ಬೆಂಗಳೂರು ಗ್ರಾಮಾಂತರ: ಸಂಸದರ ನಿಧಿ ಬಳಕೆಯಲ್ಲಿ ಡಿ.ಕೆ.ಸುರೇಶ್ ಮುಂದು..!

By Kannadaprabha News  |  First Published Mar 22, 2024, 10:55 AM IST

5 ವರ್ಷಗಳಲ್ಲಿ 18 ಕೋಟಿ 40 ಲಕ್ಷ ಅನುದಾನ ಬಿಡುಗಡೆ । ಶುದ್ಧ ಕುಡಿಯುವ ನೀರು ಘಟಕ, ಬಸ್ ತಂಗುದಾಣಗಳಿಗೆ ಸಿಂಹಪಾಲು । 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ವಿನಿಯೋಗ


ಎಂ.ಅಫ್ರೋಜ್ ಖಾನ್

ರಾಮನಗರ(ಮಾ.22): ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ನ ಏಕೈಕ ಸಂಸದ ಡಿ.ಕೆ.ಸುರೇಶ್ ರವರು ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಈ ಬಾರಿಯೂ ಮುಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿ.ಕೆ.ಸುರೇಶ್ ಅವರು ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಅಡಿ 5 ವರ್ಷಗಳ ಅವಧಿಯಲ್ಲಿ ದೊರೆತ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಪರಿಪೂರ್ಣವಾಗಿ ಬಳಕೆ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಕೋವಿಡ್ -19 ಕಾರಣದಿಂದಾಗಿ ಎರಡು ವರ್ಷ ಈ ನಿಧಿಗೆ ಹಣ ನೀಡಿರಲಿಲ್ಲ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಅನುದಾನ ಬಿಡುಗಡೆ ಮಾಡಲಾಯಿತು. ಡಿ.ಕೆ.ಸುರೇಶ್ ರವರು ಕೋವಿಡ್ ಪೂರ್ವದಲ್ಲೂ ಅನುದಾನ ಬಳಕೆಯಲ್ಲಿ ಮುಂದಿದ್ದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ: ಸಂಸದ ಡಿ.ಕೆ.ಸುರೇಶ್

ಕೇಂದ್ರ ಸರ್ಕಾರ ಸಂಸದ ಡಿ.ಕೆ.ಸುರೇಶ್ ರವರು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ 5 ವರ್ಷಗಳಲ್ಲಿ ಒಟ್ಟು 18ಕೋಟಿ 40 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ ಅವರು ಅಷ್ಟೂ ಅನುದಾನದ ಕಾಮಗಾರಿಗಳನ್ನು ಶಿಫಾರಸ್ಸು ಮಾಡಿದ್ದಾರೆ. ಉಳಿಕೆ ಅನುದಾನ ಶೂನ್ಯವಾಗಿದೆ.

ಸಂಸದರ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ 5 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಸಂಸದರು ವಿವಿಧ ಕಾಮಗಾರಿಗಳಿಗೆ ಈ ಅನುದಾನ ಶಿಫಾರಸ್ಸು ಮಾಡಬಹುದು. ಅದರ ಆಧಾರದ ಮೇರೆಗೆ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ.

ಹ್ಯಾಟ್ರಿಕ್ ಸಂಸದರಾಗಿ ಕಾರ್ಯನಿರ್ವಹಿಸಿರುವ ಸುರೇಶ್ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ 2009–2014ರ ಅವಧಿಯಲ್ಲಿ ಸರ್ಕಾರ 18.40 ಕೋಟಿ ಹಣ ಬಿಡುಗಡೆ ಮಾಡಿತ್ತು. ಇದರಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಉಳಿದ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಿದ್ದಾರೆ.

ನೀರಿನ ಘಟಕ, ಬಸ್ ತಂಗುದಾಣಕ್ಕೆ ಆದ್ಯತೆ

ಸಂಸದ ಡಿ.ಕೆ.ಸುರೇಶ್ ಅವರು ಹಣ ವಿನಿಯೋಗದ ಮಾರ್ಗದರ್ಶಿ ಸೂತ್ರದ ಅನ್ವಯ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ, ಕ್ಷೇತ್ರ ವ್ಯಾಪ್ತಿಯ ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಈಗ ಬೇಸಿಗೆ ಕಾಲ ಆರಂಭವಾಗಿ ಸಣ್ಣ ಜಲಾಶಯಗಳು, ಕೆರೆ - ಕಟ್ಟೆಗಳೆಲ್ಲವೂ ಬರಿದಾಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ. ಇಂತಹ ಸಂಕಷ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕ್ಷೇತ್ರದ ಜನರ ದಾಹವನ್ನು ತಣಿಸುತ್ತಿವೆ.
ರಾಮನಗರ ಟೌನ್ , ಕುಣಿಗಲ್ ಟೌನ್ , ಮಾಗಡಿ ಪಟ್ಟಣ , ಆನೇಕಲ್ ಟೌನ್ , ಆನೇಕಲ್ ತಾಲೂಕು ಬಿದರಗುಪ್ಪೆ ಗ್ರಾಮಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿದ್ದಾರೆ. ಅಲ್ಲದೆ, ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಮೆಂಟ್ ರಸ್ತೆ, ಪೈಪ್ ಲೈನ್ ಕಾಮಗಾರಿ, ಶೌಚಾಲಯಗಳ ನಿರ್ಮಾಣಕ್ಕೆ ಸಂಸದರು ಅನುದಾನ ಒದಗಿಸಿದ್ದಾರೆ.

