* ಈಗಾಗಲೇ ಇಬ್ರಾಹಿಂ ಜತೆ ಅವರೊಂದಿಗೆ ಮಾತುಕತೆ ನಡೆಸಿದ ಕೆಲ ನಾಯಕರು
* ಸಿ.ಎಂ. ಇಬ್ರಾಹಿಂ ಎಲ್ಲ ಸಮುದಾಯದ ಜನರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ
* ಸೂಕ್ತ ಸಂದರ್ಭದಲ್ಲಿ ಮಾತುಕತೆ ನಡೆಸಲಿರುವ ಸಿದ್ದು-ಡಿಕೆಶಿ
ಧಾರವಾಡ(ಫೆ.08): ಅಸಮಾಧಾನದಿಂದ ಸಿ.ಎಂ. ಇಬ್ರಾಹಿಂ(CM Ibrahim) ಅವರು ಪಕ್ಷ ತೊರೆಯುವ ನಿರ್ಧಸಿರಿದ್ದು ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಒಂದು ವೇಳೆ ಅವರು ಪಕ್ಷ ತೊರೆದರೆ ಕಾಂಗ್ರೆಸ್ಸಿಗೆ ತುಂಬ ನಷ್ಟವಾಗಲಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ(Deepak Chinchore) ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ. ಇಬ್ರಾಹಿಂ ಎಲ್ಲ ಸಮುದಾಯದ ಜನರ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವರು. ಅವರ ವಾಕ್ಚಾತುರ್ಯ ಮೆಚ್ಚವಂತಹದ್ದು. ಎಲ್ಲ ಕಾರ್ಯಕರ್ತರು ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಮೂಲಕ ಅವರು ಪಕ್ಷ ತೊರೆಯದಂತೆ ನೋಡಿಕೊಳ್ಳಲಾಗುವುದು ಎಂದರು.
Karnataka Politcs: ನನ್ನ ಹುದ್ದೆಗೂ, ಇಬ್ರಾಹಿಂ ವಿಚಾರಕ್ಕೂ ಸಂಬಂಧ ಇಲ್ಲ: ಖಾದರ್
ಈಗಾಗಲೇ ಕೆಲ ನಾಯಕರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಸಹ ಸೂಕ್ತ ಸಂದರ್ಭದಲ್ಲಿ ಮಾತುಕತೆ ನಡೆಸುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ನಿರ್ಧಾರ ಮಾಡಬಾರದು ಎಂದು ಮನವಿ ಮಾಡಿದರು.
ಹುಬ್ಬಳ್ಳಿ(Hubbali ) ಈದ್ಗಾ ಮೈದಾನ ವಿವಾದ ಇತ್ಯರ್ಥದ ಸಮಯದಲ್ಲಿ ಕೇಂದ್ರ ಸಚಿವರಾಗಿದ್ದ ಇಬ್ರಾಹಿಂ ಪಾತ್ರ ಪ್ರಮುಖ. ಈ ಘಟನೆಯಿಂದ ಹು-ಧಾ ಅವಳಿನಗರದಲ್ಲಿ ಕಫ್ರ್ಯೂ, ನಿಷೇಧಾಜ್ಞೆಗಳಿಂದ ಜನರು ಕಂಗೆಟ್ಟಿದ್ದರು. ವಿವಾದ ಬಗೆಹರಿಸುವ ನಿಟ್ಟಿನಲ್ಲಿ 1996ರಲ್ಲಿ ಫೆ. 6ರಂದು ಅಂಜುಮನ್ ಸಂಸ್ಥೆ ಜತೆಗೆ ಸಂಧಾನ ಸಭೆ ಏರ್ಪಡಿಸಲಾಗಿತ್ತು. ಸಭೆಯ ದಿನ ಮೃತಪಟ್ಟಿದ್ದ ತಮ್ಮ ಮಗನ ಅಂತ್ಯ ಸಂಸ್ಕಾರ ನಡೆಸಿ ಹುಬ್ಬಳ್ಳಿಗೆ ಆಗಮಿಸಿ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಭೆಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸಹ ಪಾಲ್ಗೊಂಡಿದ್ದರು. ಈ ಘಟನೆ ನಡೆದು 25 ವರ್ಷಗಳಾಗಿವೆ. ವಿವಾದ ಇತ್ಯರ್ಥವಾಗಲು ಕಾರಣರಾದ ಇಬ್ರಾಹಿಂ ಅವರಿಗೆ ಸರ್ಕಾರ ಶಾಂತಿ ಪ್ರಶಸ್ತಿಗಳನ್ನು ಘೋಷಿಸಬೇಕೆಂದೂ ಚಿಂಚೋರೆ ಒತ್ತಾಯಿಸಿದರು.
