ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ‘ಗೇಮ್ ಚೇಂಜರ್’ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ. ಸಭೆಯ ಮಹತ್ವದ ಘಟ್ಟ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸತತ ಚರ್ಚೆಗಳು ನಡೆಯಲಿವೆ.
ಬೆಂಗಳೂರು (ಜುಲೈ 18, 2023): 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯನ್ನು ಶತಾಯ ಗತಾಯ ಮಣಿಸಿ ಪುನಃ ಅಧಿಕಾರಕ್ಕೇರಬೇಕು ಎಂಬ ಉದ್ದೇಶ ಹೊಂದಿರುವ 26 ಪ್ರತಿಪಕ್ಷಗಳು ಬೆಂಗಳೂರಿನಲ್ಲಿ 2ನೇ ಸುತ್ತಿನ ಮಹತ್ವದ ಸಭೆ ಆರಂಭಿಸಿವೆ. ಚರ್ಚೆ ಸೋಮವಾರ ಉತ್ತಮ ರೀತಿಯಲ್ಲಿ ಆರಂಭಗೊಂಡಿದ್ದು, ‘ದೇಶಕ್ಕಾಗಿ ನಾವು ಒಂದಾಗಿದ್ದೇವೆ’ (ಯುನೈಟೆಡ್ ವಿ ಸ್ಟ್ಯಾಂಡ್ ಫಾರ್ ಇಂಡಿಯಾ) ಎಂದು ಸಾರಿವೆ ಹಾಗೂ ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ‘ಗೇಮ್ ಚೇಂಜರ್’ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ.
ಸಭೆಯ ಮಹತ್ವದ ಘಟ್ಟ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸತತ ಚರ್ಚೆಗಳು ನಡೆಯಲಿವೆ. ಬಳಿಕ ಎಲ್ಲಾ ನಾಯಕರೂ ಒಟ್ಟಾಗಿ ಪ್ರಮುಖ ನಿರ್ಣಯಗಳನ್ನು ಘೋಷಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಇಂದಿನ ಸಭೆಯಲ್ಲಿ ಏನು ಚರ್ಚೆ?:
ಈ ಮುನ್ನ ಜೂನ್ 23ಂದು ಬಿಹಾರದ ಪಟನಾದಲ್ಲಿ ಮೊದಲ ಸುತ್ತಿನ ಸಭೆ ನಡೆದಿತ್ತು. ಆಗ 367 ಕ್ಷೇತ್ರಗಳನ್ನು ಕೇಂದ್ರೀಕರಿಸಿ ಒಟ್ಟಾಗಿ ಹೋರಾಡುವ ಸಂಕಲ್ಪ ಮಾಡಲಾಗಿತ್ತು. ಆಗ ಮೈತ್ರಿಕೂಟಕ್ಕೆ ಹೊಸ ನಾಮಕರಣ, ಅಜೆಂಡಾ ಹಾಗೂ ಪ್ರಾದೇಶಿಕ ಮೈತ್ರಿಕೂಟದ ಬಗ್ಗೆ ಚರ್ಚಿಸಲು ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಹೀಗಾಗಿ ಈ 3 ಅಜೆಂಡಾ ಬಗ್ಗೆ ಬೆಂಗಳೂರಿನ ಸಭೆ ಚರ್ಚಿಸಲಿದೆ.
ಇದನ್ನು ಓದಿ: ರೈತರನ್ನು ನಾವು ಅರ್ಥ ಮಾಡಿಕೊಂಡ್ರೆ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್ ಗಾಂಧಿ
ಇದಲ್ಲದೆ, ಜುಲೈ 20ರಿಂದ ಶುರುವಾಗಲಿರುವ ಸಂಸತ್ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಮುಗಿಬೀಳುವ ಬಗ್ಗೆ ರಣತಂತ್ರ ಹೆಣೆಯಲಿದ್ದಾರೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ಎನ್‌ಡಿಎಯನ್ನು ಸೋಲಿಸಲು ತಂತ್ರಗಾರಿಕೆ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅರ್ಧ ಮುಗಿದಿದೆ- ಖರ್ಗೆ:
ಸೋಮವಾರ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಸಭೆ ಆರಂಭವಾಯಿತು. ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ 26 ಆಹ್ವಾನಿತ ವಿಪಕ್ಷಗಳ ಪೈಕಿ ಅನೇಕ ಘಟಾನುಘಟಿ ನಾಯಕರು ಭಾಗಿಯಾದರು. ಬಳಿಕ ಟ್ವೀಟ್ ಮಾಡಿರುವ ಹಾಗೂ ಈ ಬಾರಿಯ ಸಭೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸಭೆ ಚೆನ್ನಾಗಿ ಆರಂಭವಾಗಿದೆ. ಅರ್ಧ ಮುಗಿದಿದೆ. ಸಮಾನ ಮನಸ್ಕ ವಿರೋಧ ಪಕ್ಷಗಳು ಸಾಮಾಜಿಕ ನ್ಯಾಯ, ಅಂತರ್ಗತ ಅಭಿವೃದ್ಧಿ ಮತ್ತು ರಾಷ್ಟ್ರೀಯ ಕಲ್ಯಾಣದ ಕಾರ್ಯಸೂಚಿಯನ್ನು ಉತ್ತೇಜಿಸಲು ಒಟ್ಟಿಗೆ ಕೆಲಸ ಮಾಡುತ್ತವೆ’ ಎಂದಿದ್ದಾರೆ.
ಇದನ್ನೂ ಓದಿ: ದಿಲ್ಲಿ ಸುಗ್ರೀವಾಜ್ಞೆಗೆ ಬೆಂಬಲ ಇಲ್ಲ: ಕಾಂಗ್ರೆಸ್ ಘೋಷಣೆ; ವಿಪಕ್ಷ ಸಭೆ ಬೆನ್ನಲ್ಲೇ ಆಪ್-ಕಾಂಗ್ರೆಸ್ ಮುನಿಸು ಅಂತ್ಯ
ಅಲ್ಲದೆ, ‘ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ ಮತ್ತು ಲೂಟಿಯ ನಿರಂಕುಶ ಹಾಗೂ ಜನವಿರೋಧಿ ರಾಜಕಾರಣದಿಂದ ಭಾರತದ ಜನರನ್ನು ಮುಕ್ತಗೊಳಿಸಲು ನಾವು ಬಯಸುತ್ತೇವೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ತತ್ವಗಳಿಂದ ಆಡಳಿತ ನಡೆಸಲ್ಪಡುವ ಭಾರತವನ್ನು ನಾವು ಬಯಸುತ್ತೇವೆ. ದುರ್ಬಲ ವ್ಯಕ್ತಿಗೆ ಭರವಸೆ ಮತ್ತು ನಂಬಿಕೆಯನ್ನು ನೀಡುವ ಭಾರತವನ್ನು ನಾವು ಬಯಸುತ್ತೇವೆ. ಈ ಭಾರತಕ್ಕಾಗಿ ನಾವು ಒಟ್ಟಾಗಿ ನಿಲ್ಲುತ್ತೇವೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಮೈ ಅಕೇಲಾ ಕಾಫಿ ಹೂಂ ಸಾರೆ ಅಪೋಸಿಷನ್ ಕೇ ಲಿಯೆ’ ಎಂದು ಪ್ರತಿಪಕ್ಷಗಳನ್ನು ಏಕಾಂಗಿಯಾಗಿ ಸೋಲಿಸುವುದಾಗಿ ಹೇಳಿದ್ದವರು ಇದೀಗ ಎನ್‌ಡಿಎ ಮೈತ್ರಿಕೂಟಕ್ಕೆ ಜೀವ ತುಂಬುತ್ತಿದ್ದಾರೆ. ಇದರಿಂದ ನಮಗೆ ದೊಡ್ಡ ಯಶಸ್ಸು ಈಗಾಗಲೇ ಸಿಕ್ಕಂತಾಗಿದೆ. ನಮ್ಮ ಸಭೆ ದೇಶದ ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ: ಮೀಟಿಂಗ್‌ನಲ್ಲಿ ಈ 6 ವಿಚಾರಗಳ ಚರ್ಚೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಘಟಾನುಘಟಿಗಳು ಭಾಗಿ:
