ಬಿಜೆಪಿ ಸರ್ಕಾರದ ಯೋಜನೆ ರದ್ದು ತರವಲ್ಲ: ಸಂಸದ ಅಣ್ಣಾಸಾಹೇಬ ಜೊಲ್ಲೆ ಆಕ್ಷೇಪ

By Kannadaprabha News  |  First Published Jul 17, 2023, 3:30 AM IST

ಎಲ್ಲಿ ಹೆಚ್ಚು ಬೆಲೆ ಸಿಗುತ್ತೋ ಅಲ್ಲಿ ರೈತರು ಮಾರಾಟ ಮಾಡುವ ಕೆಲಸ ಆಗಬೇಕು. ಎಪಿಎಂಸಿ ತಿದ್ದುಪಡಿ ಕಾನೂನು ಮುಂದುವರಿಸಲು ಆಗ್ರಹಿಸುತ್ತೇನೆ. ರೈತ ವಿದ್ಯಾನಿಧಿ, ಗೋಶಾಲೆ ರದ್ದು ಮಾಡುತ್ತಿದ್ದೀರಿ. ಕಿಸಾನ್‌ ಸಮ್ಮಾನ್‌ ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ. ಕೃಷಿ ಜಮೀನು ಖರೀದಿಸಲು ಬೇರೆಯವರಿಗೆ ಅವಕಾಶ ಇರಲಿಲ್ಲ. ಅನುಕೂಲಸ್ಥ ಜನರು ರೈತರ ಜಮೀನು ಖರೀದಿಸುವ ಕೆಲಸ ಆಗುತ್ತಿತ್ತು: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ 


ಚಿಕ್ಕೋಡಿ(ಜು.17):  ಬಿಜೆಪಿ ಸರ್ಕಾರ ಜಾರಿ ಮಾಡಿದ ರೈತಪರ ಯೋಜನೆಗಳನ್ನು ರದ್ದುಪಡಿಸುವ ದಿಕ್ಕಿನಲ್ಲಿ ಕಾಂಗ್ರೆಸ್‌ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಸಂಸದರ ಕಚೇರಿಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಧಾನಸಭೆಯಲ್ಲಿ ಸಿಎಂ ಮಾತನಾಡುವ ವೇಳೆ ಎಪಿಎಂಸಿ ಕಾನೂನು ರದ್ದು ಮಾಡುತ್ತೇವೆ ಎಂದಿದ್ದಾರೆ ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಎಪಿಎಂಸಿ ಕಾನೂನು ಜಾರಿ ಬಳಿಕ . 300 ಕೋಟಿ ಆದಾಯ ಕಡಿಮೆಯಾಗಿದೆ. ಹಾಗಾಗಿ ರದ್ದು ಮಾಡ್ತೀವಿ ಅಂದಿದ್ದಾರೆ. ಆದರೆ, ಎಪಿಎಂಸಿ ಕಾನೂನು ರೈತರಿಗೆ ಲಾಭ ಮಾಡಲು ಮಾಡಿದ್ದು, ಸರ್ಕಾರಕ್ಕೆ ಲಾಭ ಮಾಡಲು ಅಲ್ಲ. ಕೇವಲ ಎಪಿಎಂಸಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡೋದಾದ್ರೆ ಫ್ರೀ ಬಸ್‌ ಪ್ರಯಾಣಕ್ಕೆ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ದುಡ್ಡು ಕೊಡ್ತೀರಿ, ಹಾಗೆಯೇ ಎಪಿಎಂಸಿಗಳಿಗೆ ಹಣ ಕೊಡಿ, ಆನ್‌ಲೈನ್‌ ಟ್ರೇಡಿಂಗ್‌ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರು.

Tap to resize

Latest Videos

ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ: ಸಂಜಯ ಪಾಟೀಲ

ಎಲ್ಲಿ ಹೆಚ್ಚು ಬೆಲೆ ಸಿಗುತ್ತೋ ಅಲ್ಲಿ ರೈತರು ಮಾರಾಟ ಮಾಡುವ ಕೆಲಸ ಆಗಬೇಕು. ಎಪಿಎಂಸಿ ತಿದ್ದುಪಡಿ ಕಾನೂನು ಮುಂದುವರಿಸಲು ಆಗ್ರಹಿಸುತ್ತೇನೆ. ರೈತ ವಿದ್ಯಾನಿಧಿ, ಗೋಶಾಲೆ ರದ್ದು ಮಾಡುತ್ತಿದ್ದೀರಿ. ಕಿಸಾನ್‌ ಸಮ್ಮಾನ್‌ ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ. ಕೃಷಿ ಜಮೀನು ಖರೀದಿಸಲು ಬೇರೆಯವರಿಗೆ ಅವಕಾಶ ಇರಲಿಲ್ಲ. ಅನುಕೂಲಸ್ಥ ಜನರು ರೈತರ ಜಮೀನು ಖರೀದಿಸುವ ಕೆಲಸ ಆಗುತ್ತಿತ್ತು ಎಂದರು.

ಕೃಷಿ ಮಾಡಲು ಜಮೀನು ಖರೀದಿಸುವವರಿಗೆ ಮಾತ್ರ ಮಾರಾಟ ಮಾಡಲು ಕಾನೂನು, ಭೂ ಮಾರಾಟ ತಿದ್ದುಪಡಿ ತಂದಿದ್ವಿ ಅದನ್ನ ವಾಪಸ್‌ ಪಡೆಯುವ ಉದ್ದೇಶ ಏನು? ಎಂದು ಪ್ರಶ್ನೆಸಿದರು. ಹೈನುಗಾರಿಕೆಗೆ ಸಾವಿರ ಕೋಟಿ ವೆಚ್ಚದಲ್ಲಿ ಕ್ಷೀರ ಬ್ಯಾಂಕ್‌ ಮಾಡಬೇಕೆಂಬ ಯೋಜನೆ ತಡೆಹಿಡಿದಿದ್ದೀರಿ. ರೈತ ಮಹಿಳೆಯರಿಗೆ 500 ನೀಡುವ ಯೋಜನೆ ತಡೆಯತ್ತಿದ್ದೀರಿ. ಈ ಮೂಲಕ ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ತಂದಂತಹ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದು ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ರೈತ ಮೋರ್ಚಾ ಹಂತ ಹಂತವಾಗಿ ಹೋರಾಟ ಮಾಡಲು ನಿರ್ಧರಿಸುತ್ತೇವೆ ಎಂದು ರಾಜ್ಯ ಸಭೆಯ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ ಕುಮಟಳ್ಳಿ, ರೈತ ಮೊರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮಂಡಲದ ಅಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು.

click me!