: ಕೋಲಾರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಸಭೆಯಲ್ಲಿ 2 ಗುಂಪುಗಳು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪರ ವಿರೋಧ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ, ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಕೋಲಾರ (ಡಿ.6) : ಕೋಲಾರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಸಭೆಯಲ್ಲಿ 2 ಗುಂಪುಗಳು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪರ ವಿರೋಧ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ, ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೋಡಾ ಮಾಜಿ ಅಧ್ಯಕ್ಷ ಅತಾವುಲ್ಲಖಾನ್, ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, 2019ರ ಚುನಾವಣೆ ವೇಳೆ ನಡೆದ ಕಹಿ ನೆನಪುಗಳನ್ನು ಮರೆತು ಪಕ್ಷದ ಗೆಲುವಿಗೆ ಶ್ರಮಿಸಲು ಬದ್ಧನಾಗಿದ್ದೇನೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಖರ್ಗೆ ನೀಡಿದ್ದಾರೆ. ನನ್ನೆಲ್ಲಾ ನೋವುಗಳನ್ನು ನುಂಗಿಕೊಂಡು ಒಂದಾಗಿ ಹೋಗಲು ಒಪ್ಪಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಟಿಕೆಟ್ ಹಂಚಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಮಾತೂ ಕೇಳಿ ಬರುತ್ತಿದೆ ಎಂದರು.
undefined
ಚಾಮರಾಜಪೇಟೆಗೆ ನಾನು ಮಗ, ಸಿದ್ದು ಅಳಿಯ: ಶಾಸಕ ಜಮೀರ್ ಅಹ್ಮದ್
ಈ ವೇಳೆ, ಕೋಲಾರದಿಂದ ಸಿದ್ದರಾಮಯ್ಯನವರೇ ಸ್ಪರ್ಧಿಸಬೇಕು ಎಂಬ ಕೂಗು ಕಾರ್ಯಕರ್ತರಿಂದ ಕೇಳಿ ಬಂತು. ಮಾತು ಮುಂದುವರಿಸಿದ ಮುನಿಯಪ್ಪ, ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸಿದರೆ ಸ್ವಾಗತ. ಅವರು ಬರುವ ಮೊದಲು ಕ್ಷೇತ್ರದಲ್ಲಿನ ಗುಂಪುಗಾರಿಕೆಯನ್ನು ಸರಿಮಾಡಲು ಸೂಚಿಸಿದ್ದೇನೆ. ಕಾಂಗ್ರೆಸ್‌ನ್ನು ಸೋಲಿಸಲು ಪ್ರಯತ್ನಪಟ್ಟವರು ಸಿದ್ದರಾಮಯ್ಯ ಪರವಾಗಿ ಪ್ರವಾಸ ಮಾಡುವ ಅವಶ್ಯಕತೆ ಇತ್ತೆ?. ಇವರು ಮೊದಲು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಳ್ಳಲಿ. ಕೋಲಾರದ ಊಸಾಬರಿ ಬೇಡ ಎಂದು ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಈ ವೇಳೆ, ಕೆಲವರು ಸಿದ್ದು ಪರ ಜಯಕಾರ ಕೂಗತೊಡಗಿದರು. ಇದೇ ವೇಳೆ, ಮುನಿಯಪ್ಪ ಪರವಾಗಿಯೂ ಕೆಲವರು ಜಯಕಾರ ಕೂಗಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಬಳಿಕ, ಸಭೆಯನ್ನು ಮುಕ್ತಾಯಗೊಳಿಸಲಾಯಿತು.