ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!

By Suvarna News  |  First Published Feb 15, 2020, 10:27 PM IST

ಕ್ರೀಡಾಪಟುಗಳು 30 ದಾಟಿದಂತೆ ನಿವೃತ್ತಿಗೆ ಸಜ್ಜಾಗುತ್ತಾರೆ. ಇದು ಸಹಜ. ಆದರೆ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಹಾಗಲ್ಲ. 46ನೇ ವಯಸ್ಸಿನಲ್ಲೂ ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ. ಟೆನಿಸ್ ಪದವೇ ಕೇಳದ ಸಮಯದಲ್ಲಿ ಜಗತನ್ನೇ ತನ್ನತ್ತ ತಿರುಗಿಸಿದ ಮಗಧೀರ ನಮ್ಮ ಪೇಸ್. ಲಿಯಾಂಡರ್ ಪೇಸ್ ತವರಿನ ಕೊನೆಯ ಟೂರ್ನಿ ಆಡಿದ್ದಾರೆ. ಈ ಸಂದರ್ಭದಲ್ಲಿ ಪೇಸ್ ಪಯಣ ಇಲ್ಲಿದೆ.


ರಮಾಕಾಂತ್ ಆರ್ಯನ್, ಸುವರ್ಣನ್ಯೂಸ್

ಆಟದ ಜಿದ್ದಿಗೆ, ಹಠಕ್ಕೆ ಬಿದ್ದರೆ ಎಂಥ ಘಟಾನುಘಟಿಯನ್ನೂ ಕೆಡವಿಕೊಳ್ಳುತ್ತಿದ್ದ ತಾಕತ್ತಿಗೆ, ದೇಶಕ್ಕೆ ಆಡುವಾಗ ಮೈಯಲ್ಲಿ ಸಿಡಿಲಂಥ ತಾಕತ್ತು ತುಂಬಿಕೊಳ್ಳುತ್ತಿದ್ದ ಪರಿಗೆ ಇಷ್ಟವಾದ ಹುಡುಗ ಅವನು. ಈಗ ಆ ಕೆಚ್ಚಿನ ಹುಡುಗನಿಗೆ 46 ತುಂಬಿದೆ. ಇದನ್ನ ಟೆನಿಸ್​ ಲೋಕಕ್ಕೆ ವಿದಾಯದ ವರ್ಷವೆಂದು ಅವನೇ ಭಾವುಕನಾಗಿ ಹೇಳಿದ್ದಾನೆ.

Latest Videos

30 ವರ್ಷಗಳ ಕಾಲ ಆಡಿದವನಿಗೆ, ಆಳಿದವನಿಗೆ, ಅಕ್ಷರದ ವಿದಾಯ ಹೇಳುವ ಕಾಲವೂ ಬಂದೇ ಬಿಟ್ಟಿತೇ ಎಂಬುದೊಂದು ಬೇಸರದೊಂದಿಗೆ ಅವನ ಬಗ್ಗೆ ಬರೆಯಲು ಕೂತೆ. ಅದಿನ್ನೂ 90ರ ದಶಕದ ಆರಂಭ. ಕಪಿಲ್ ದೇವ್ 1983 ವಿಶ್ವಕಪ್ ಕ್ರಿಕೆಟ್ ನಲ್ಲಿ ಗೆದ್ದ ಗುಂಗಿನಲ್ಲಿ ಇಡಿಯ ಭಾರತ ತೇಲುತ್ತಿತ್ತು. ಸಚಿನ್ ತೆಂಡುಲ್ಕರ್ ಎನ್ನುವ ಗುಂಗುರು ಕೂದಲಿನ ಮುದ್ದು ಹುಡುಗ ತುಂಬ ಹೆಸರು ಮಾಡುತ್ತಿದ್ದ. ಟೆನಿಸ್ ಇನ್ನೂ ಆ ಪರಿಯ ಹುಚ್ಚು ಹಿಡಿಸಿರಲಿಲ್ಲ. ಆಗ ಕೋಲ್ಕತ್ತದಿಂದ ಎದ್ದು ಬಂದಿದ್ದ ಡಸ್ಕಿ ಹುಡುಗ ...

