* ಕುಮಾರಸ್ವಾಮಿ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ ದತ್ತಾ
* ಪಕ್ಷದ ಜಾತ್ಯತೀತ ನಿಲುವು ಶಿಥಿಲವಾಗುತ್ತಿವೆ ಎಂದ ಮಾಜಿ ಶಾಸಕ
* ಜೆಡಿಎಸ್ ಗುಡ್ ಬೈ ಹೇಳ್ತಾರಾ ದೇವೇಗೌಡ್ರ ಮಾನಸ ಪುತ್ರ?
ಬೆಂಗಳೂರು, (ಫೆ.07): ಮಾಜಿ ಶಾಸಕ, ಎಚ್‌ಡಿ ದೇವೇಗೌಡ ಅವರ ಮಾನಸ ಪುತ್ರ ವೈಎಸ್‌ವಿ ದತ್ತಾ(YSV Datta) ಅವರು ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಇಂದು (ಸೋಮವಾರ) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಜಾತ್ಯತೀತ ಜನತಾದಳದ (ಜೆಡಿಎಸ್) ಹೋರಾಟ ತೀವ್ರತೆ ಕಳೆದುಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಭೇಟಿಯಾದ ದೇವೇಗೌಡ್ರ ಮಾನಸ ಪುತ್ರ, ಕುತೂಹಲ ಮೂಡಿಸಿದ ದತ್ತಾ ನಡೆ
ಬಿಜೆಪಿ ವಿರುದ್ಧ ಜೆಡಿಎಸ್ ಹೆಚ್ಚು ತೀವ್ರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷದ ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ. ಪಕ್ಷದ ಸಿದ್ಧಾಂತ ಯಾವ ಕಾರಣಕ್ಕೂ ಬದಲಾಗಬಾರದು. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ದೂರದಲ್ಲೇ ಇಡಬೇಕು. ಈ ಮೂಲಕ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕು. ಬಿಜೆಪಿ ವಿರುದ್ಧ ಜೆಡಿಎಸ್ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ. ಇದನ್ನು ನಾನು ಪಕ್ಷದ ವೇದಿಕೆಯಲ್ಲಿಯೂ ಚರ್ಚಿಸಿದ್ದೇನೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸ್ಪಷ್ಟ ನಿಲುವು ಇರಬೇಕು ಎಂದು ಹೇಳಿದರು.
ಪಕ್ಷದ ನಿಲುವು ಒಂದೇ ರೀತಿಯಲ್ಲಿರಬೇಕು. ಅದು ಪದೇಪದೆ ಬದಲಾಗಬಾರದು. ಪಕ್ಷದ ನಿಲುವುಗಳಲ್ಲಿ ನಿರಂತರತೆ ಇರಬೇಕು. ನಮ್ಮ ನಿಲುವು ಸದಾ ಸಾಮಾಜಿಕ ನ್ಯಾಯದ ಪರವಾಗಿಯೇ ಇರಬೇಕು. ಹೀಗೆ ಇರುತ್ತದೆ ಎನ್ನುವ ಕಾರಣಕ್ಕೆ ನಾನು ಜೆಡಿಎಸ್ನಲ್ಲಿ ಇಷ್ಟು ದೀರ್ಘ ಕಾಲ ಇದ್ದೇನೆ. ಆದರೆ ಇತ್ತೀಚೆಗೆ ಈ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಮನೋಭಾವ ಮತದಾರರಲ್ಲಿ ಮೂಡಿದೆ. ಬಿಜೆಪಿಯನ್ನು ಜೆಡಿಎಸ್ ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ ಎನ್ನುವ ಅಭಿಪ್ರಾಯ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಲ್ಲಿ ಇದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿಚಾರ ಇಂದಿಗೂ ಸ್ಪಷ್ಟವಾಗಿಯೇ ಇದೆ. ಅವರ ನಿಲುವುಗಳ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಜಾತ್ಯತೀತರಾಗಿಯೇ ಎಲ್ಲ ಕಾಲದಲ್ಲಿಯೂ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ನನಗೆ 20 ವರ್ಷವಿದ್ದಾಗ ದೇವೇಗೌಡರ ಅನುಯಾಯಿಯಾದೆ. ಈಗ ನನಗೆ 69 ವರ್ಷ ವಯಸ್ಸು. ಇಂದಿಗೂ ನಾನು ದೇವೇಗೌಡರ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅವರು ಏನು ಎಂಬುದು ನನಗೆ ಗೊತ್ತು ಎಂದರು.
