ರಸ್ತೆ ಮೇಲೆ ಓಡಾಡುವ ಶ್ರೀಸಾಮಾನ್ಯನ ಬೆನ್ನಿಗೆ ಬಂದೂಕು.. ನಗರದಲ್ಲಿ ಬೈಕ್ ಸವಾರರ ಬೆನ್ನಲ್ಲಿ ಬಂದೂಕು ಈಗ ಕಾಣ ಸಿಗುತ್ತಿದೆ. ಇವರಿಗಾವ ಜೀವ ಭಯವಿದೆ? ಬಂದೂಕು ಹಿಡಿದು ಹೊರಟಿದ್ದಾದರೂ ಎಲ್ಲಿಗೆ?!
ಮಂಜುನಾಥ ಸಾಯಿಮನೆ
ಶಿರಸಿ (ಏ.20) : ರಸ್ತೆ ಮೇಲೆ ಓಡಾಡುವ ಶ್ರೀಸಾಮಾನ್ಯನ ಬೆನ್ನಿಗೆ ಬಂದೂಕು.. ನಗರದಲ್ಲಿ ಬೈಕ್ ಸವಾರರ ಬೆನ್ನಲ್ಲಿ ಬಂದೂಕು ಈಗ ಕಾಣ ಸಿಗುತ್ತಿದೆ. ಇವರಿಗಾವ ಜೀವ ಭಯವಿದೆ? ಬಂದೂಕು ಹಿಡಿದು ಹೊರಟಿದ್ದಾದರೂ ಎಲ್ಲಿಗೆ?!
undefined
ಹೌದು. ನಗರದಲ್ಲಿ ಈಗ ಬಂದೂಕುಧಾರಿಗಳು ಅಲ್ಲಲ್ಲಿ ಕಾಣಸಿಗುತ್ತಿದ್ದಾರೆ. ಆದರೆ ಅವರು ರೌಡಿಗಳಲ್ಲ ಅಥವಾ ಯಾವುದೂ ದುಷ್ಕೃತ್ಯಕ್ಕೆ ಹೊರಟವರಲ್ಲ. ಬೆಳೆ ರಕ್ಷಣೆಗಾಗಿ ಬಂದೂಕು ಇಟ್ಟುಕೊಂಡ ಬಡಪಾಯಿ ರೈತರಿವರು. ವಿಧಾನಸಭೆ ಚುನಾವಣೆ(Karnataka assembly election 2023) ಹಿನ್ನೆಲೆ ಪೊಲೀಸ್ ಇಲಾಖೆಯ ಸೂಚನೆಯಂತೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಬಂದೂಕನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕಿದೆ. ರಾಜಕೀಯ ಪಕ್ಷಗಳು ವಿರೋಧಿಗಳನ್ನು ನೆಲಸಮ ಮಾಡಲು ಯಾರೂ ಬಂದೂಕು ಕೈಗೆತ್ತಿಕೊಳ್ಳಬಾರದು ಎಂಬ ಉದ್ದೇಶದಿಂದ ಪ್ರತಿ ಚುನಾವಣೆಯಲ್ಲೂ ಬಂದೂಕು ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಬೇಕಿದೆ. ಸದ್ಯ ಈ ಪ್ರಕ್ರಿಯೆ ಚಾಲನೆಯಲ್ಲಿದೆ ಅಷ್ಟೇ!
ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.ಕುಮಾರಸ್ವಾಮಿ
ಗ್ರಾಮೀಣದಲ್ಲೇ ಅಧಿಕ ಬಂದೂಕು:
ಶಿರಸಿ ಉಪ ವಿಭಾಗದಲ್ಲಿ ಒಟ್ಟು 3,471 ಬಂದೂಕುಗಳಿವೆ. ಇವುಗಳಲ್ಲಿ ಈಗಾಗಲೇ 3368 ಬಂದೂಕುಗಳನ್ನು ಮಾಲೀಕರು ಠಾಣೆಗೆ ತಂದು ಒಪ್ಪಿಸಿದ್ದಾರೆ. ಈ ಬಂದೂಕುಗಳು ಗ್ರಾಮೀಣ ಪ್ರದೇಶದಲ್ಲೇ ಜಾಸ್ತಿ ಇವೆ. ಶಿರಸಿ ಗ್ರಾಮೀಣ ಪ್ರದೇಶದಲ್ಲಿ 937 ಬಂದೂಕುಗಳಿದ್ದು ಈ ಪೈಕಿ 922 ಬಂದೂಕುಗಳನ್ನು ಒಪ್ಪಿಸಿದ್ದಾರೆ. ನಗರ ಠಾಣೆ ವ್ಯಾಪ್ತಿಯಲ್ಲಿ 29 ಬಂದೂಕುಗಳಿದ್ದು, 26 ಜಮಾ ಆಗಿದೆ. ಉಳಿದ ಮೂರು ಬಂದೂಕು ಬ್ಯಾಂಕ್, ಎಟಿಎಂಗಳ ರಕ್ಷಣೆಗೆ ವಿನಾಯಿತಿ ನೀಡಲಾಗಿದೆ. ಮಾರುಕಟ್ಟೆಠಾಣೆ ವ್ಯಾಪ್ತಿಯಲ್ಲಿ 26 ಬಂದೂಕುಗಳಿದ್ದು, 21 ಈಗಾಗಲೇ ಠಾಣೆಗೆ ಬಂದಿವೆ. ಬನವಾಸಿ ಠಾಣೆ ವ್ಯಾಪ್ತಿಯಲ್ಲಿ 438 ಬಂದೂಕುಗಳಿದ್ದು, 396 ರನ್ನು ರೈತರು ಒಪ್ಪಿಸಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 690 ಬಂದೂಕುಳಿದ್ದು, ಇನ್ನು ಒಂದು ಬಂದೂಕು ಮಾತ್ರ ಒಪ್ಪಿಸಬೇಕಿದೆ. ಯಲ್ಲಾಪುರದಲ್ಲಿ 868 ಬಂದೂಕುಳಿದ್ದು, 857 ಜಮಾ ಆಗಿದ್ದರೆ ಮುಂಡಗೋಡ ಠಾಣೆಯಲ್ಲಿ 483 ಬಂದೂಕುಗಳಿದ್ದು, 457 ಬಂದೂಕುಗಳು ಜಮಾ ಆಗಿವೆ.