ಇದನ್ನೂ ಓದಿ: ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

ಅದು 1990. ಪೇಪರ್ ಗಳಲ್ಲಿ ಹೆಡ್ ಲೈನ್ ಆಗುತ್ತಿದ್ದ. ಯುಎಸ್ ಓಪನ್ ಜೂನಿಯರ್ ಮತ್ತು ವಿಂಬಲ್ಡನ್ ಜೂನಿಯರ್ ಗೆದ್ದ ಹೆಮ್ಮೆಯ ಭಾರತೀಯ ಹುಡುಗ ಅಂತ...ಟೆನಿಸ್ ನಲ್ಲೂ ಇಡಿಯ ಭಾರತವನ್ನ ಒಂದು ಖುಷಿ ಆವರಿಸಿಕೊಳ್ಳುವಂತೆ ಮಾಡಿದವನ ಹೆಸರು ಲಿಯಾಂಡರ್ ಪೇಸ್..

ನಿಮಗೆ ಗೊತ್ತಿರಲಿ, ಲಿಯಾಂಡರ್ ಪೇಸ್‌ನ ಅಪ್ಪ ವೆಸೆ ಪೇಸ್ ಮತ್ತು ಅಮ್ಮ ಜೆನ್ನಿಫರ್ ಪೇಸ್ ಇಬ್ಬರೂ ಭಾರತಕ್ಕೆ ಆಡಿದವರೇ. ಆಡಿದ್ದು ಟೆನಿಸ್ ಅಲ್ಲ. ಅಪ್ಪ , 1972 ರ ಮ್ಯೂನಿಚ್ ಒಲಿಂಪಿಕ್ಸ್​ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಮಿಡ್ ಫೀಲ್ಡರ್. ಅಮ್ಮ, ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡದ ನಾಯಕಿ. ಪೇಸ್​  ರಕ್ತದಲ್ಲಿಯೇ ಕ್ರೀಡೆ ಅಂಟಿಕೊಂಡಿತ್ತು. ಆಯ್ಕೆ ಮಾಡಿಕೊಂಡಿದ್ದು ಟೆನಿಸ್​ ಅಷ್ಟೇ.

ಇದನ್ನೂ ಓದಿ: ದುಬಾರಿ ಕಾರಿಲ್ಲ, ಫೋನಿಲ್ಲ; ಕೋಟಿ ಆದಾಯದ ಮಾನೆ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾರೂ ಇಲ್ಲ!

ಹೀಗೆ ಯುಎಸ್ ಓಪನ್ ಮತ್ತು ವಿಂಬಲ್ಡನ್​ ನಲ್ಲಿ ವಿಜೃಂಭಿಸಿದ್ದ  ಪೇಸ್, ಭಾರತಕ್ಕೆ ಆಪದ್ಭಾಂಧವನಾಗಿದ್ದು ಯಾವಾಗ ಗೊತ್ತಾ? 1996 ಅಟ್ಲಾಂಟ ಒಲಿಂಪಿಕ್ಸ್​ನಲ್ಲಿ. ನಂಬಿ, ಹೇಳಿಕೊಳ್ಳಲಿಕ್ಕೆ ಭಾರತಕ್ಕೆ ಒಂದು ಪದಕವಿರಲಿಲ್ಲ. ಲಿಯಾಂಡರ್, ಕಟ್ಟಕಡೆಯ ಭರವಸೆಯಾಗಿ ಕಣದಲ್ಲಿದ್ದ. ನಂಬಿಕೆ ಸುಳ್ಳು ಮಾಡಲಿಲ್ಲ. ಪದಕ ಪಟ್ಟಿಯಲ್ಲಿ ಭಾರತದ ಮುಂದೆ ಕಂಚು ಎಂದು ಬರೆಸಿದ್ದ. ಆ ಮೇಲೆ ಅವನೇ ಇತಿಹಾಸ. 96ರ ಒಲಿಂಪಿಕ್ ಆದ ಮೇಲೆ ಇದೇ ಪೇಸ್ ಇನ್ನೊಮ್ಮೆ ಅಚ್ಚರಿ ಎನಿಸಿದ್ದ. ಅವನು ಹಾಗೇ ಅಚ್ಚರಿಗಳನ್ನ ಅಭಿಮಾನಿಗಳಿಗೆ, ಭಾರತಕ್ಕೆ ಕೊಡುತ್ತಲೇ ಬಂದವನು. ಟೆನಿಸ್ ಆಡುವುದಕ್ಕಾಗಿಯೇ ಹುಟ್ಟಿದವನು. 