ಜೆಡಿಎಸ್ ನ ಹಲವು ಶಾಸಕರು ಕಾಂಗ್ರೆಸ್ ನತ್ತ ಮುಖ ಮಾಡಿರುವ ಬೆನ್ನಲ್ಲೇ ಇದೀಗ ಮಾಜಿ ಶಾಸಕ, ಜೆಡಿಎಸ್ ಹಿರಿಯ ಮುಖಂಡ ವೈ.ಎಸ್.ವಿ ದತ್ತಾ ಕೂಡ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರಾ? ಎಂಬ ಕುತೂಹಲ ಮೂಡಿದೆ.
ಸಿದ್ದರಾಮಯ್ಯ ಭೇಟಿಯಾದ ದತ್ತಾ
ಜೆಡಿಎಸ್ ಪಕ್ಷದ ಹಿರಿಯ ನಾಯಕ, ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಇಂದು (ಸೋಮವಾರ) ಬೆಳಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah) ಅವರ ನಿವಾಸಕ್ಕೆ ಬೆಂಬಲಿಗರೊಂದಿಗೆ ಭೇಟಿ ನೀಡಿದ್ದಾರೆ.
ಈ ವೇಳೆ ವೈ.ಎಸ್.ವಿ ದತ್ತ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಬಹಿರಂಗವಾಗಿಯೇ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಅಭಿಮಾನಿಗಳು ಮನವಿ ಮಾಡುತ್ತಿದಂತೆ ‘ಸುಮ್ಮನಿರಿ’ ಎಂದು ವೈ.ಎಸ್.ವಿ. ದತ್ತ ಅವರು ಅಭಿಮಾನಿಗಳ ಮಾತನ್ನು ತಡೆಯುವ ಪ್ರಯತ್ನ ಮಾಡಿದರು. ಆದರೂ ಬಿಡದ ದತ್ತ ಅಭಿಮಾನಿಗಳು ‘ಸಿದ್ದರಾಮಯ್ಯನವರೇ ಕೃಷ್ಣಮೂರ್ತಿ ಅವರ ಕಾಲದಿಂದಲೂ ನೀವು ಹೇಳಿದಂತೇ ಮಾಡಿದ್ದೀವಿ, ಇದೊಂದು ಬಾರಿ ದತ್ತಾ ಅವರಿಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು. ಆದರೆ ಅಭಿಮಾನಿಗಳ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಸುಮ್ಮನಾದರು.
ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ
ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಉಳಿದಿದೆ. ಈಗಾಗಲೇ ಜೆಡಿಎಸ್ ಕೋರ್ ಕಮಿಟಿ ಅದು ಇದು ಅಂತೆಲ್ಲ ಪಕ್ಷ ಸಂಘಟನೆಗೆ ತಯಾರಿ ನಡೆಸಿದೆ. ಆದ್ರೆ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ವೈಎಸ್‌ವಿ ದತ್ತ ಕಾಣಿಸುತ್ತಿಲಲ್. ಅದ್ಯಾಕೋ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.
ದೇವೇಗೌಡರ ಮಾನಸ ಪುತ್ರ ಎಂದೇ ಬಿಂಬಿತರಾಗಿರುವ ವೈಎಸ್‌ವಿ ದತ್ತಾ ಅವರು ಬಿಜೆಪಿ ಜತೆ ರಾಜಿ ಸಂಬಂಧ ಪಕ್ಷದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸೇರ್ತಾರಾ ಎನ್ನುವ ಗುಸು-ಗುಸು ಇದೆ.