 06:28 AM ISTUpdated : Oct 25, 2022, 07:59 AM IST
ಕರ್ನಾಟಕ 'ಕಮಲ' ಪಾಳಯದಲ್ಲಿ ನವೋತ್ಸಾಹ: ಬಿಜೆಪಿ ಪರ ಒಲವು ಹೆಚ್ಚುವ ವಿಶ್ವಾಸದಲ್ಲಿ ಕೇಸರಿ ಪಡೆ

ಸಾರಾಂಶ

ಪರಿಶಿಷ್ಟ ಮೀಸಲು ಹೆಚ್ಚಳ, ಕೆಂಪೇಗೌಡ ಪ್ರತಿಮೆಯಿಂದ ಭರ್ಜರಿ ಲಾಭ ನಿರೀಕ್ಷೆ, ವಾಲ್ಮೀಕಿ ಶ್ರೀಗಳ 257 ದಿನಗಳ, ಅಹೋರಾತ್ರಿ ಧರಣಿ ವಾಪಸ್‌

ಬೆಂಗಳೂರು(ಅ.25):  ಪರಿಶಿಷ್ಟರ ಮೀಸಲಾತಿ ಹೆಚ್ಚಳಗೊಳಿಸಿ ರಾಜ್ಯ ಸರ್ಕಾರ ಭಾನುವಾರ ಸುಗ್ರೀವಾಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಕಳೆದ 257 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸೋಮವಾರ ಹಿಂಪಡೆದಿದ್ದಾರೆ. ಸರ್ಕಾರದ ಆದೇಶದ ಪ್ರತಿಯನ್ನು ಸ್ವಾಮೀಜಿಗೆ ಸಚಿವ ಅಶೋಕ್‌ ಅವರು ನೀಡಿ ಸಿಹಿ ತಿನ್ನಿಸಿದರು. ಬಳಿಕ ಶ್ರೀಗಳು ಧರಣಿ ಹಿಂಪಡೆದರು. ಮೀಸಲಾತಿ ಹೆಚ್ಚಳಕ್ಕಾಗಿ ಫೆ.1ರಿಂದ ಬೆಂಗಳೂರಿನಲ್ಲಿ ವಾಲ್ಮೀಕಿ ಶ್ರೀ ಧರಣಿ ನಡೆಸುತ್ತಿದ್ದರು.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ನಡೆಸಿದ ‘ಪೇ ಸಿಎಂ’ ಅಭಿಯಾನದಿಂದ ಮಂಕಾಗಿದ್ದ ಬಿಜೆಪಿ ಪಾಳಯದಲ್ಲಿ ಮತ್ತೆ ವಿಶ್ವಾಸ ಮತ್ತು ಉತ್ಸಾಹ ಗರಿಗೆದರಿದೆ. ಇದಕ್ಕೆ ಕಾರಣ- ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಅತಿ ಎತ್ತರದ ಕಂಚಿನ ಪ್ರತಿಮೆ ಅನಾವರಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನ.11ರಂದು ಭರ್ಜರಿಯಾಗಿ ನಡೆಸಲು ನಿರ್ಧರಿಸಿರುವುದು.

ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧದ ಪೇಸಿಎಂ ಮೊಕದ್ದಮೆ ವಜಾ

ಈ ಎರಡು ಬೆಳವಣಿಗೆಗಳು ಸಹಜವಾಗಿಯೇ ಪಕ್ಷಕ್ಕೆ ಅನುಕೂಲ ತಂದು ಕೊಡುತ್ತವೆ. ಪರಿಶಿಷ್ಟರು ಹಾಗೂ ಒಕ್ಕಲಿಗರಲ್ಲಿ ಬಿಜೆಪಿ ಪರ ಒಲವು ಹೆಚ್ಚಲಿದೆ ಎಂಬ ನಿರೀಕ್ಷೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೊಂದಿದ್ದಾರೆ. ಕಾಂಗ್ರೆಸ್‌ನ ಅಭಿಯಾನದಿಂದ ಉಂಟಾಗಿದ್ದ ಹಿನ್ನಡೆಯಿಂದ ಹೊರಬರಲು ಇದು ಅನುಕೂಲವಾಗಲಿದೆ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರು.