ಇದನ್ನೂ ಓದಿ: ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !.

ಅದು 1998. ಅಮೆರಿಕದ ರೋಡ್ ಐಲೆಂಡ್‌ನಲ್ಲಿ ನಡೆದ 2,75,000 ಡಾಲರ್ ಬಹುಮಾನ ಮೊತ್ತದ ಟೂರ್ನಿ. ಸುಮ್ಮನೆ ನೋಡಿ ಬರೋಣ ಅಂತ ಹೋಗಿರ್ತಾನೆ. ಅಸಲಿಗೆ ಪೇಸ್ ಅಲ್ಲಿ ಶ್ರೇಯಾಂಕ ರಹಿತ ಆಟಗಾರ. ಎಂತಹ ಅದ್ಭುತ ಆಟವಾಡಿದ್ದ ಗೊತ್ತ. ಬಿಸಿರಕ್ತದ, ಚಿರತೆ ಚಲನೆಯ ಅವನ ಆಟಕ್ಕೆ ಪ್ರಶಸ್ತಿ ಅನಾಮತ್ತಾಗಿ ಬಂದು ಬಿದ್ದಿತ್ತು. ಅವನು ಕೊಟ್ಟ ಅಚ್ಚರಿ ಅಲ್ಲಿಗೆ ಮುಗಿಯುವುದಿಲ್ಲ.

ಅವನ ಜೀವನದಲ್ಲಿ ಇಂದಿಗೂ ಅದ್ಭುತ ಎಂದು ಅವನೇ ಕರೆದುಕೊಳ್ಳುವ ಗೆಲುವೊಂದಿದೆ. ಅದು ಟೆನಿಸ್ ಚಕ್ರವರ್ತಿಯನ್ನ ಕೆಡವಿಹಾಕಿ, ಗೆಲುವಿನ ಬಾವುಟ ನೆಟ್ಟಿದ್ದ ಗೆಲುವು.  ಅವನ ಹೆಸರು ಪೀಟ್ ಸಾಂಪ್ರಾಸ್ ಅಂತ. ಅವನ ಹೆಸರು ಕೇಳಿಯೇ ಸೋತುಸುಣ್ಣವಾಗಿದ್ದ ಹುಡುಗರಿದ್ದರು. ಟೆನಿಸ್ ಸಾಮ್ರಾಜ್ಯವನ್ನ ಅವನ ಹೆಸರಿಗೇ ಬರೆದುಕೊಟ್ಟು ಹೋದವರಿದ್ದರು. ವಿಶ್ವದಲ್ಲಿ ಆ ಕಾಲಕ್ಕೆ ಅವನನ್ನ ಮೀರಿಸಿದ್ದ ಆಟಗಾರರಿಲಿಲ್ಲ. ಪೇಸ್ ಅವನನ್ನ ಅದ್ಯಾವ ಪರಿ ಹೊಸಕಿ ಹಾಕಿದ್ದ ಗೊತ್ತಾ?

