ಗ್ಯಾರಂಟಿ ಯೋಜನೆಗಳಿಂದ ಜನತೆಗೆ ಅನುಕೂಲ: ಲಕ್ಷ್ಮಣ ಸವದಿ

By Kannadaprabha News  |  First Published Jun 7, 2023, 8:56 PM IST

ಅಥಣಿ ಪಟ್ಟಣದಲ್ಲಿ ಅನುದಾನಿತ ಶಾಲೆಗಳು ಇರುವುದರಿಂದ ಸರ್ಕಾರಿ ಪ್ರೌಢಶಾಲೆ ಸ್ಥಾಪನೆಯಾಗಿರಲಿಲ್ಲ. ಇತ್ತೀಚಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಖಂಡಿತ ಅಥಣಿಗೆ ಸರ್ಕಾರಿ ಪ್ರೌಢಶಾಲೆ ಸ್ಥಾಪನೆ ಮಾಡಲಾಗುವುದು: ಶಾಸಕ ಲಕ್ಷ್ಮಣ ಸವದಿ 


ಅಥಣಿ(ಜೂ.07):  ತಾಲೂಕಿನ ರೈತರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕಬೇಕು. ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶಗಳು ದೊರಕಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. 

ಇಲ್ಲಿನ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 4ನೇ ಬಾರಿಗೆ ಅಥಣಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನಾ ಸನ್ಮಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಥಣಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆಯ ಸ್ಥಾಪನೆ ಮತ್ತು ಸರ್ಕಾರಿ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ತಮ್ಮ ಅಭಿಪ್ರಾಯವೇನು? ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಶಾಸಕರು ಅಥಣಿ ಪಟ್ಟಣದಲ್ಲಿ ಅನುದಾನಿತ ಶಾಲೆಗಳು ಇರುವುದರಿಂದ ಸರ್ಕಾರಿ ಪ್ರೌಢಶಾಲೆ ಸ್ಥಾಪನೆಯಾಗಿರಲಿಲ್ಲ. ಇತ್ತೀಚಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಖಂಡಿತ ಅಥಣಿಗೆ ಸರ್ಕಾರಿ ಪ್ರೌಢಶಾಲೆ ಸ್ಥಾಪನೆ ಮಾಡಲಾಗುವುದು ಎಂದು ಉತ್ತರಿಸಿದರು.

Tap to resize

Latest Videos

ರಾಜ್ಯ ಆಳೋದು ಒಂದೇ, ಈ ಶಾಸಕನ ಕಂಟ್ರೋಲ್‌ ಮಾಡೋದು ಒಂದೇ: ಬಿಜೆಪಿ ಶಾಸಕ ಅಭಯ ಪಾಟೀಲ

ಉನ್ನತ ಶಿಕ್ಷಣಕ್ಕಾಗಿ ಜಿಲ್ಲಾಮಟ್ಟದಲ್ಲಿ ಸ್ಥಾಪನೆಯಾಗಬೇಕಾದ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಅಥಣಿ ತಾಲೂಕಿನ ಕೋಕಟನೂರು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಸತಿ ನಿಲಯಗಳ ಕಟ್ಟಡ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡು ಶೀಘ್ರದಲ್ಲಿಯೇ ತರಗತಿಗಳನ್ನು ಆರಂಭಿಸಲಾಗುವುದು. ಇದಲ್ಲದೆ ಕೃಷಿ ಮಹಾವಿದ್ಯಾಲಯ, ಮೆಡಿಕಲ… ಕಾಲೇಜ ಮತ್ತು ಎಂಜಿನಿಯರಿಂಗ್‌ ಕಾಲೇಜ್‌ ಸೇರಿದಂತೆ ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಇನ್ನಿತರ ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರ ಈ ರೀತಿ ಪುಕ್ಕಟ್ಟೆಯೋಜನೆಗಳನ್ನು ನೀಡುವುದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಜನರಲ್ಲಿ ಆಲಸ್ಯತನ ಹೆಚ್ಚಾಗುವುದಿಲ್ಲವೇ? ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳ ಜಾರಿಗೆ ದಿಟ್ಟಕ್ರಮಕೈಗೊಂಡಿದ್ದು, ಈ ಯೋಜನೆಗಳ ಅನುಷ್ಠಾನದಿಂದ ಕಡು ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಪ್ರಯೋಜನವಾಗಲಿದೆ. ಸರ್ಕಾರ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೇ ಅದರ ಸಾಧಕ ಬಾಧಕವನ್ನು ಅಧ್ಯಯನ ಮಾಡಿಯೇ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಕಡು ಬಡವರಿಗೆ 10 ಕೆಜಿ ಅಕ್ಕಿ ನೀಡುವುದರಿಂದ ಆಹಾರದ ಸಮಸ್ಯೆ ನೀಡುತ್ತದೆ. ಮನೆಯೊಡತಿಗೆ .2,000 ಮತ್ತು ನಿರುದ್ಯೋಗಿ ಪದವಿಧರರಿಗೆ .3,000 ಇಲ್ಲವೇ .1,500 ನೀಡುವುದರಿಂದ ಬಡ ಕುಟುಂಬಗಳ ನಿರ್ವಹಣೆಗೆ ಪ್ರಯೋಜನವಾಗಲಿದೆ ಎಂದರು.

ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಇಂದು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಎಷ್ಟುಸರಿ? ಎಂಬ ವಿದ್ಯಾರ್ಥಿಯೋರ್ವನ ಪ್ರಶ್ನೆಗೆ ಪ್ರತಿಕ್ರಿಯೆಸಿದ ಶಾಸಕರು, ರಾಜಕಾರಣದಲ್ಲಿ ಧರ್ಮವಿರಬೇಕು. ಆದರೆ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕಾರಣ ಇರಬಾರದು ಎಂಬುವುದು ನನ್ನ ಸಿದ್ಧಾಂತ. ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಧರ್ಮ ಮತ್ತು ಜಾತಿಯ ವಿಚಾರ ಬಂದಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಧಾರೆಯಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಪರಿಕಲ್ಪನೆಯಲ್ಲಿ ರಾಜಕೀಯ ವ್ಯವಸ್ಥೆ ಇರಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿದರೇ ಅಂತಹ ರಾಜಕಾರಣಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.

ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ತಾಲೂಕಿನ ಪ್ರತಿಯೊಂದು ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಯಾವ ಕ್ರಮ ಕೈಗೊಂಡಿದ್ದೀರಿ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಪ್ರಧಾನಿ ಮೋದಿಯವರು ಕೂಡ ಭ್ರಷ್ಟಾಚಾರವನ್ನು ತಡೆಗಟ್ಟುವಲಿ ವಿಫಲರಾಗಿದ್ದಾರೆ. ಅಥಣಿ ತಾಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ಹಿಂದಿನ ಶಾಸಕರು ಅಧಿಕಾರಿಗಳಿಗೆ ಮೂಗದಾರ ಹಾಕದೇ ಇರುವುದರಿಂದ ಲಂಚಾವತಾರ ಹೆಚ್ಚಾಗಿದ್ದು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಖಡಕ್‌ ಎಚ್ಚರಿಕೆ ನೀಡುವ ಮೂಲಕ ಸುಧಾರಿಸಿಕೊಳ್ಳಲು ಹೇಳಿದ್ದೇನೆ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳನ್ನು ಬೇರೆಡೆ ಕಳಿಸುವ ವ್ಯವಸ್ಥೆ ಮಾಡುತ್ತೇನೆ. ಕೇವಲ 3 ತಿಂಗಳು ಕಾದುನೋಡಿ ಎಂದು ತಿಳಿಸಿದರು.

ಅಥಣಿ ಪಟ್ಟಣದ ಜೋಡಿ ಕೆರೆಗಳ ಅಭಿವೃದ್ಧಿ ಮತ್ತು ಅಥಣಿ ಸೌಂದರ್ಯೀಕರಣದ ನಿರ್ಲಕ್ಷ, ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ರೂಪಿಸುವಲ್ಲಿ ವಿಳಂಬ, ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್‌ಗಳ ಕೊರತೆ, ಸ್ವಚ್ಛ ಭಾರತ ಅಭಿಯಾನ ಯೋಜನೆ ಸರಿಯಾಗಿ ಅನುಷ್ಠಾನ, ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ನೀರಾವರಿ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು, ಕುಡಿಯುವ ನೀರಿನ ಸಮಸ್ಯೆ, ಗ್ರಾಮೀಣ ರಸ್ತೆಗಳ ಸುಧಾರಣೆ, ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ, ಹೆಸ್ಕಾಂ ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ವಿದ್ಯುತ್‌ ಸಮಸ್ಯೆ ಅನೇಕ ಪ್ರಶ್ನೋತ್ತರಗಳಿಗೆ ಉತ್ತರಿಸಿದ ಶಾಸಕರು ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಸರ್ವಾಂಗಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

click me!