ಮೀಸಲು ಸುಗ್ರೀವಾಜ್ಞೆ ‘ಚಾಕೋಲೇಟ್‌’: ಡಿಕೆಶಿ ಕಿಡಿ

Published : Oct 25, 2022, 02:45 AM IST
ಮೀಸಲು ಸುಗ್ರೀವಾಜ್ಞೆ ‘ಚಾಕೋಲೇಟ್‌’: ಡಿಕೆಶಿ ಕಿಡಿ

ಸಾರಾಂಶ

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಸ್ಸಿ ಹಾಗೂ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬದ್ಧತೆಯಿಲ್ಲ. ಹೀಗಾಗಿಯೇ ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಕೇಂದ್ರ ಮಟ್ಟದಲ್ಲಿ ಕುಳಿತು ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಕೆಲಸ ಮಾಡುತ್ತಿಲ್ಲ.

ಬೆಂಗಳೂರು (ಅ.25): ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಸ್ಸಿ ಹಾಗೂ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬದ್ಧತೆಯಿಲ್ಲ. ಹೀಗಾಗಿಯೇ ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಕೇಂದ್ರ ಮಟ್ಟದಲ್ಲಿ ಕುಳಿತು ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಸುಗ್ರೀವಾಜ್ಞೆ ಹೆಸರಿನ ಚಾಕೊಲೇಟ್‌ ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಸ್ಸಿ ಹಾಗೂ ಎಸ್ಟಿಮೀಸಲಾತಿ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಎರಡೂ ಕಡೆ ಅಧಿಕಾರಕ್ಕೆ ಬಂದರೂ ಮಾಡಲಿಲ್ಲ. ಈಗ ಅಧಿಕಾರದ ಕಡೆಯ ಗಳಿಗೆಯಲ್ಲಿ ಒತ್ತಡ ಹೆಚ್ಚಾಗುತ್ತಿರುವುದರಿಂದ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವುದಾಗಿ ಆದೇಶ ಮಾಡಿದ್ದಾರೆ. ಅವರಿಗೆ ಪರಿಶಿಷ್ಟರ ಬಗ್ಗೆ ಬದ್ಧತೆಯಿಲ್ಲ. ಇದ್ದಿದ್ದರೆ ಇಷ್ಟುದಿನ ಕಾಲಹರಣ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಕರ್ನಾಟಕದಾದ್ಯಂತ ಇನ್ನು ಕಾಂಗ್ರೆಸ್‌ ಬಸ್‌ ಯಾತ್ರೆ: ಡಿ.ಕೆ.ಶಿವಕುಮಾರ್‌

‘ಈಗಲೂ ಡಬಲ್‌ ಎಂಜಿನ್‌ ಸರ್ಕಾರ ಇದೆ. ಹೀಗಾಗಿ ಸುಗ್ರೀವಾಜ್ಞೆ ಬದಲು ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆದು ಅಲ್ಲಿ ಚರ್ಚೆ ಮಾಡಿ ಈ ಮೀಸಲಾತಿಗೆ ಅನುಮೋದನೆ ನೀಡಿ ಎಂದು ಸಲಹೆ ನೀಡಿದ್ದೇವೆ. ಒಂದು ದಿನದ ಮಟ್ಟಿಗೆ ವಿಶೇಷ ಅಧಿವೇಶನ ಕರೆದರೂ ನಾವು ಸಿದ್ಧ ಎಂದು ಹೇಳಿದ್ದೆವು. ಅಧಿವೇಶನದಲ್ಲಿ ಒಪ್ಪಿಗೆ ಪಡೆದು ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ 9ನೇ ಶೆಡ್ಯೂಲ್‌ನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಈ ಮೀಸಲಾತಿಯನ್ನು ದಾಖಲೆ ರೂಪದಲ್ಲಿ ತರಲಿ. ಕೇವಲ ಸುಗ್ರೀವಾಜ್ಞೆ ಮೂಲಕ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ’ ಎಂದು ಒತ್ತಾಯ ಮಾಡಿದರು.

ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಶ್ರೇಯ ಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಆಧಾರದ ಮೇಲೆ ಕೆಲಸ ಸಿಗುತ್ತಿರುವುದು ಕಾಂಗ್ರೆಸ್‌ ಪಕ್ಷದಿಂದ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡುವ ಕುರಿತು ನಾಗಮೋಹನ್‌ದಾಸ್‌ ಸಮಿತಿ ರಚಿಸಿದ್ದೂ ಸಹ ನಾವೇ. ನಮ್ಮ ಒತ್ತಾಯದಿಂದ ಹಾಗೂ ಸ್ವಾಮೀಜಿಗಳ ಹೋರಾಟದಿಂದ ಇದೀಗ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಖ್ಯಮಂತ್ರಿಗಳಿಗೆ ಬದ್ಧತೆಯಿದ್ದರೆ 15 ದಿನ ದೆಹಲಿಯಲ್ಲೇ ಕುಳಿತು ಮೀಸಲಾತಿ ಹೆಚ್ಚಳ ಮಾಡಿಸಿಕೊಂಡು ಬರಲಿ ಎಂದು ಹೇಳಿದರು.

ಸುಗ್ರೀವಾಜ್ಞೆ ಮೂಲಕ ಹೆಚ್ಚಿಸಿರುವ ಮೀಸಲಾತಿ ಅನುಷ್ಠಾನವಾಗಲ್ಲವೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಕಾನೂನು ಸಚಿವರನ್ನೇ ಕೇಳಿ, ಸರ್ಕಾರ ಉತ್ತರ ಕೊಡಲಿ’ ಎಂದರು. ಒಕ್ಕಲಿಗರ ಮೀಸಲಾತಿ ಬೇಡಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಸ್ವಾಮೀಜಿ ಏನು ಹೇಳಿದ್ದಾರೆಂಬ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ನಾನು ಈಗಷ್ಟೇ ಭಾರತ ಐಕ್ಯತಾ ಯಾತ್ರೆ ಮುಗಿಸಿ ಬರುತ್ತಿದ್ದೇನೆ’ ಎಂದಷ್ಟೇ ಹೇಳಿದರು.

150 ಸೀಟು ಗೆಲ್ಲಲು ರಾಗಾ ಪಾದಯಾತ್ರೆ ಉತ್ಸಾಹ: ಡಿ.ಕೆ.ಶಿವಕುಮಾರ್‌

ಶ್ರೀಗಳು ಈಗ ಅಭಿನಂದನೆ ಹೇಳಬಾರದಿತ್ತು: ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರಕ್ಕೆ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ವಾಮೀಜಿಗಳು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರಲ್ಲಿ ನಮ್ಮ ಆಕ್ಷೇಪ ಇಲ್ಲ. ನಾಗಮೋಹನ್‌ ದಾಸ್‌ ಸಮಿತಿ ರಚನೆ ಮಾಡಿದ ನಮಗೆ ಅಭಿನಂದನೆ ಸಲ್ಲಿಸದಿದ್ದರೂ ನಮಗೆ ಬೇಸರವಿಲ್ಲ. ಸಂಸತ್ತಿನಲ್ಲಿ ಈ ಪ್ರಸ್ತಾಪ ಸಲ್ಲಿಸಿ, ಅದಕ್ಕೆ ಸಾಂವಿಧಾನಿಕ ತಿದ್ದುಪಡಿ ತಂದ ಬಳಿಕ ಅವರು ಅಭಿನಂದನೆ ಸಲ್ಲಿಸಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್