2019ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಭರ್ಜರಿ ಬಹುಮತ ಗಳಿಸಿದ್ದ ಬಿಜೆಪಿ, ಮಿತ್ರಪಕ್ಷಗಳನ್ನು ನಿರ್ಲಕ್ಷಿಸಿತ್ತು ಎನ್ನಲಾಗಿದೆ. ಹೀಗಾಗಿ 2019ರ ನಂತರ ಅಕಾಲಿದಳ, ಎಲ್‌ಜೆಪಿ, ಜೆಡಿಯು, ಶಿವಸೇನೆ ಹೀಗೆ ಅನೇಕ ಪಕ್ಷಗಳು ಎನ್‌ಡಿಎನಿಂದ ಹೊರಬಿದ್ದಿದ್ದವು.
ನವದೆಹಲಿ (ಜುಲೈ 18, 2023): ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಣಿಸಲು ವಿಪಕ್ಷಗಳು ಅತ್ತ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದರೆ, ಇತ್ತ ದಿಲ್ಲಿಯಲ್ಲಿ ಮಂಗಳವಾರ ಸಂಜೆ ಮೋದಿ ನೇತೃತ್ವದಲ್ಲಿ ಎನ್‌ಡಿಎ ಅಂಗಪಕ್ಷಗಳು ಹಾಗೂ ಕೆಲವು ಬಿಜೆಪಿ ಆಪ್ತ ಪಕ್ಷಗಳು ಸಭೆ ನಡೆಸಲಿವೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಜಯ ಬಾರಿಸುವುದಕ್ಕೆ ರಣತಂತ್ರ ಹೆಣೆಯಲು ಶ್ರೀಕಾರ ಹಾಕಲಿವೆ. ವಿಶೇಷವೆಂದರೆ ಮೋದಿ 2.0 ಸರ್ಕಾರದಲ್ಲಿ ನಡೆಯುತ್ತಿರುವ ಮೊದಲ ಎನ್‌ಡಿಎ ಸಭೆ ಇದಾಗಿದೆ.
‘ಎನ್‌ಡಿಎ ಸಭೆಯಲ್ಲಿ 38 ಪಕ್ಷಗಳು ಪಾಲ್ಗೊಳ್ಳಲಿವೆ. ಆ ಪಕ್ಷಗಳು ಯಾವುವು ಎಂದು ನಾಳೆಯೇ ನಿಮಗೆ ತಿಳಿಯಲಿದೆ’ ಎಂದು ಸಭೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಅಲ್ಲದೆ, ‘ಇದು ದೇಶ ಬಲಗೊಳಿಸುವ ಕೂಟ. ಕಳೆದ 9 ವರ್ಷದಲ್ಲಿ ಮೋದಿ ಅವರು ದೇಶಕ್ಕೆ ಸದೃಢ ನಾಯಕತ್ವ ನೀಡಿದ್ದೇ ಇದಕ್ಕೆ ಸಾಕ್ಷಿ’ ಎಂದಿದ್ದಾರೆ.
ಇದನ್ನು ಓದಿ: ಪ್ರತಿಪಕ್ಷಗಳಿಗೆ ಸಡ್ಡು: ನಾಳೆ ದಿಲ್ಲಿಯಲ್ಲಿ ಎನ್‌ಡಿಎ ಬಲ ಪ್ರದರ್ಶನ; 30 ರಾಜಕೀಯ ಪಕ್ಷಗಳ ನಾಯಕರು ಭಾಗಿ ನಿರೀಕ್ಷೆ
ಬಿಜೆಪಿಯಿಂದ ಕೆಲವು ವರ್ಷಗಳ ಹಿಂದೆ ದೂರವಾಗಿದ್ದ ಬಿಹಾರದ ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಹಿಂದುಸ್ತಾನಿ ಅವಾಮ್ ಮೋರ್ಚಾದ ಜೀತನ್ ರಾಂ ಮಾಂಝಿ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಕುಶ್ವಾಹ ಹಾಗೂ ವಿಕಾಸಶೀಲ ಇನ್ಸಾನ್ ಪಕ್ಷದ ಮುಕೇಶ್ ಸಾಹನಿ ಅವರೂ ಸಭೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಜತೆಗೆ ಎನ್‌ಡಿಎನಲ್ಲಿ ಅಧಿಕೃತವಾಗಿ ಕಾಣಿಸಿಕೊಳ್ಳದಿದ್ದರೂ ಬಿಜೆಪಿ ಜತೆ ಬಾಹ್ಯ ಸಖ್ಯ ಹೊಂದಿರುವ ಅಣ್ಣಾ ಡಿಎಂಕೆ, ಆಂಧ್ರಪ್ರದೇಶದ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಗಳು ಸಭೆಯಲ್ಲಿ ಭಾಗವಹಿಸುತ್ತಿವೆ. ಇತ್ತೀಚೆಗೆ ಎನ್‌ಸಿಪಿಯಿಂದ ಬಂಡೆದ್ದು ಮಹಾರಾಷ್ಟ್ರ ಸರ್ಕಾರ ಸೇರಿರುವ ಅಜಿತ್ ಪವಾರ್ ಹಾಗೂ ಪ್ರಫುಲ್ ಪಟೇಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡ ಬರಲಿದ್ದಾರೆ.
ಈ ನಡುವೆ, ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ಶುಕ್ರವಾರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಮೈತ್ರಿ ಮಾತುಕತೆ ಮುರಿದ ಕಾರಣ ತೆಲುಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಹಾಗೂ ಅಕಾಲಿದಳ ಅಧ್ಯಕ್ಷ ಸುಖಬೀರ್ ಬಾದಲ್ ಅವರು ಸಭೆಗೆ ಬರುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಮೋದಿ ಮಣಿಸಲು ಬೆಂಗ್ಳೂರಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಸಭೆ: 26 ಪಕ್ಷಗಳ ಮುಖಂಡರಿಗೆ ಆಹ್ವಾನ
ಸಭೆ ಯಾಕೆ ಮಹತ್ವದ್ದು?:
2019ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಭರ್ಜರಿ ಬಹುಮತ ಗಳಿಸಿದ್ದ ಬಿಜೆಪಿ, ಮಿತ್ರಪಕ್ಷಗಳನ್ನು ನಿರ್ಲಕ್ಷಿಸಿತ್ತು ಎನ್ನಲಾಗಿದೆ. ಹೀಗಾಗಿ 2019ರ ನಂತರ ಅಕಾಲಿದಳ, ಎಲ್‌ಜೆಪಿ, ಜೆಡಿಯು, ಶಿವಸೇನೆ ಹೀಗೆ ಅನೇಕ ಪಕ್ಷಗಳು ಎನ್‌ಡಿಎನಿಂದ ಹೊರಬಿದ್ದಿದ್ದವು.
ಆದರೆ ಬದಲಾದ ಪರಿಸ್ಥಿತಿಯಲ್ಲಿ 2024ರ ಚುನಾವಣೆ ಅಷ್ಟು ಸುಲಭವಲ್ಲ ಎಂದು ಬಿಜೆಪಿಗೆ ಗೊತ್ತಾಗಿದೆ. ಏಕೆಂದರೆ ಪ್ರತಿಪಕ್ಷಗಳು ಒಟ್ಟಾಗಿ ಬಿಜೆಪಿ ಮಣಿಸುವ ತಂತ್ರ ರೂಪಿಸುತ್ತಿವೆ. ಅಲ್ಲದೆ, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಹೀಗಾಗಿ ಮೈತ್ರಿ ಅನಿವಾರ್ಯ ಎಂದು ಮನಗಂಡಿರುವ ಬಿಜೆಪಿ ಈಗ ಮತ್ತೆ ಮಿತ್ರಪಕ್ಷಗಳನ್ನು ‘ಕ್ಯಾಚ್’ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಶಿವಸೇನೆ ಹಾಗೂ ಎನ್‌ಸಿಪಿಗಳನ್ನು ವಿಭಜಿಸಿ ತಲಾ ಒಂದು ಬಣಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿ, ಕುಶ್ವಾಹ ಅವರ ಪಕ್ಷ, ಮಾಂಝಿ ಅವರ ಪಕ್ಷಗಳನ್ನು ಮತ್ತೆ ತನ್ನ ಕಡೆ ಸೆಳೆದಿದೆ. ಹೀಗಾಗಿ ಎಲ್ಲ ಮಿತ್ರರ ಸಭೆ ನಡೆಸಿ ಮತ್ತೆ ಎನ್‌ಡಿಎ ಮರುಸಂಘಟನೆ ಮಾಡುವುದು ಮೋದಿ ಲೆಕ್ಕಾಚಾರ ಎನ್ನಲಾಗಿದೆ.
ಇದನ್ನೂ ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ
ಕಾಂಗ್ರೆಸ್ ವ್ಯಂಗ್ಯ:
‘ಇಷ್ಟು ವರ್ಷ ಕಾಣೆಯಾಗಿ ‘ಭೂತ’ದ ರೂಪ ತಾಳಿದ್ದ ಎನ್‌ಡಿಎಗೆ ಈಗ ಮರುಜೀವ ನೀಡಲು ಯತ್ನಿಸಲಾಗುತ್ತಿದೆ. ಏಕಚಕ್ರಾಧಿಪತಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮೋದಿಗೆ ಈಗ ಎನ್‌ಡಿಎ ನೆನಪಾಗಿದೆ’ ಎಂದು ಕಾಂಗ್ರೆಸ್ ಮುಖಂಡರು ವ್ಯಂಗ್ಯವಾಡಿದ್ದಾರೆ.
