ಅಮಿತ್‌ ಶಾ ಕಾಲಿಟ್ಟ ಮೇಲೆ ಬಿಜೆಪಿ ಪರ ಸುನಾಮಿ: ಸಿಎಂ ಬೊಮ್ಮಾಯಿ

By Govindaraj S  |  First Published Dec 31, 2022, 3:00 AM IST

ಬಿಜೆಪಿಯ ಗಾಳಿ ಎಲ್ಲೆಡೆ ಬೀಸುತ್ತಿದೆ. ಅಮಿತ್‌ ಶಾ ಕಾಲಿಟ್ಟಮೇಲೆ ಸುನಾಮಿಯಾಗಿ ಪರಿವರ್ತನೆಯಾಗಿದೆ. ಅಮಿತ್‌ ಶಾ ಅವರ ತಂತ್ರಗಳಿಗೆಲ್ಲಾ ಯಶಸ್ಸು ಸಿಗುತ್ತಿದ್ದು, 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


ಮಂಡ್ಯ (ಡಿ.31): ಬಿಜೆಪಿಯ ಗಾಳಿ ಎಲ್ಲೆಡೆ ಬೀಸುತ್ತಿದೆ. ಅಮಿತ್‌ ಶಾ ಕಾಲಿಟ್ಟಮೇಲೆ ಸುನಾಮಿಯಾಗಿ ಪರಿವರ್ತನೆಯಾಗಿದೆ. ಅಮಿತ್‌ ಶಾ ಅವರ ತಂತ್ರಗಳಿಗೆಲ್ಲಾ ಯಶಸ್ಸು ಸಿಗುತ್ತಿದ್ದು, 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿವಿ ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌, ಜೆಡಿಎಸ್‌ ಆಡಳಿತದಿಂದ ಈ ಭಾಗದ ಜನರು ಬೇಸತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆಗಳಿಗೆ ಅವರೆಂದಿಗೂ ಪರಿಹಾರ ದೊರಕಿಸಲಿಲ್ಲ. 

ಅಧಿಕಾರದುದ್ದಕ್ಕೂ ಭ್ರಷ್ಟಾಚಾರವನ್ನೇ ನಡೆಸಿಕೊಂಡು ಬಂದರು. ಅದಕ್ಕಾಗಿ ಈಗ ಜನರು ಬಿಜೆಪಿ ಕಡೆ ನೋಡುತ್ತಿದ್ದಾರೆ ಎಂದರು. ನಮ್ಮದು ಡಬಲ್‌ ಎಂಜಿನ್‌ ಸರ್ಕಾರ. ನಾವು ಅಧಿಕಾರಕ್ಕೆ ಬಂದ ನಂತರ ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್‌ ಹೈವೇ ನಿರ್ಮಿಸಿದ್ದೇವೆ. ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಿದ್ದೇವೆ. ವಿ.ಸಿ.ನಾಲೆಗಳ ಆಧುನೀಕರಣ, ಕೆಆರ್‌ಎಸ್‌ ಅಣೆಕಟ್ಟು ಗೇಟುಗಳ ಬದಲಾವಣೆ, ಸಣ್ಣ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಜಿಲ್ಲೆಗೆ ಅಭಿವೃದ್ಧಿಯ ಸ್ಪರ್ಶ ನೀಡಿದ್ದೇವೆ ಎಂದರು.

