
ಬೆಂಗಳೂರು (ಜೂ.14): ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ನಡೆಸದಿರುವ ಭ್ರಷ್ಟಾಚಾರವಿಲ್ಲ. ಮೇವು ತಿಂದವರು ಜೈಲಿನಲ್ಲಿದ್ದು, ಈಗ ಪೇಪರ್ ತಿಂದವರು ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಂವಿಧಾನಕ್ಕಿಂತ ಮೇಲ್ಪಟ್ಟವರಾ? ಹಗರಣಗಳ ಸರದಾರ ಕಾಂಗ್ರೆಸ್ ಪಕ್ಷ. ಕಾಲಿನಿಂದ ತಲೆಯವರೆಗೂ ಹಗರಣ ಹೊದ್ದುಕೊಂಡಿರುವುದು ಕಾಂಗ್ರೆಸ್. ಇಂಡಿಯನ್ ಆಯಿಲ್ ಹಗರಣ, 2ಜಿ ಸ್ಪೆಕ್ಟ್ರಂ, ಅಗಸ್ಟಾವೆಸ್ಟಾಲ್ಯಾಂಡ್ ಹೀಗೆ ಸಾಕಷ್ಟುಹಗರಣವನ್ನು ಕಾಂಗ್ರೆಸ್ ಮಾಡಿದೆ.
ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರಿಗಳೇ ಬೆಂಬಲ ಕೊಡುತ್ತಿದ್ದಾರೆ. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಕಾಂಗ್ರೆಸ್‌ನವರು ಬೀದಿಗಿಳಿದಿದ್ದಾರೆ ಎಂದು ಕಾಂಗ್ರೆಸ್‌ನ ಹೋರಾಟವನ್ನು ವ್ಯಂಗ್ಯವಾಡಿದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ದೆಹಲಿಯಲ್ಲಿ ಪೊಲೀಸರಿಂದ ತಪ್ಪಿಕೊಂಡು ಓಡಿ ಹೋಗಿದ್ದಾರೆ. ಮುಖಂಡನೇ ಶಿಖಂಡಿಯಾದರೆ ಹಿಂಬಾಲಕರ ಗತಿ ಏನಯ್ಯ ಎಂದು ಲೇವಡಿ ಮಾಡಿದರು. ಗಾಂಧಿ ಕುಟುಂಬದ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ದೇಶಕ್ಕಿಂತ ನಾವು ದೊಡ್ಡವರು ಎಂದು ಅವರು ತಿಳಿದುಕೊಂಡಿರುವುದು ದುರಂತ.
ಸಿದ್ದರಾಮಯ್ಯಗೆ ಆರ್‌ಎಸ್‌ಎಸ್ ಪುಸ್ತಕ ಕಳುಹಿಸುವೆ: ಸಿ.ಟಿ.ರವಿ
ಒಂದು ವೇಳೆ ತಪ್ಪು ಮಾಡಿಲ್ಲವೆಂದರೆ ಕಾಂಗ್ರೆಸ್‌ನವರಿಗೆ ಭಯ ಯಾಕೆ? ಆಲೂಗಡ್ಡೆಯಲ್ಲಿ ಚಿನ್ನ ತೆಗೆಯುವುದು ಹೇಗೆ ಎಂಬುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದರು. 50 ಲಕ್ಷ ರು. ಹಾಕಿ ಸಾವಿರಾರು ಕೋಟಿ ರು. ಪಡೆಯುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದರು. ಕೃಷಿ ಮಾಡಿ ಆಸ್ತಿ ಮಾಡಿದವರು ರಾಜ್ಯದಲ್ಲಿದ್ದು, ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ದಿನವೂ ಕೃಷಿ ಮಾಡುವ ರೈತರು ಕಷ್ಟದಲ್ಲಿದ್ದಾಗ, ಇವರು ಮಾತ್ರ ಕೃಷಿಯಲ್ಲಿ ಸಾವಿರಾರು ಕೋಟಿ ರು. ಗಳಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಿಎಂ ಹುದ್ದೆಗೆ ಯೋಗ್ಯತೆ ಅನೇಕರಿಗಿದೆ, ಮುಖ್ಯಮಂತ್ರಿ ಆಗಲು ಯೋಗ ಬೇಕು: ಯೋಗ್ಯತೆ ಇರುವವರು ಅನೇಕರು ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿನ ಬಗ್ಗೆ ಪ್ರತಿಕ್ರಿಯಿಸಿರುವ ರವಿ, ‘ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ ತೀರ್ಪು ನೀಡುತ್ತಾನೆ. ಯಾರಾರಯರ ಹಣೆಯಲ್ಲಿ ಏನು ಬರೆದಿದೆಯೋ ಎಂಬುದು ಗೊತ್ತಿರಲ್ಲ.
ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆಗೆ ಸಿ.ಟಿ ರವಿ ತಿರುಗೇಟು
ರಾಜಕಾರಣದಲ್ಲಿ ಅನೇಕರು ಗದ್ದುಗೆ ಏರಿರುವ ಉದಾಹರಣೆಗಳಿವೆ. ಕೆಲವರು ಅನಿರೀಕ್ಷಿತವಾಗಿ ಗದ್ದುಗೆ ಏರಿರುವುದೂ ಇದೆ’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯೋಗ್ಯತೆ ಇರುವವರು ಅನೇಕರು ಇದ್ದಾರೆ. ಯೋಗ್ಯತೆ ಇದ್ದವರು ಮೇಲೆ ಬಂದರೂ ಯೋಗ ಇರಬೇಕಲ್ಲ. ಯೋಗ ಇದ್ದವರು ಕೆಲವೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.