ವಿಧಾನಸಭಾ ಚುನಾವಣೆಗೆ ಕಣ ಸಿದ್ಧಗೊಳಿಸುತ್ತಿದೆ ಎಐಎಂಐಎಂ!

By Kannadaprabha News  |  First Published Dec 6, 2022, 1:30 PM IST

ಉತ್ತರ ಕರ್ನಾಟಕದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಶಸ್ಸಿನ ರುಚಿ ಕಂಡ ಎಐಎಂಐಎಂ (ಆಲ್‌ ಇಂಡಿಯಾ ಮಜಲೀಸ್‌-ಇ-ಇತ್ತೇಹಾದುಲ್‌ ಮುಸ್ಲಿಮೀನ್‌) ಪಕ್ಷವು ಇದೀಗ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಈ ಭಾಗದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 13 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸುತ್ತಿದೆ.


ಬಸವರಾಜ ಹಿರೇಮಠ

 ಧಾರವಾಡ (ಡಿ.6) : ಉತ್ತರ ಕರ್ನಾಟಕದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಶಸ್ಸಿನ ರುಚಿ ಕಂಡ ಎಐಎಂಐಎಂ (ಆಲ್‌ ಇಂಡಿಯಾ ಮಜಲೀಸ್‌-ಇ-ಇತ್ತೇಹಾದುಲ್‌ ಮುಸ್ಲಿಮೀನ್‌) ಪಕ್ಷವು ಇದೀಗ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಈ ಭಾಗದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 13 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸುತ್ತಿದೆ.

Tap to resize

Latest Videos

ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 15 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಎಐಎಂಐಎಂ ಮೂರು ಸ್ಥಾನ ಗೆಲ್ಲುವ ಜತೆಗೆ ಕಾಂಗ್ರೆಸ್‌ ಮತಬ್ಯಾಂಕ್‌ಗೆ ಕನ್ನ ಹಾಕಿ, ಕಾಂಗ್ರೆಸ್‌ ತನ್ನ ಭದ್ರಕೋಟೆಯಲ್ಲಿಯೇ ಐದು ಸ್ಥಾನ ಸೋಲುವಂತೆ ಮಾಡಿತ್ತು. ಅದೇ ರೀತಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳನ್ನು ನಿಲ್ಲಿಸಿ ಎರಡರಲ್ಲಿ ಜಯಶಾಲಿಯಾಗಿತ್ತು.

ಗೋವಾ ಬಿಜೆಪಿಗರಿಗೆ ಗೋವು ಮಾತೆಯಲ್ಲವೇ? : ಸಿ.ಎಂ.ಇಬ್ರಾಹಿಂ

ಪ್ರಸ್ತುತ ಪಕ್ಷದ ಮೂಲಗಳ ಪ್ರಕಾರ ಮುಸ್ಲಿಂ ಮತದಾರರ ಸಂಖ್ಯೆ ಅಧಿಕವಾಗಿರುವ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದೆ. ಹು-ಧಾ ಪಶ್ಚಿಮ, ಹುಬ್ಬಳ್ಳಿ ಪೂರ್ವ, ಹುಬ್ಬಳ್ಳಿ ಕೇಂದ್ರ ಹಾಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಶಕ್ತಿಯನ್ನು ಪರೀಕ್ಷಿಸಲು ಸಜ್ಜಾಗಿದೆ. ಜತೆಗೆ ಬೆಳಗಾವಿ, ಬೀದರ, ಯಾದಗಿರ, ರಾಯಚೂರು, ಕಲಬುರ್ಗಿ ಮತ್ತು ಶಿಗ್ಗಾಂವಿಗಳಲ್ಲೂ ಕೂಡಾ ತನ್ನ ಬಲವನ್ನು ಪರೀಕ್ಷೆ ಒಡ್ಡಲು ಪಕ್ಷವು ಯೋಚಿಸುತ್ತಿದೆ.

ಬರಲಿದ್ದಾರೆ ಓವೈಸಿ:

ಸದ್ಯ ಗುಜರಾತ ವಿಧಾನಸಭಾ ಚುನವಣೆಯಲ್ಲಿ ಮಗ್ನರಾಗಿರುವ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾವುದ್ದೀನ ಓವೈಸಿ ಗುಜರಾತ ಚುನಾವಣೆ ನಂತರ ಕರ್ನಾಟಕಕ್ಕೆ ಬರಲಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೆಗೆದುಕೊಳ್ಳಬೇಕಾದ ನಿಲುವನ್ನು ಅಂತಿಮಗೊಳಿಸಲಿದ್ದಾರೆ ಎಂದು ಪಾಲಿಕೆ ಸದಸ್ಯನಜೀರ್‌ ಹೊನ್ಯಾಳ ಮಾಹಿತಿ ನೀಡಿದ್ದಾರೆ.

ಪರಿಶಿಷ್ಟಜಾತಿ, ಜನಾಂಗದವರಿಗೆ ಮೀಸಲಿಟ್ಟಕ್ಷೇತ್ರಗಳನ್ನು ಹೊರತುಪಡಿಸಿ ತಾನು ಸ್ಪರ್ಧಿಸಬಯಸುವ ಉಳಿದೆಲ್ಲ ಕ್ಷೇತ್ರಗಳಲ್ಲಿ ಎಐಎಂಐಎಂ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದು ನಿಶ್ಚಿತ. ಜತೆಗೆ ಕಾಂಗ್ರೆಸ್‌ ಬಗ್ಗೆ ಮುಸ್ಲಿಂರ ಒಲವು ಕಡಿಮೆಯಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ ಏಳು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು ಲೋಕಸಭಾ ಚುನಾವಣೆಯಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಹೀಗಾಗಿ ಕಾಂಗ್ರೆಸ್‌ ಬಗ್ಗೆ ಮುಸ್ಲಿಂರ ಅಸಮಾಧಾನದ ಪ್ರಯೋಜನ ಪಡೆಯಲು ಎಐಎಂಐಎಂ ಲೆಕ್ಕಾಚಾರ ನಡೆಸಿದೆ ಎಂದು ತಿಳಿದು ಬಂದಿದೆ.