Tap to resize

Latest Videos

ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಬರಮಾಡಿಕೊಂಡ ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದನ್ನು ಜನ ನೋಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಬಿಬಿಎಂಪಿ, ಹಾಸ್ಟೆಲ್‌ಗಳಿಗೆ ನೀಡುವ ಹಾಸಿಗೆ-ದಿಂಬುಗಳಲ್ಲೂ ಅವ್ಯವಹಾರ ನಡೆಸಿದರು. ಅನ್ನಭಾಗ್ಯಕ್ಕೆ ಕನ್ನ ಹಾಕಿದರು. ಮೋದಿ ಅಕ್ಕಿಗೆ .30 ಕೊಟ್ಟರೆ .3 ಕೊಟ್ಟಸಿದ್ದರಾಮಯ್ಯ, ಆ ಯೋಜನೆ ನನ್ನದೇ ಎಂದು ಜನರಿಗೆ ಸುಳ್ಳು ಹೇಳಿದರು. ಕಾಂಗ್ರೆಸ್‌-ಜೆಡಿಎಸ್‌ನ ಬ್ಲಾಕ್‌ ಅಂಡ್‌ ವೈಟ್‌ ಸಿನಿಮಾ ನೋಡಿದ್ದೀರಿ. ಇನ್ನು ಮುಂದೆ ಬಿಜೆಪಿಯ ಕಲರ್‌ ಸಿನಿಮಾ ಹೇಗಿರುತ್ತದೆ ಎನ್ನುವುದನ್ನು ನೀವೇ ನೋಡಿ. ಕರ್ನಾಟಕವನ್ನು ಸುವರ್ಣ ಕರ್ನಾಟಕ ಮಾಡುವ ಸಂಕಲ್ಪ ಮಾಡಿದ್ದೇವೆ. ರೈತರ ಬದುಕನ್ನು ಬಂಗಾರ ಮಾಡುವ ಗುರಿ ಹೊಂದಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿದರೆ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತೇವೆ ಎಂದರು.

ಟನ್‌ ಕಬ್ಬಿಗೆ 100 ಹೆಚ್ಚಳ: ಇದಕ್ಕೂ ಮೊದಲು, ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿ, ಎಥೆನಾಲ್‌ ಹಾಗೂ ಮೊಲಾಸಸ್‌ ಉತ್ಪಾದನೆ ಮಾಡುವ ಸಕ್ಕರೆ ಕಾರ್ಖಾನೆಗಳು ಟನ್‌ ಕಬ್ಬಿಗೆ 100ನ್ನು ರೈತರಿಗೆ ನೀಡುವಂತೆ ಆದೇಶ ನೀಡಿದ್ದೇನೆ. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಉದ್ದೇಶದಿಂದ ಟನ್‌ ಕಬ್ಬಿಗೆ ಮೊದಲು ನೀಡಲಾಗುತ್ತಿದ್ದ 50ಗಳನ್ನು 100ಗೆ ಹೆಚ್ಚಿಸಲಾಗಿದೆ. ಎಥೆನಾಲ್‌ ಇಲ್ಲದ ಕಾರ್ಖಾನೆಗಳಲ್ಲೂ ಪ್ರತಿ ಟನ್‌ಗೆ 100 ಹೆಚ್ಚಳ ಮಾಡುವ ಆದೇಶ ಹೊರಡಿಸಿದ್ದೇನೆ. ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರವೇ ಮತ್ತೆ ಪ್ರಾರಂಭಿಸಿದೆ. ಕಾರ್ಖಾನೆಯಲ್ಲಿ ಮುಂದೆ ಎಥೆನಾಲ್‌ ಘಟಕ ಸ್ಥಾಪನೆ ಮಾಡುತ್ತೇವೆ ಎಂದರು.

ಸಿಎಂ ಬೊಮ್ಮಾಯಿಗೆ ಅಧಿಕಾರವಿಲ್ಲ: ಸಿ.ಎಂ.ಇಬ್ರಾಹಿಂ

ಕರ್ನಾಟಕ ಹಾಲು ಉತ್ಪಾದನೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಹೀಗಾಗಿ, ಪ್ರತಿ ಲೀಟರ್‌ ಹಾಲಿಗೆ ಇಂದು 5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಸಹಕಾರ ಕ್ಷೇತ್ರವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ ಸಹಕಾರ ರಂಗಕ್ಕೆ ಶಕ್ತಿ ತುಂಬುವುದರೊಂದಿಗೆ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಬೆಂಗಳೂರಿನಲ್ಲಿ ಪ್ರಥಮವಾಗಿ ಆರಂಭವಾದ ಮೇಗಾ ಡೇರಿ ಸ್ಥಾಪನೆಯಲ್ಲಿ ದೇವೇಗೌಡರ ಪಾತ್ರವಿದೆ. ಅಲ್ಲಿಂದ ಪ್ರಾರಂಭವಾದ ಮೇಗಾ ಡೇರಿ ಇಂದು ರಾಜ್ಯದ ಎಲ್ಲೆಡೆ ಸ್ಥಾಪನೆಯಾಗುತ್ತಿದೆ. ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತದ ಕನಸಿಗೆ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.

click me!