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ಅದು ಪೈಲಟ್ ಪೆನ್ ಇಂಟರ್​ ನ್ಯಾಷನಲ್ ಟೆನಿಸ್ ಚಾಂಪಿಯನ್​ಷಿಪ್​ನ ಮೂರನೇ ಸುತ್ತು. ಎದುರಿಗಿದ್ದವನು ಸಾಂಪ್ರಾಸ್, ಟೆನಿಸ್ ಲೋಕವನ್ನ ಆಳಲಿಕ್ಕೇ ಹುಟ್ಟಿದ್ದವನು. ಯಾರೋ ಹೊಸ ಹುಡುಗ ಅಂತೆ ಅಂತ ಆಡಲಿಳಿದಿದ್ದ. ಪೇಸ್​, 6-3, 6-4 ರ ನೇರ ಸೆಟ್​ ಗಳಲ್ಲಿ ಪೀಟ್​ ಸಾಂಪ್ರಾಸ್​ ಸದ್ದಡಗಿಸುತ್ತಾನೆ. ಟೆನಿಸ್​ ಕೋಟೆಯ ಮೇಲೆ ಬಾವುಟ ನೆಟ್ಟಂತ ಗೆಲುವು. ವಿಶ್ವ ಟೆನಿಸ್​ ಲೋಕ ಸ್ತಬ್ಧ. ಇಡಿಯ ಭಾರತ ಮೂಕವಿಸ್ಮಿತ. ಹಾಗೆ ಬೆಳೆದವನು ಲಿಯಾಂಡರ್ ಪೇಸ್.

ಅಷ್ಟುಹೊತ್ತಿಗೆ ಭಾರತ ಟೆನಿಸ್ ಲೋಕದಲ್ಲಿ ಒಂದು ಹೊಸ ತಲೆಮಾರು ಟೆನಿಸ್ ರಾಕೆಟ್ ಹಿಡಿಯೋಕೆ ಶುರು ಮಾಡಿತ್ತು. ಲಿಯಾಂಡರ್ ಪೇಸ್ ತನಗೇ ಗೊತ್ತಿಲ್ಲದಂತೆ ಗುರುವಾಗಿದ್ದ, ಅವನ ಗೆಲುವಂತ ಗೆಲುವು ಎಲ್ಲರ ಗುರಿಯಾಗಿತ್ತು. ಬೆಳೆಸುವುದು, ಬೆಳೆಯಬೇಕಿರುವುದು ಹಾಗೆ ಅಲ್ಲವಾ? ತಲೆಮಾರು ತಲೆದೂಗುವಂತೆ!

ಇದನ್ನೂ ಓದಿ: 'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ.

ಲಿಯಾಂಡರ್ ಪೇಸ್ ನೂರಕ್ಕೂ ಹೆಚ್ಚು ಬೇರೆ ಬೇರೆ ಜೊತೆಗಾರರೊಂದಿಗೆ ಆಡಿ, ಬೇರೆ ಬೇರೆ ಗ್ರಾಂಡ್ ಸ್ಲಾಂ ಗೆದ್ದಿದ್ದಾನೆ. ಆದರೆ ಮಹೇಶ್ ಭೂಪತಿಯೊಂದಿಗೆ ಅವನು ಆಡಿದಾಗ ಕೊಡುತ್ತಿದ್ದ ಮಜಾ ಇತ್ತಲ್ಲ. ಅದರ ಗತ್ತೇ ಬೇರೆ. ಎದೆಗೆ ಎದೆ ಗುದ್ದಿಕೊಳ್ಳುವ ಜಿದ್ದು ಇತ್ತಲ್ಲ. ಆ ಜಿದ್ದಾಜಿದ್ದಿನ ಗುದ್ದಿಗೆ ಎದುರಾಳಿಗಳು ಕಂಗಾಲಾಗಿಬಿಡಬೇಕು. ಅಂತಹ ಜಿದ್ದಿನ ಘರ್ಜನೆ ಅದು. ಇಬ್ಬರೂ ಒಟ್ಟಾಗಿ ಆಡಿದಾದ 303 ಬಾರಿ ಗೆದ್ದಿದ್ದಾರೆ. ಹುಡುಗಾಟ ಅಲ್ಲ. ಡೇವಿಸ್ ಕಪ್​ನಲ್ಲಿ 24 ನೇರ ಗೆಲುವುಗಳು. 1995 ರಿಂದ 2010ರ ವರೆಗೂ ಟೂರ್ನಿಯಲ್ಲಿ ಇವರಿಬ್ಬರೂ ಒಂದೇ ಒಂದು ಮ್ಯಾಚ್ ಸೋತಿಲ್ಲ, ಇದನ್ನ ನಾನೂ ನಂಬುತ್ತೇನೆ. ನೀವು ನಂಬಿ.