ಭಾಗಿ ಆಗಲಿರುವ ಪ್ರಮುಖ ಪಕ್ಷಗಳು
ಬಿಜೆಪಿ, ಎಐಎಡಿಎಂಕೆ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ), ಎಲ್‌ಜೆಪಿ, ಎನ್‌ಪಿಪಿ, ಎಜೆಎಸ್‌ಯು, ಆರ್‌ಪಿಐ, ಅಪ್ನಾ ದಳ, ನಿಶಾದ್ ಪಾರ್ಟಿ ಮತ್ತಿತರ ಪಕ್ಷಗಳು
ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ 50 ಸೀಟ್ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?
ಎನ್‌ಡಿಎ ಬಲ ಎಷ್ಟು?
ಈಗ ಬೆಂಗಳೂರಿನಲ್ಲಿ ಸಭೆ ಸೇರಿರುವ 26 ವಿಪಕ್ಷಗಳ ಬಲ ಲೋಕಸಭೆಯಲ್ಲಿ 124 ಇದೆ. ಇನ್ನು ಮಂಗಳವಾರ ಸಭೆ ಸೇರುವ ಎನ್‌ಡಿಎ ಅಂಗಪಕ್ಷಗಳ ಲೋಕಸಭಾ ಬಲ 317 ಇದೆ.
ವಿಪಕ್ಷ ಸಭೆ ವರನಿಲ್ಲದ ದಿಬ್ಬಣ ಇದ್ದಂತೆ: ನಡ್ಡಾ
ನಾಯಕ, ನೀತಿ, ನಿಯತ್ತು- ಈ ಮೂರೂ ವಿಪಕ್ಷಗಳಿಗೆ ಇಲ್ಲ. ಅವುಗಳದ್ದು ಸ್ವಾರ್ಥ ರಾಜಕಾರಣ. 10 ವರ್ಷ ಅಧಿಕಾರದಲ್ಲಿದ್ದಾಗ ಸೂಕ್ತ ಆಡಳಿತ ನಡೆಸದೇ ದೇಶ ಲೂಟಿ ಮಾಡಿದವು. ಈಗ ತಮ್ಮ 20 ಲಕ್ಷ ಕೋಟಿ ರು. ಹಗರಣ ಮುಚ್ಚಿಹಾಕಲು ಮುಚ್ಚಿ ಹಾಕುವ ಉದ್ದೇಶದಿಂದ ಮತ್ತೆ ಸೇರಿಕೊಂಡಿವೆ. ಬೆಂಗಳೂರಿನ ಸಭೆ ಕೇವಲ ತೋರಿಕೆಗೆ ಮಾತ್ರ. ಈ ಸಭೆ ವರನಿಲ್ಲದೇ ಮದುವೆ ದಿಬ್ಬಣ ಹೊರಟಂತಿದೆ. 2024ರಲ್ಲಿ ಮತ್ತೆ ಮೋದಿ ಪ್ರಧಾನಿ ಆಗುವುದು ನಿಶ್ಚಿತ.
- ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಇದನ್ನೂ ಓದಿ: ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ: ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್
ಎನ್‌ಡಿಎ ಮೈತ್ರಿ ಗೊತ್ತಿಲ್ಲ, ಸಭೆಗೆ ಕರೆದಿಲ್ಲ: ಎಚ್‌ಡಿಕೆ
ಬೆಂಗಳೂರು/ಚನ್ನಪಟ್ಟಣ: ಎನ್‌ಡಿಎ ಜತೆ ಮೈತ್ರಿ ಕುರಿತಂತೆ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಜತೆಗಿನ ಮೈತ್ರಿ ವಿಚಾರ ನನಗೆ ಗೊತ್ತಿಲ್ಲ. ಮಹಾಘಠಬಂಧನ್ ಆಗಲಿ ಅಥವಾ ಎನ್‌ಡಿಎನಿಂದ ಆಗಲಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಒಂದು ವೇಳೆ ಆಹ್ವಾನ ಬಂದರೆ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: 26 ಪ್ರತಿಪಕ್ಷಗಳಿಂದ ‘ಗೇಮ್ ಚೇಂಜರ್’ ಸಭೆ! ‘ಯುನೈಟೆಡ್ ವಿ ಸ್ಟ್ಯಾಂಡ್’ ಘೋಷವಾಕ್ಯದಡಿ ಸಮಾಲೋಚನೆ