ಕೊನೆ ವರ್ಷ ಬಸ್ ತಂಗುದಾಣಕ್ಕೆ ಹೆಚ್ಚಿನ ಹಣ:

ಕೊನೆಯ ವರ್ಷ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯಿಸಲಾಗಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸುಸಜ್ಜಿತ ನೂರಾರು ಬಸ್ ತಂಗುದಾಣಗಳ ನಿರ್ಮಾಣಕ್ಕೆ ಸಂಸದ ಡಿ.ಕೆ.ಸುರೇಶ್ ರವರು ಹಣ ಖರ್ಚು ಮಾಡಿದ್ದಾರೆ.

ಎಚ್ ಡಿಕೆ ಉಳಿಸಿದ್ದ ಅನುದಾನವೂ ಬಳಕೆ

2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು 1 ಕೋಟಿ 40 ಲಕ್ಷ ರುಪಾಯಿ ಅನುದಾನ ಬಳಕೆ ಮಾಡದೆ ಹಾಗೆಯೇ ಉಳಿಸಿ ಹೋಗಿದ್ದರು. ಆ ಅನುದಾನವನ್ನು ವಾಪಸ್ ತಂದು ಸದ್ಭಳಕೆ ಮಾಡಿಕೊಳ್ಳುವಲ್ಲಿ ಡಿ.ಕೆ.ಸುರೇಶ್ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿಯವರು ರಾಜೀನಾಮೆ ನೀಡಿದ ನಂತರ 2013ರ ಉಪಚುನಾವಣೆಯಿಂದ ಆಯ್ಕೆಯಾಗುತ್ತಾ ಬಂದಿರುವ ಡಿ.ಕೆ.ಸುರೇಶ್ ರವರು ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ. ಅಲ್ಲದೆ, ಕುಮಾರಸ್ವಾಮಿಯವರ ಅವಧಿಯಲ್ಲಿ ಬಳಕೆಯಾಗದೆ ಉಳಿದಿದ್ದ 1 ಕೋಟಿ 40 ಲಕ್ಷ ರು.ಗಳನ್ನು ಸಂಸದ ಡಿ.ಕೆ.ಸುರೇಶ್ ರವರು ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿ ಅನುಮೋದನೆ ಪಡೆದುಕೊಂಡಿದ್ದರು.

ಕೇಂದ್ರ ಮಾತ್ರವಲ್ಲ ರಾಜ್ಯ ಸರ್ಕಾರದಿಂದಲೂ ಅನುದಾನ

ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರವಲ್ಲದೇ, ರಾಜ್ಯ ಸರ್ಕಾರದಿಂದಲೂ ಸಂಸದ ಡಿ.ಕೆ.ಸುರೇಶ್ ರವರು ವಿಶೇಷ ಅನುದಾನಗಳನ್ನು ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಭಾಗಗಳಲ್ಲಿ ರಸ್ತೆ, ಸೇತುವೆಗಳ ನಿರ್ಮಾಣ, ಕೆರೆಗಳ ಮರುಪೂರ್ಣ ಹೀಗೆ ಅನೇಕ ಕೆಲಸಗಳು ಸುರೇಶ್ ರವರ ಮನವಿಯಿಂದಲೇ ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ.

ಉಜ್ವಲ ಯೋಜನೆಯನ್ನು ಅನುಷ್ಠಾನಗೊಳಿಸಿ ರಾಮನಗರವನ್ನು ಹೊಗೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಕನಕಪುರಕ್ಕೆ ನವೋದಯ ವಿದ್ಯಾಲಯ, ಚನ್ನಪಟ್ಟಣ - ರಾಮನಗರ ಮಧ್ಯಭಾಗದಲ್ಲಿ ಕೇಂದ್ರೀಯ ವಿದ್ಯಾಲಯ, ಮಾಗಡಿಯಲ್ಲಿ ಏಕಲವ್ಯ ಶಾಲೆಯನ್ನು ತಂದಿದ್ದಾರೆ. ನರೇಗಾ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿಯೂ ಅವರ ಪಾತ್ರವಿದೆ.

ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ ಪರ ಎಚ್‌ಡಿಕೆ ಬ್ಯಾಟಿಂಗ್; ಡಿಕೆ ಸುರೇಶ್‌ಗೆ ಕೊಟ್ಟ ಎಚ್ಚರಿಕೆ ಏನು?

ರಾಮನಗರದ ಯಾರಬ್‌ನಗರ, ಚನ್ನಪಟ್ಟಣದ ಎಲೇಕೇರಿ ಮತ್ತು ಕುಣಿಗಲ್‌ನಲ್ಲಿ ರೈಲ್ವೆ ಓವರ್‌ ಬ್ರಿಡ್ಜ್‌ ಮತ್ತು ಅಂಡರ್‌ಪಾಸ್‌ ನಿರ್ಮಾಣ, ಮೆಮು ರೈಲು ಸೇವೆಯನ್ನು ರಾಮನಗರದಿಂದ ಚನ್ನಪಟ್ಟದವರೆಗೆ ವಿಸ್ತರಿಸಿದ್ದು, ಕೆಲ ರೈಲುಗಳು ಚನ್ನಪಟ್ಟಣ ಮತ್ತು ರಾಮನಗರ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿಸುವಲ್ಲಿ ಸುರೇಶ್‌ ರವರ ಶ್ರಮ ಇದೆ.

ಭಾರತ ಮಾಲಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ 550 ಕೋಟಿ ರು. ಮಂಜೂರಾಗಿದ್ದು, ಎನ್‌ಎಚ್‌ಎಐ ವತಿಯಿಂದ ರಾಮನಗರ, ಚನ್ನಪಟ್ಟಣ, ಬಿಡದಿ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ 145 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮತ್ತು ಅಭಿವೃದ್ಧಿಪಡಿಸಲು ಡಿ.ಕೆ.ಸುರೇಶ್ ಕ್ರಮ ವಹಿಸಿದ್ದಾರೆ.

click me!