ಸಮ್ಮಿಶ್ರ ಸರ್ಕಾರವಾದರೂ ಎಚ್ಡಿಕೆ ಮುಸ್ಲಿಂ ಸಿಎಂ ಮಾಡ್ತಾರಾ?: ಜಮೀರ್‌ ಸವಾಲು

By Govindaraj SFirst Published Dec 6, 2022, 3:40 AM IST
Highlights

ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಮುಸ್ಲಿಮರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂಬುದಾಗಿ ಘೋಷಿಸಲಿ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ಖಾನ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ. 

ಬೆಂಗಳೂರು (ಡಿ.06): ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಮುಸ್ಲಿಮರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂಬುದಾಗಿ ಘೋಷಿಸಲಿ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ಖಾನ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ 113 ಸ್ಥಾನ ಬಂದರೆ ಮುಸ್ಲಿಮರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಜೆಡಿಎಸ್‌ 100 ಸ್ಥಾನ ದಾಟಲ್ಲ. ಎಲ್ಲಿಂದ ಮುಸ್ಲಿಂರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. 

ಸಮ್ಮಿಶ್ರ ಸರ್ಕಾರ ರಚನೆಯಾದರೂ ಮುಸ್ಲಿಮರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಣೆ ಮಾಡಲಿ. ಇದು ನನ್ನ ಬಹಿರಂಗ ಸವಾಲು. ಜೆಡಿಎಸ್‌ಗೆ 113 ಸ್ಥಾನ ಬರಲು ಸಾಧ್ಯನಾ? ಎಂದು ತಿರುಗೇಟು ನೀಡಿದರು. ಎಲ್ಲರೂ ರಾತ್ರಿ ಕನಸು ಕಾಣಿದರೆ, ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಯಾವುದೇ ಯಾತ್ರೆ, ವ್ರತ ಮಾಡಿದರೂ ಅದು ಸಾಧ್ಯವಿಲ್ಲ. ಚಾಮರಾಜಪೇಟೆ ಕ್ಷೇತ್ರದಲ್ಲಿ ನನ್ನ ವಿರುದ್ಧ 2018ರಲ್ಲಿ ಎಲ್ಲಾ ಶಕ್ತಿಗಳು ಒಂದಾಗಿದ್ದವು. ಆಗ ಏನಾಯಿತು? ಜಮೀರ್‌ಗೆ ಕಷ್ಟಎಂದಿದ್ದರು. ಆದರೆ, ಫಲಿತಾಂಶ ಏನಾಯಿತು? ಅಧಿಕ ಲೀಡ್‌ನಲ್ಲಿ ಗೆಲುವು ಸಾಧಿಸಿದೆ. 

ಜನವರಿ ತಿಂಗಳಾಂತ್ಯಕ್ಕೆ 3 ದಿನಗಳ ಕಾಲ ಹಂಪಿ ಉತ್ಸವ: ಸಚಿವೆ ಶಶಿಕಲಾ ಜೊಲ್ಲೆ

ನನ್ನ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಆದರೂ ಸೋಲಿಸಲು ಸಾಧ್ಯವಾಗಲಿಲ್ಲ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರನ್ನು ಕಣಕ್ಕಿಳಿಸುವಂತೆ ಸವಾಲು ಹಾಕಿದ್ದೆ. ಅವರು ಇಲ್ಲದಿದ್ದರೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅಥವಾ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನಿಲ್ಲಿಸುವಂತೆ ತಿಳಿಸಿದ್ದೆ. ಒಂದು ವೇಳೆ ನಾನು ಸೋಲನುಭವಿಸಿದರೆ ನನ್ನ ತಲೆ ಕತ್ತರಿಸಿ ತಂದು ಕೊಡುತ್ತೇನೆ ಎಂದಿದ್ದೆ. ಆದರೆ ಫಲಿತಾಂಶ ಏನಾಯಿತು? ಅಧಿಕ ಲೀಡ್‌ನಲ್ಲಿ ಗೆಲುವು ಸಾಧಿಸಿದೆ ಎಂದು ಹೇಳಿದರು.

ಜೆಡಿಎಸ್‌ ಮೊದಲು ಬಹುಮತ ಪಡೆಯಲಿ: ಜೆಡಿಎಸ್‌ ಪಕ್ಷ ಮೊದಲು ಬಹುಮತ ಪಡೆದು ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಸಿಎಂ ಮಾಡುವುದು ಅಥವಾ ಮಹಿಳೆಯನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯೋಚನೆ ಮಾತನಾಡಲಿ ಎಂದು ಸಂಸದೆ ಸುಮಲತಾ ಅಂಬರೀಶ್‌ ಗುರುವಾರ ವ್ಯಂಗ್ಯವಾಡಿದರು. ಹಿರಿಯ ನಟ ದಿ.ಡಾ.ಅಂಬರೀಶ್‌ ಹುಟ್ಟೂರಾದ ದೊಡ್ಡರಸಿನಕೆರೆಗೆ ತೆರಳುವ ಮಾರ್ಗ ಮಧ್ಯೆ ಅನಿಕೇತನ ವಿದ್ಯಾ ಸಂಸ್ಥೆಯಲ್ಲಿ ಅಂಬರೀಶ್‌ ಮತ್ತು ಸಹೋದರರಾದ ಎಂ.ಎಚ್‌.ಆನಂದ ಹಾಗೂ ಹರೀಶ್‌ ಅವರುಗಳ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಲು ಅವಕಾಶ ಇಲ್ಲ: ಕೆ.ಎಸ್.ಈಶ್ವರಪ್ಪ

ಚುನಾವಣೆಗೂ ಮುನ್ನ ಮತದಾರರಿಗೆ ಹಲವು ರೀತಿಯ ಭರವಸೆ ನೀಡುವುದು ಸಾಮಾನ್ಯ. ಜನ ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಬಹಳ ಮುಖ್ಯ. ಜೆಡಿಎಸ್‌ ಇದುವರೆಗೆ ಬಹುಮತದಿಂದ ಆಧಿಕಾರಕ್ಕೆ ಬಂದಿಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ಬಹುಮತ ಬಂದರೆ ಮುಸ್ಲಿಮರನ್ನು ಸಿಎಂ ಮಾಡುವುದು ಅಥವಾ ಮಹಿಳೆಯನ್ನು ಡಿಸಿಎಂ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರುತ್ತಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ ಎಂದು ಲೇವಡಿ ಮಾಡಿದರು.

click me!