ಪೂರ್ವಕ್ಕೆ ಅಭ್ಯರ್ಥಿ:

ಪರಿಶಿಷ್ಟಜಾತಿಗೆ ಮೀಸಲಾಗಿರುವ ಹುಬ್ಬಳ್ಳಿ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ಸಿನ ಪ್ರಸಾದ ಅಬ್ಬಯ್ಯ ಸದ್ಯ ಶಾಸಕರಾಗಿದ್ದು, ಅಲ್ಲಿ 90 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಕ್ಷೇತ್ರ ಪುನರ್‌ ವಿಂಗಡನೆ ಆಗುವ ಮೊದಲು ಈ ಕ್ಷೇತ್ರದಲ್ಲಿರುವ ಬಹುತೇಕ ಪ್ರದೇಶಗಳು ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದವು. ಮುಸ್ಲಿಂ ನಾಯಕರಾದ ಎ.ಎಂ. ಹಿಂಡಸಗೇರಿ ಮತ್ತು ಜಬ್ಬಾರಖಾನ್‌ ಹೊನ್ನಳ್ಳಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದ್ದರಿಂದ ಎಐಎಂಐಎಂ ಈ ಸಲ ಒಬ್ಬ ಪರಿಶಿಷ್ಟಜಾತಿಯ ಅಭ್ಯರ್ಥಿಯನ್ನು ತನ್ನ ಪಕ್ಷದ ಪರವಾಗಿ ಕಣಕ್ಕಿಳಿಸುವುದು ಪಕ್ಕಾ.

ಇನ್ನು, ಬಿಜೆಪಿಯ ಅರವಿಂದ ಬೆಲ್ಲದ ಪ್ರತಿನಿಧಿಸುತ್ತಿರುವ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡೆಸಿದ ಪ್ರಯತ್ನ ಈ ಹಿಂದೆ ವಿಫಲವಾಗಿದೆ. ಈ ಬಾರಿ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಈ ಕ್ಷೇತ್ರದಿಂದ ನಿಲ್ಲಿಸುವ ಸಂಭವ ತೀರಾ ಕಡಿಮೆ. ಈ ಹಿಂದೆ ಇಲ್ಲಿಯ ಅಭ್ಯರ್ಥಿಯಾಗಿದ್ದ ಇಸ್ಮಾಯಿಲ್‌ ತಮಟಗಾರ ಈ ಬಾರಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಹೀಗಾಗಿ ಹು-ಧಾ ಪಶ್ಚಿಮ ಕ್ಷೇತ್ರದ ಮುಸ್ಲಿಂ ಮತಗಳನ್ನು ಸೆಳೆಯುವ ಯೋಜನೆ ಎಐಎಂಐಎಂಗೆ ಇದೆ ಎಂದು ವಿಶ್ಲೇಷಿಸಬಹುದು.

ಕೇಂದ್ರ ಮೇಲೂ ಕಣ್ಣು:

ಧಾರವಾಡ ಗ್ರಾಮೀಣ ಮತ್ತು ಹುಬ್ಬಳ್ಳಿ ಕೇಂದ್ರ ವಿಧಾನಸಭಾ ಕ್ಷೇತ್ರಗಳು ತಲಾ 40 ಸಾವಿರ ಮುಸ್ಲಿಂ ಮತದಾರರನ್ನು ಹೊಂದಿದ್ದು, ಈ ಕ್ಷೇತ್ರಗಳ ಮೇಲೆಯೂ ಎಐಎಂಐಎಂ ಕಣ್ಣು ಹಾಕಿದೆ. ಆಕಸ್ಮಾತ್‌ ಇಸ್ಮಾಯಿಲ್‌ ತಮಟಗಾರಗೆ ಕಾಂಗ್ರೆಸ್ಸಿನಿಂದ ಧಾರವಾಡ ಗ್ರಾಮೀಣದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೆ ಆ ಕ್ಷೇತ್ರವನ್ನು ಬಿಟ್ಟು ಎಐಎಂಐಎಂ ಹುಬ್ಬಳ್ಳಿ ಕೇಂದ್ರದಿಂದ ಸ್ಪರ್ಧಿಸಲು ಯೋಚಿಸುತ್ತಿದೆ.

ಉತ್ತರ ಕರ್ನಾಟಕಕ್ಕೆ ಲಗ್ಗೆ ಹಾಕುವ ಎಐಎಂಐಎಂ ಪ್ರಯತ್ನ ಕೈಗೂಡುವುದೇ ಎಂಬ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಉತ್ತರ ದೊರೆಯಲಿದೆ. ತನ್ನ ಯೋಜನೆಯಲ್ಲಿ ಈ ಪಕ್ಷ ಯಶಸ್ವಿಯಾದರೆ ಅದು ಉತ್ತರ ಕರ್ನಾಟಕದ ರಾಜಕಾರಣದ ದಿಕ್ಕು ಬದಲಾಯಿಸುವುದರಲ್ಲಿ ಎರಡು ಮಾತಿಲ್ಲ.

click me!