ಇಬ್ರಾಹಿಂ ಜತೆ ಫೋನ್‌ನಲ್ಲಿ ಸಿದ್ದು 10 ನಿಮಿಷ ಮಾತುಕತೆ
ಬೆಂಗಳೂರು: ಕಾಂಗ್ರೆಸ್(Congress) ತೊರೆಯುವ ನಿರ್ಧಾರ ಮಾಡಿರುವ ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹಿಂ ಮನವೊಲಿಸಲು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ತಂಡ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ಸೋಮವಾರ ಸಿದ್ದರಾಮಯ್ಯ ಆಪ್ತ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇಬ್ರಾಹಿಂ ಅವರೊಂದಿಗೆ ಎಚ್.ಸಿ. ಮಹದೇವಪ್ಪ ಮಾತುಕತೆ ನಡೆಸಿದ್ದಾರೆ. ನಾನು ಸಹ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ಕೇವಲ ದೂರವಾಣಿಯಲ್ಲಿ ಮಾತ್ರವಲ್ಲ ಖುದ್ದು ಮನೆಗೂ ಭೇಟಿ ನೀಡಿ ಮಾತನಾಡುತ್ತೇನೆ. ಜಾತ್ಯತೀತ(Secular) ಸಿದ್ಧಾಂತದವರೆಲ್ಲರೂ ಒಟ್ಟಾಗಿರಬೇಕು ಎಂದು ತಿಳಿಸುತ್ತೇನೆ ಎಂದಿದ್ದಾರೆ.
Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ
ಸೋಮವಾರ ಇಬ್ರಾಹಿಂ ಅವರ ಮನೆಗೆ ಭೇಟಿ ನೀಡಿದ ಮಹದೇವಪ್ಪ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸಂದೇಶವನ್ನು ಇಬ್ರಾಹಿಂಗೆ ತಲುಪಿಸಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡಬೇಡಿ, ಮುಂದೆ ಸ್ಥಾನಮಾನ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇಬ್ರಾಹಿಂಗೆ ಸಿದ್ದರಾಮಯ್ಯ ಕರೆ:
ಇದೇ ವೇಳೆ ಸಿ.ಎಂ. ಇಬ್ರಾಹಿಂಗೆ ಸಿದ್ದರಾಮಯ್ಯ ಕರೆ ಮಾಡಿ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿ, ‘ಪಕ್ಷ ಬಿಡಬೇಡ ಮುಂದೆ ನಿನಗೆ ಸ್ಥಾನಮಾನ ಕೊಡೋಣ’ ಎಂದು ಮನವೊಲಿಸಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ. ಫೆ.14ರಂದು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಶೀಘ್ರದಲ್ಲೇ ಜೆಡಿಎಸ್(JDS) ಸೇರ್ಪಡೆಯಾಗುತ್ತೇನೆ ಎಂದು ಇಬ್ರಾಹಿಂ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಮೂಲಕ ಸಂಧಾನ ಪ್ರಯತ್ನ ನಡೆಸಿದ್ದಾರೆ.