ನಿಟ್ಟುಸಿರು:

‘ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರ ಸತತ ವಾಗ್ದಾಳಿ, ಟೀಕೆ-ಟಿಪ್ಪಣಿಗಳಿಂದ ಕಂಗೆಟ್ಟಿದ್ದ ನಮಗೆ ಈಗ ನಿಟ್ಟುಸಿರು ಬಿಡುವಂತಾಗಿದೆ. ಇದು ಇಲ್ಲಿಗೆ ನಿಲ್ಲಬಾರದು. ಇನ್ನಷ್ಟುಜನಪರ ಕೆಲಸಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮುಂದುವರೆಸಿದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

'ಶ್ರೀರಾಮುಲು ವರ್ಚಸ್ಸು ಸಹಿಸದೆ ಸಿದ್ದರಾಮಯ್ಯ ಹತಾಶ'

ಪರಿಶಿಷ್ಟರಿಗೆ ಬಿಜೆಪಿ ಒಲವು ಹೆಚ್ಚಳ:

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮೀಸಲಾತಿ ಹೆಚ್ಚಳದಿಂದ ಆ ಸಮುದಾಯಗಳ ಜನರಲ್ಲಿ ಬಿಜೆಪಿ ಬಗ್ಗೆ ಒಲವು ಹೆಚ್ಚಲಿದೆ. ಬಿಜೆಪಿ ಕೇವಲ ಮೇಲ್ವರ್ಗದವರ ಅಥವಾ ಮುಂದುವರೆದ ಸಮುದಾಯಗಳ ಪಕ್ಷವಲ್ಲ ಎಂಬುದು ಮತ್ತಷ್ಟುನಿಚ್ಚಳವಾಗಲಿದೆ. ಇದನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳಲು ಧೈರ್ಯವಾಗಿ ಹೋಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಕೆಂಪೇಗೌಡ ಪ್ರತಿಮೆಯಿಂದ ಲಾಭ:

ಇನ್ನು ನಾಡಪ್ರಭು ಕೆಂಪೇಗೌಡ ಪ್ರತಿನಿಧಿಸುವ ಹಳೆ ಮೈಸೂರು ಭಾಗದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಹೋಲಿಸಿದರೆ ಬಿಜೆಪಿ ವರ್ಚಸ್ಸು ಅಷ್ಟೊಂದು ಉತ್ತಮವಾಗಿಲ್ಲ. ಈ ಭಾಗದಲ್ಲಿ ಒಕ್ಕಲಿಗರೇ ಪ್ರಾಬಲ್ಯರು. ಇದೀಗ ಆ ಸಮುದಾಯದ ಮೇಲೆ ತೀವ್ರ ಪ್ರಭಾವ ಹೊಂದಿರುವ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅವರದೇ ಹೆಸರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸ್ಥಾಪಿಸುತ್ತಿದ್ದು, ವಿಶಾಲವಾದ ಥೀಮ್‌ ಪಾರ್ಕ್ ರೂಪುಗೊಳ್ಳುತ್ತಿದೆ. ಬರುವ ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಪ್ರತಿಮೆಯನ್ನು ಅನಾವರಣ ಮಾಡುವುದರಿಂದ ದೊಡ್ಡ ಪ್ರಮಾಣದಲ್ಲಿ ಸಮಾರಂಭ ಆಯೋಜಿಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಇದು ಸಹಜವಾಗಿಯೇ ಒಕ್ಕಲಿಗ ಸಮುದಾಯದ ವಿಶ್ವಾಸ ಗಳಿಸಲು ನೆರವಾಗಲಿದೆ ಎಂಬ ನಿರೀಕ್ಷೆ ಬಿಜೆಪಿ ನಾಯಕರದ್ದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು