ಚುನಾವಣೆ ಘೋಷಣೆ ಮುನ್ನವೇ ರಾಜಕೀಯ ಚಟುವಟಿಕೆ ಗರಿಗೆದರಿರುವ ಬಳ್ಳಾರಿಯಲ್ಲಿ ಕೈ-ಕಮಲ ಪಕ್ಷದ ಅಭ್ಯರ್ಥಿಗಳಿಗೆ ಜನಾರ್ದನ ರೆಡ್ಡಿಯ ನೂತನ ಪಕ್ಷದ ಅಭ್ಯರ್ಥಿ ಟಕ್ಕರ್ ನೀಡಬಹುದೇ ಎಂಬ ಚರ್ಚೆ ಶುರುವಾಗಿದೆ.
ಕೆ.ಎಂ.ಮಂಜುನಾಥ್
ಬಳ್ಳಾರಿ (ಜ.18) : ಚುನಾವಣೆ ಘೋಷಣೆ ಮುನ್ನವೇ ರಾಜಕೀಯ ಚಟುವಟಿಕೆ ಗರಿಗೆದರಿರುವ ಬಳ್ಳಾರಿಯಲ್ಲಿ ಕೈ-ಕಮಲ ಪಕ್ಷದ ಅಭ್ಯರ್ಥಿಗಳಿಗೆ ಜನಾರ್ದನ ರೆಡ್ಡಿಯ ನೂತನ ಪಕ್ಷದ ಅಭ್ಯರ್ಥಿ ಟಕ್ಕರ್ ನೀಡಬಹುದೇ ಎಂಬ ಚರ್ಚೆ ಶುರುವಾಗಿದೆ.
undefined
ರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ (KRPP) ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬ ಕುತೂಹಲ ಹೆಚ್ಚಿದೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರು ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಇನ್ನೂ ಸ್ಪಷ್ಟನಿರ್ಧಾರಕ್ಕೆ ಬರಲಾಗಿಲ್ಲ. ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಮೂಲಗಳ ಪ್ರಕಾರ ನಗರ ಕ್ಷೇತ್ರದಿಂದ ಕೈ-ಕಮಲ ಅಭ್ಯರ್ಥಿಯಾರಾಗಲಿದ್ದಾರೆ ಎಂಬುದರ ಮೇಲೆಯೇ ಜನಾರ್ದನ ರೆಡ್ಡಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಲಿದೆ.
ಬಳ್ಳಾರಿಯಲ್ಲಿ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಮಾಡ್ತಿರೋ ನಾಯಕರು!
ಜನಾರ್ದನ ರೆಡ್ಡಿ(janardanareddy) ಅವರು ಪತ್ನಿ ಲಕ್ಷ್ಮಿ ಅರುಣಾ(Lakshmi aruna) ಅವರನ್ನು ಅಖಾಡಕ್ಕೆ ಇಳಿಸುವುದು ಖಚಿತ. ಆದರೆ, ಯಾವ ಕ್ಷೇತ್ರದಿಂದ ಎಂಬುದು ಇನ್ನು ನಿರ್ಧಾರವಾಗಿಲ್ಲ. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಅನೇಕ ನಾಯಕರು ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಗೌಪ್ಯವಾಗಿ ಮಾತುಕತೆ ನಡೆಸುತ್ತಿದ್ದು ಕಲ್ಯಾಣ ಕರ್ನಾಟಕದ ಯಾವುದೇ ಕ್ಷೇತ್ರದಿಂದಾದರೂ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಳ್ಳಾರಿ ನಗರ ಕ್ಷೇತ್ರದಿಂದ ಚುನಾವಣೆ ಅಖಾಡಕ್ಕೆ ಇಳಿಯಲು ಕಾಂಗ್ರೆಸ್‌ನ ದೊಡ್ಡ ದಂಡೇ ಸಾಲುಗಟ್ಟಿನಿಂತಿದೆ.