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ (ಕಾಂಗ್ರೆಸ್), ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ಮುಖಂಡ ಟಿ.ಆರ್. ಬಾಲು (ಡಿಎಂಕೆ), ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಜೆಡಿಯು), ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (ಆರ್‌ಜೆಡಿ), ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಂಸದರಾದ ಸಂಜಯ ಸಿಂಗ್, ರಾಘವ ಛಡ್ಡಾ (ಆಪ್), ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ), ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಸಂಸದ ಸಂಜಯ ರಾವುತ್ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ (ಶಿವಸೇನೆ ಉದ್ಧವ್ ಬಣ), ಡಿ. ರಾಜಾ (ಸಿಪಿಐ), ಜಯಂತ್ ಚೌಧರಿ (ಆರ್‌ಎಲ್‌ಡಿ), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಸೀತಾರಾಂ ಯೆಚೂರಿ (ಸಿಪಿಎಂ), ಮೆಹಬೂಬಾ ಮುಫ್ತಿ (ಪಿಡಿಪಿ), ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್) ಸೇರಿದಂತೆ ಮೊದಲಾದ ಘಟಾನುಘಟಿಗಳು ಸಭೆಯಲ್ಲಿ ಪಾಲ್ಗೊಂಡರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಕಾರಣಾಂತರದಿಂದ ಸಭೆಗೆ ಬರಲಿಲ್ಲ. ಮಂಗಳವಾರ ಅವರು ಭಾಗಿಯಾಗಲಿದ್ದಾರೆ ಎಂದು ಪಕ್ಷ ಪ್ರಕಟಿಸಿದೆ.
ಕರ್ನಾಟಕ ಕಾಂಗ್ರೆಸ್ ಆತಿಥ್ಯ:
ಪಟನಾದಲ್ಲಿ ನಿತೀಶ್ ಸರ್ಕಾರ ಮೊದಲ ಸಭೆಗೆ ಆತಿಥ್ಯ ವಹಿಸಿದ್ದರೆ ದಕ್ಷಿಣದಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡಿಸಿ ಹೊಸ ಸರ್ಕಾರ ರಚಿಸಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಸರ್ಕಾರ ಸಭೆಯ ಆತಿಥ್ಯ ವಹಿಸಿದೆ. ಸಭೆಗೆ ಬಂದವರನ್ನು ಹೋಟೆಲ್‌ನ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು. ಸಿದ್ದರಾಮಯ್ಯ ಸೋಮವಾರ ರಾತ್ರಿ ಔತಣಕೂಟ ನೀಡಿದರು.
ಇದನ್ನೂ ಓದಿ: ಮೋದಿ ಮಣಿಸಲು ಬೆಂಗ್ಳೂರಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಸಭೆ: 26 ಪಕ್ಷಗಳ ಮುಖಂಡರಿಗೆ ಆಹ್ವಾನ
ಅಜೆಂಡಾ ಏನು?
1. 367 ಲೋಕಸಭಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿ ಒಟ್ಟಾಗಿ ಹೋರಾಟ
2. 26 ಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ನಾಮಕರಣ ಮಾಡುವ ಬಗ್ಗೆ ಚರ್ಚೆ
3. ರಾಜ್ಯಮಟ್ಟದ ಮೈತ್ರಿ ಕುರಿತು ಪ್ರಾದೇಶಿಕ ದೋಸ್ತಿಯ ಕುರಿತು ಸಮಾಲೋಚನೆ
ಸಭೆಯಲ್ಲಿ ಭಾಗಿಯಾದ ಪ್ರಮುಖ ನಾಯಕರು
ಸೋನಿಯಾ, ರಾಹುಲ್, ಲಾಲು ಯಾದವ್, ಸಿಎಂಗಳಾದ ತಮಿಳು ನಾಡಿನ ಸ್ಟಾಲಿನ್, ಬಿಹಾರದ ನಿತೀಶ್, ಬಂಗಾಳದ ಮಮತಾ, ಪಂಜಾಬ್‌ನ ಭಗವಂತ ಮಾನ್, ಬಿಹಾರ ಡಿಸಿಎಂ ತೇಜಸ್ವಿ, ಮಾಜಿ ಸಿಎಂಗಳಾದ ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಮುಖಂಡರಾದ ಸೀತಾರಾಮ ಯೆಚೂರಿ, ಡಿ. ರಾಜಾ ಮತ್ತಿತರರು.
ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್, ಟಿಎಂಸಿ, ಸಿಪಿಎಂ