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಪೇಸ್,​ ಟೆನಿಸ್​ ಲೋಕದಲ್ಲಿ ಅಚ್ಚರಿಯ ಕಡೆಗೆ ಹೆಜ್ಜೆ ಇಟ್ಟವನು. ಅಂತ ಅಚ್ಚರಿ ಮಾರ್ಟಿನಾ ನವ್ರಾಟಿಲೋವ. ಆ ಕಾಲಕ್ಕೆ ನವ್ರಾಟಿಲೋವ ತುಂಬ ವಯಸ್ಸಾದಂತೆ ಕಾಣುತ್ತಿದ್ದರು. ಆದರೆ ಪೇಸ್​ ಅವರೊಂದಿಗೆ ಆಡಲು ಶುರು ಮಾಡಿದ್ದ. ಅಂಗಳದಲ್ಲಿ ಅವರ ಆಟ, ಅಮ್ಮ-ಮಗನಂತೆ. 2003ರ ಆಸ್ಟ್ರೇಲಿಯನ್​ ಓಪನ್​ ಮತ್ತು ವಿಂಬಲ್ಡನ್ ಎರಡೂ ಇವರ ಆಟಕ್ಕೆ ಸೋತಿದ್ದವು. ನವ್ರಾಟಿಲೋವ ಇವತ್ತಿಗೂ, ಪೇಸ್​, ನನ್ನ ಫೇವರಿಟ್​ ಎನ್ನುತ್ತಾರೆ. ಪೇಸ್​ ಮಾಡಿದ ಜಾದೂ ಅದು.

ಇದನ್ನೂ ಓದಿ: ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್

ಅವನ ಗೆಲುವು ಒಂದು ಅಧ್ಯಾಯವಾದರೆ, ಅವನು ಎದುರಿಸಿದ ಸವಾಲು ಇನ್ನೊಂದು ತೂಕದ್ದು.ಅದು ಅಮೆರಿಕದ ಅವಳಿ ಗೋಪುರದ ಮೇಲಾದ ರಕ್ಕಸ ಆಕ್ರಮಣ. 9/11. ಉಗ್ರಗಾಮಿಗಳ ಪೈಶಾಚಿಕ ಆನಂದಕ್ಕೆ 3000 ಹೆಣಗಳು ಉರುಳಿದ್ದವು. ಅದರಲ್ಲಿ 3001ನೆಯ ಹೆಣವಾಗಬೇಕಿದ್ದವನು ನಮ್ಮ ಲಿಯಾಂಡರ್ ಪೇಸ್. ಆಗಿದ್ದಿಷ್ಟೇ. ಆ ದಾಳಿಗೆ ಕೆಲವೇ ಗಂಟೆಗಳು ಮುನ್ನ  ಟ್ವಿನ್ ಟವರ್​ನ ಶಾಪಿಂಗ್​ ಮಾಲ್​ನಲ್ಲಿ ಖಾಕಿ ಪ್ಯಾಂಟ್​ ಕೊಂಡುಕೊಳ್ಳುತ್ತಿದ್ದ ಲಿಯಾಂಡರ್​. ಅಮೇಲೆ ಅದೇಕೋ ಅಲ್ಲಿಂದ ಕದಲಿದ್ದ. ಭಗವಂತ ಅವನ ಹೆಗಲು ಹಿಡಿದು ದೂರ ನಡೆಸಿದ್ದ. ಅವನು ಬದುಕಿದ್ದು ನಿಜವಾದ ವಂಡರ್​. ಅದೇಕೋ ಗೊತ್ತಿಲ್ಲ. ಖಾಕಿ ಪ್ಯಾಂಟ್​ ಕೊಂಡುಕೊಂಡ ಆ ರಶೀದಿಯನ್ನ ಇವತ್ತಿಗೂ ಪೇಸ್​ ಇಟ್ಟುಕೊಂಡಿದ್ದಾನೆ..

