ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ಯಾತ್ರೆಯಿಂದ ನನಗಿಂತ ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಹಾಗೂ ನೊಂದ ಜನರಿಗೆ ಲಾಭ ಆಗಿದೆ. ಪಕ್ಷದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಇಂತಹ ಯಾತ್ರೆ ನಡೆದಿದೆ ಎಂಬುದೇ ಹೆಮ್ಮೆ.
ಬೆಂಗಳೂರು (ಅ.25): ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ಯಾತ್ರೆಯಿಂದ ನನಗಿಂತ ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಹಾಗೂ ನೊಂದ ಜನರಿಗೆ ಲಾಭ ಆಗಿದೆ. ಪಕ್ಷದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಇಂತಹ ಯಾತ್ರೆ ನಡೆದಿದೆ ಎಂಬುದೇ ಹೆಮ್ಮೆ. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ, ಐಕ್ಯತಾ ಯಾತ್ರೆ ಮತ್ತೊಮ್ಮೆ ಮಾಡಲಾಗುವುದಿಲ್ಲ. ಇದು ನನ್ನ ಸೌಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾತ್ರೆಯ ಅಂತಿಮ ದಿನ ರಾಯಚೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಇವರೆಲ್ಲರೂ ಎಲ್ಲಿಂದ ಬಂದರು ಎನ್ನುವಷ್ಟು ಆಶ್ಚರ್ಯವಾಗುವಂತೆ ಯಾತ್ರೆ ಯಶಸ್ವಿಯಾಗಿದೆ. ಮಹಿಳೆಯರು, ಯುವಕರು, ರೈತರು, ಧ್ವನಿ ಇಲ್ಲದ ವರ್ಗಗಳಿಗೆ ಧೈರ್ಯ ತುಂಬಿದೆ. ಇದರಿಂದ ಪಕ್ಷ ಹಾಗೂ ಜನರಿಗೆ ಲಾಭವಾಗಿದೆ ಎಂಬುದು ಸಮಾಧಾನದ ವಿಚಾರ ಎಂದು ಹೇಳಿದರು.
ಕರ್ನಾಟಕದಾದ್ಯಂತ ಇನ್ನು ಕಾಂಗ್ರೆಸ್ ಬಸ್ ಯಾತ್ರೆ: ಡಿ.ಕೆ.ಶಿವಕುಮಾರ್
ಇದು ಸಾಮೂಹಿಕ ಪ್ರಯತ್ನದ ಯಶಸ್ಸು: ಬಳ್ಳಾರಿ ಸಮಾವೇಶದಲ್ಲಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ಈ ಯಾತ್ರೆಯಲ್ಲಿ ಎಲ್ಲರೂ ಶಕ್ತಿಮೀರಿ ಶ್ರಮಿಸಿದ್ದಾರೆ. ಎಲ್ಲರೂ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಆಗಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ತಮ್ಮ ಶಕ್ತಿಗೆ ಅನುಸಾರವಾಗಿ ಕೆಲಸ ಮಾಡಿದ್ದಾರೆ. ಪಕ್ಷ ಕಟ್ಟುವ, ಜನ ಸಂಘಟಿಸುವ ಹಾಗೂ ಕಸ ಎತ್ತುವ ಎಲ್ಲ ರೀತಿಯ ಕೆಲಸ ಮಾಡಿದ್ದಾರೆ. ನಾನು ಯಾರ ಶ್ರಮವನ್ನೂ ಅಲ್ಲಗೆಳೆಯುವುದಿಲ್ಲ. ಇದು ಸಾಮೂಹಿಕ ಯಶಸ್ಸು ಎಂದರು.
ನಾಯಕರಿಂದ ಲಿಖಿತ ವರದಿ ಪಡೆಯುತ್ತೇನೆ: ಯಾತ್ರೆಯಲ್ಲಿ ಕೆಲಸ ಮಾಡಲು ಶಾಸಕರು ಹಾಗೂ ಅಭ್ಯರ್ಥಿಗಳು, ನಾಯಕರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿತ್ತು. ಯಾರಾರಯರು ಹೇಗೆ ಜವಾಬ್ದಾರಿ ನಿಭಾಯಿಸಿದ್ದಾರೆ ಎಂಬ ವರದಿ ನನ್ನ ಬಳಿ ಇದೆ. ಜತೆಗೆ ಎಲ್ಲರಿಂದಲೂ ಲಿಖಿತ ವರದಿ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.
150 ಸೀಟು ಗೆಲ್ಲಲು ರಾಗಾ ಪಾದಯಾತ್ರೆ ಉತ್ಸಾಹ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸುತ್ತಿರುವ ಐತಿಹಾಸಿಕ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ರಾಜ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಬದಲಾವಣೆಯ ಹೆಜ್ಜೆಯಾಗಿರುವ ಈ ಯಾತ್ರೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರಕಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ಮಕ್ಕಳು ಭಾಗಿಯಾಗಿದ್ದಾರೆ ಎಂದರು.
ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆಶಿ
ನಾವು ಹಾಕಿದ ರಸ್ತೆ ಮೇಲೆ ಕಾಂಗ್ರೆಸ್ ಯಾತ್ರೆ ಮಾಡುತ್ತಿದೆ ಎಂಬ ಬಿಜೆಪಿಯವರ ಲೇವಡಿ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕೊಟ್ಟಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್, ದೇಶದ ಜನರಿಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜವನ್ನು ಕೊಟ್ಟಿದೆ ಎಂದು ತಿರುಗೇಟು ನೀಡಿದರು. ಯಾತ್ರೆಯಲ್ಲಿ ಜನರು ಹೇಳಿಕೊಂಡಿರುವ ಸಮಸ್ಯೆ, ನೋವುಗಳಿಗೆ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ ಪ್ರಣಾಳಿಕೆಯಲ್ಲಿ ಅವುಗಳನ್ನು ಸೇರಿಸಲಾಗುವುದು. ಇಂದು ರೈತರು, ಜನ ಸಾಮಾನ್ಯರು, ಯುವಕರು ಜೀವನ ಮಾಡುವುದು ಕಷ್ಟವಾಗಿದೆ. ಯುವಕರಿಗೆ ಉದ್ಯೋಗ ಇಲ್ಲ. ರೈತರಿಗೆ ಬೆಂಬಲ ಬೆಲೆ ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಯಾತ್ರೆ ವೇಳೆ ಹೆಚ್ಚಿನ ಚರ್ಚೆ ಆಗಿದೆ. ರಾಜ್ಯದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.