ಪ್ರತೀ ಬಾರಿ ಕೊಲ್ಲೂರು ತಾಯಿಯ ದರ್ಶನ ಮಾಡಿದಾಗ ಒಂದು ರೀತಿಯ ಸಮಾಧಾನ, ನೆಮ್ಮದಿ ಸಿಗುತ್ತದೆ. ಭದ್ರಾವತಿಯಿಂದ ಈಗಾಗಲೇ ಪ್ರಚಾರ ಆರಂಭಿಸಿದ್ದು, ಹೋದಲ್ಲೆಲ್ಲ ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಕುಂದಾಪುರ (ಮಾ.22): ಪ್ರತೀ ಬಾರಿ ಕೊಲ್ಲೂರು ತಾಯಿಯ ದರ್ಶನ ಮಾಡಿದಾಗ ಒಂದು ರೀತಿಯ ಸಮಾಧಾನ, ನೆಮ್ಮದಿ ಸಿಗುತ್ತದೆ. ಭದ್ರಾವತಿಯಿಂದ ಈಗಾಗಲೇ ಪ್ರಚಾರ ಆರಂಭಿಸಿದ್ದು, ಹೋದಲ್ಲೆಲ್ಲ ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲ ಕಡೆ ತಂದೆ ಬಂಗಾರಪ್ಪರನ್ನು ಪ್ರೀತಿ ಮಾಡುವ ಜನರಿದ್ದಾರೆ. ಅವರೇ ನನಗೆ ಆದರ್ಶ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು. ಅವರು ಬೈಂದೂರು ಕ್ಷೇತ್ರದ ವಂಡ್ಸೆ- ನೆಂಪುವಿನಲ್ಲಿರುವ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗಕ್ಕಿಂತ ಬೈಂದೂರಿಗೆ ಹೆಚ್ಚಿನ ಒತ್ತನ್ನು ಕೊಡುತ್ತೇವೆ. ತಂದೆ ಬಂಗಾರಪ್ಪನವರು ಬೈಂದೂರು ಜನರ ಪ್ರೀತಿಪಾತ್ರರಾದವರು. ಮೋದಿ ಜನಕ್ಕೆ ಏನು ಗ್ಯಾರಂಟಿ ಕೊಟ್ಟಿದ್ದಾರೆ. ಸಂಸದ ರಾಘವೇಂದ್ರರ ಸಾಧನೆಯೇನು? ಯಾವ ಗ್ಯಾರಂಟಿ ತಂದಿದ್ದಾರೆ ಎಂದು ಪ್ರಶ್ನಿಸಿದರು. ಕುಮಾರ್ ಬಂಗಾರಪ್ಪ ಕುರಿತು ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಕೆಲವಕ್ಕೆ ಉತ್ತರ ಕೊಟ್ಟು ಅಭ್ಯಾಸವಿಲ್ಲ ಎಂದರು. ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವಿನ ಭಿನ್ನಾಭಿಪ್ರಾಯ ದಿನೇದಿನೆ ಹೆಚ್ಚುತ್ತಿರುವುದರಿಂದ ಅಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಜಾತಿ, ಧರ್ಮ ಆಧಾರವಾಗಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದವರು ಹೇಳಿದರು.
undefined
ಬಾಕಿ ಉಳಿದ 4 ಕ್ಷೇತ್ರಗಳಿಗೆ ಇಂದು ಸಭೆ: ಅಭ್ಯರ್ಥಿ ಅಂತಿಮಕ್ಕೆ ಸಿದ್ದು, ಡಿಕೆಶಿ, ಸುರ್ಜೇವಾಲ ಚರ್ಚೆ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಘವೇಂದ್ರ ಗೆದ್ದ ನಂತರ ಬಸ್ ನಿಲ್ದಾಣ ಮಾತ್ರ ಅವರ ಸಾಧನೆ. ಹಿಂದುತ್ವವೆಂದು ಹೇಳುತ್ತಿದ್ದ ಈಶ್ವರಪ್ಪರನ್ನೇ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ್ ಶೆಟ್ಟಿ ಪಕ್ಷದ ಪ್ರಚಾರದ ಕುರಿತ ರೂಪುರೇಷೆಗಳ ಬಗ್ಗೆ ತಿಳಿಸಿದರು. ಕೆಪಿಸಿಸಿಯ ಜಿ.ಎ. ಬಾವಾ, ವಕ್ತಾರ ಅನಿಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಪ್ರಮುಖರಾದ ಎಸ್. ರಾಜು ಪೂಜಾರಿ, ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮತ್ತಿತರರಿದ್ದರು.