ಜಿಲ್ಲೆಯ ಮಲೆನಾಡಿನ ತಾಲೂಕುಗಳಲ್ಲಿ ಯಾರೂ ಚುನಾವಣೆಯನ್ನು ತಲೆಗೆ ತೆಗೆದುಕೊಳ್ಳುವುದಿಲ್ಲ. ಬಂದೂಕು ಕೈಗೆತ್ತಿಕೊಳ್ಳುವುದಿಲ್ಲ. ಕೃಷಿ ಕಾರ್ಯಕ್ಕೆ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದೆ, ಕಳ್ಳ ಕಾಕರ ರಕ್ಷಣೆಯ ಉದ್ದೇಶದಿಂದ ಉತ್ತರ ಕನ್ನಡಕ್ಕೆ ಬಂದೂಕು ಠೇವಣಿಯಿಂದ ವಿನಾಯಿತಿ ನೀಡಬೇಕು ಎಂಬ ಆಗ್ರಹ ಹಿಂದಿನಿಂದಲೂ ಇದೆ. ಆದರೆ, ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ಈ ಬೇಡಿಕೆಗೆ ಇದುವರೆಗೂ ವಿಶೇಷ ಮಾನ್ಯತೆ ದೊರೆತಿಲ್ಲ. ಕಳೆದ 3 ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಅಂದಿನ ಜಿಲ್ಲಾಧಿಕಾರಿ ಹರೀಶಕುಮಾರ ಧೈರ್ಯ ಮಾಡಿ ಬಂದೂಕು ಠೇವಣಿಗೆ ವಿನಾಯಿತಿ ನೀಡಿದ್ದರು. ಯಾವುದೇ ಅವಘಡ ಇಲ್ಲದೇ ಚುನಾವಣೆ ಸಹ ನಡೆದಿತ್ತು. ಆದರೆ, ವಿಧಾನಸಭೆ ಚುನಾವಣೆಗೆ ಈಗ ಮತ್ತೆ ಬಂದೂಕು ಠೇವಣಿ ಮಾಡಲು ಸೂಚಿಸಲಾಗಿದೆ.
ಹಳ್ಳಿಗಳ ಬಂದೂಕುಗಳಲ್ಲಿ ಹೆಚ್ಚಿನವು ಹಿರಿತಲೆಗಳ ಹೆಸರಿನಲ್ಲೇ ಇವೆ. ಕೃಷಿ ಭೂಮಿ ವಯಸ್ಸಾದ ತಂದೆ ಹೆಸರಿನಲ್ಲೇ ಇದ್ದು, ಅವರ ಕಾಲಾನಂತರ ಮುಂದಿನ ತಲೆಮಾರಿಗೆ ಹೆಸರು ಬದಲಾವಣೆ ಆಗಬೇಕಿದೆ. ಹೀಗಾಗಿ, ಬಂದೂಕು ಬಳಸುವ ಶಕ್ತಿ ಇಲ್ಲದಿದ್ದರೂ ಮಕ್ಕಳ ಹೆಸರಿಗೆ ಬಂದೂಕು ಕಾಗದಪತ್ರ ಬದಲಾಯಿಸಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ. ಇನ್ನು ಕೆಲವೆಡೆ ಯುವ ತಲೆಮಾರಿನವರು ಮಹಾನಗರಗಳಲ್ಲಿದ್ದು ಬಂದೂಕು ಬಳಸಲು, ಕಲಿಯಲು ಆಸಕ್ತಿ ತೋರುತ್ತಿಲ್ಲ. ಇಂಥ ಕುಟುಂಬಗಳಿಗೆ ಬಂದೂಕು ಠಾಣೆಗೆ ಒಪ್ಪಿಸುವುದೇ ಹೊರೆಯಾಗುತ್ತಿದೆ.
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಕಾರಿಗೆ ಗುದ್ದಿದ ಟ್ಯಾಂಕರ್ ಐವರಿಗೆ ಗಂಭೀರ ಗಾಯ
ಪ್ರತಿ ಚುನಾವಣೆಯಲ್ಲೂ ಬಂದೂಕು ಹೊತ್ತು ನಗರದ ಪೊಲೀಸ್ ಠಾಣೆಗೆ ಹೋಗುವುದು, ಬಳಿಕ ವಾಪಸ್ ತರುವುದು ನಮಗೆ ಸಮಸ್ಯೆ ಆಗುತ್ತಿದೆ. ಬಳಸಿದ್ದಕ್ಕಿಂತ ಹೆಚ್ಚು ಪೊಲೀಸ್ ಠಾಣೆಗೆ ಒಯ್ಯುವುದೇ ದೊಡ್ಡ ಕೆಲಸವಾಗುತ್ತಿದೆ.
ಶ್ರೀಪಾದ ಭಟ್, ಕೃಷಿಕ