ಇನ್ನು ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ(G.Somashekarreddy) ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವುದರಿಂದ ಜನಾರ್ದನ ರೆಡ್ಡಿ ಪಕ್ಷದಿಂದ ಸ್ಪರ್ಧೆಯೊಡ್ಡುವವರು ಯಾರು ? ಎಂಬ ಪ್ರಶ್ನೆ ಮೂಡಿದೆ. ‘ಕಲ್ಯಾಣರಾಜ್ಯ ಪ್ರಗತಿ ಪಕ್ಷದಿಂದ ಯಾರೇ ಸ್ಪರ್ಧೆಯೊಡ್ಡಿದರೂ ನನಗೆ ಸಂಬಂಧಿಸದ ವಿಷಯವಾಗಿದ್ದು ಯಾರೇ ಸ್ಪರ್ಧೆಯೊಡ್ಡಿದರೂ ನಾನು ಅಖಾಡಕ್ಕೆ ಇಳಿಯುತ್ತೇನೆ. ಒಂದು ವೇಳೆ ಜನಾರ್ದನ ರೆಡ್ಡಿಯೇ ಸ್ಪರ್ಧಿಸಿದರೂ ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುತ್ತೇನೆ’ ಎಂದು ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಈಚೆಗೆ ಹೇಳಿಕೆ ನೀಡಿರುವುದು ಮತ್ತಷ್ಟುರಾಜಕೀಯ ಕುತೂಹಲ ಮೂಡಿಸಿದೆ.
ಕಾಂಗ್ರೆಸ್(Congress)ನ ಪ್ರಬಲ ಅಭ್ಯರ್ಥಿ ನಡುವೆ ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸ್ಪರ್ಧೆಯ ಜತೆಗೆ ರೆಡ್ಡಿಯ ನೂತನ ಪಕ್ಷದಿಂದ ರೆಡ್ಡಿ ಪತ್ನಿಯೇ ಅಖಾಡಕ್ಕೆ ಧುಮುಕುವ ನಿರ್ಧಾರ ಕೈಗೊಂಡರೆ ಚುನಾವಣಾ ಕಣ ರಂಗೇರಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದು ಜನಾರ್ದನ ರೆಡ್ಡಿಯ ನೂತನ ಪಕ್ಷದಿಂದ ಸ್ಪರ್ಧೆಯೊಡ್ಡುವ ಅಭ್ಯರ್ಥಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವಿಗೆ ಕಾರಣವಾದರೂ ಅಚ್ಚರಿಯಿಲ್ಲ. ಹೀಗಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲೂ ಚರ್ಚೆಗೀಡಾಗಿದೆ.
ರೆಡ್ಡಿ ಪತ್ನಿ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಖಚಿತ:
ಬಳ್ಳಾರಿ ನಗರ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರು ಕಲ್ಯಾಣರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ರೆಡ್ಡಿಗೆ ತನ್ನ ಪತ್ನಿಯನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಲಿದ್ದು, ತಮ್ಮ ಅಭ್ಯರ್ಥಿಗಳನ್ನು ಚುನಾಯಿಸಿಕೊಳ್ಳುವುದು ಎರಡು ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಲಿದೆ. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಯಿದೆ.
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ ನಗರ ಕ್ಷೇತ್ರಕ್ಕೆ ಕಲ್ಯಾಣರಾಜ್ಯ ಪ್ರಗತಿ ಪಕ್ಷದಿಂದ ಪ್ರಬಲ ಅಭ್ಯರ್ಥಿ ಅಖಾಡಕ್ಕೆ ಇಳಿಯುವುದು ಖಚಿತ. ಅಷ್ಟೇ ಅಲ್ಲ; ಗೆಲುವು ದಾಖಲಿಸುವುದು ಸಹ ಅಷ್ಟೇ ಖಚಿತ. ಈಗಲೇ ಏನನ್ನು ಹೇಳುವುದಿಲ್ಲ. ಕಾದು ನೋಡುತ್ತಿದ್ದೇವೆ.
-ಹೆಸರು ಪ್ರಕಟಿಸಲು ಬಯಸದ ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಮುಖಂಡ, ಬಳ್ಳಾರಿ.