ಅದು 2003 ಆಗಸ್ಟ್​.  ಪೇಸ್​ ಗೆಲುವಿನ ನಾಗಾಲೋಟದಲ್ಲಿ ಮಿಂಚಿನ ಕುದುರೆಯೇರಿ ಹೊರಟಿದ್ದ ದಿನಗಳು. ಒಂದು ತಿಂಗಳ ಮುಂಚೆಯಷ್ಟೇ ಮಿಶ್ರ ಡಬಲ್ಸ್​ನಲ್ಲಿ ಮಾರ್ಟಿನಾ ನವ್ರಾಟಿಲೋವ ಜೊತೆ ಪ್ರಶಸ್ತಿ ನಗೆ ಬೀರಿದ್ದ. ಅದಾದ ಕೆಲವೇ ದಿನಗಳಲ್ಲಿ ಮೆದುಳಿನ ಅಷ್ಟೂ ರಕ್ತವನ್ನ ಹೀರಿದಂತ ಒಂದು ನೋವು ಪೇಸ್​ಗೆ ಸಿಡಿಲಂತೆ ಬಡಿದುಬಿಡುತ್ತದೆ. ನರಳಾಡಿಬಿಡುತ್ತಾನೆ. ಬ್ರೈನ್​ ಟ್ಯೂಮರ್​ನ ಅನುಮಾನ ಬಲವಾಗಿರುತ್ತದೆ. ಪುಣ್ಯಕ್ಕೆ ಪೇಸ್​ ಮಾತನಾಡುತ್ತಿರುತ್ತಾನೆ. ಅದು ಮಾರಣಾಂತಿಕ ಎಂದೇ ಎಲ್ಲರೂ ಭಾವಿಸಿದ್ದರು. ತಡವಾಗಿ ಗೊತ್ತಾಗಿದ್ದು ಅದು ಬ್ರೈನ್​ ಟ್ಯೂಮರ್​ ಅಲ್ಲ. ಮೆದುಳಿನ ಸೋಂಕು ಎಂದು. ಪೇಸ್​ ಅಲ್ಲೂ ಗೆಲುವಿನ ನಗೆ ಬೀರಿದ್ದ. ನರಕದ ಬಾಗಿಲು ಬಡಿದು ಬಂದಿದ್ದರೂ ಅದರ ಲವಲೇಶವೂ ಕ್ರೀಡಾ ಜೀವನಕ್ಕೆ ಅಪ್ಪಳಿಸದಂತೆ ನೋಡಿಕೊಂಡವನು ಪೇಸ್.

ಪೇಸ್​ ಆಮೇಲೆ ಚೇತರಿಸಿಕೊಂಡು ತುಂಬ ಚೆನ್ನಾಗಿ ಆಡಿದವನು. ಆದರೆ ಅದೇಕೋ ಅವನ ಜೊತೆ ಪಾರ್ಟನರ್​ಗಳು ತುಂಬಾ ದಿನ ಉಳಿಯುತ್ತಿರಲಿಲ್ಲ. ಅದು ಅವನ ಜೀವನಕ್ಕೂ ಅನ್ವಯಿಸುವಂತೆ. 2009ರ ವರೆಗೂ ರಿಯಾ ಪಿಳ್ಳೈಯೊಂದಿಗೆ ಲಿವಿಂಗ್​ ರಿಲೇಷನ್​ಷಿಪ್​ನಲ್ಲಿದ್ದವನು ಪೇಸ್​. ಅದೇಕೋ ದೂರಾಗಿದ್ದ. ಜೀವದ ಗೆಳೆಯ, ಗೆಳತಿಯಂತಿದ್ದವರು, ಮುಖ ನೋಡೋಕು ಆಗದ ಸ್ಥಿತಿಗೆ ಬಂದುಬಿಟ್ಟಿದ್ದರು. ಆ ಮೇಲೆ ಮಗಳ ವಿಚಾರ ಕೋರ್ಟ್​ ಮೆಟ್ಟಿಲು ಹತ್ತಿತ್ತು. ಮಗಳಿಗೂ ಬ್ರೈನ್​ ಟ್ಯೂಮರ್​ ಕಾಡಿತ್ತು. ಅದರ ಚಿಕಿತ್ಸಾ ವೆಚ್ಚವೂ ಕೋರ್ಟ್​ ಮೆಟ್ಟಿಲು ಹತ್ತುವ ಹಂತಕ್ಕೆ ರಿಯಾ ಮತ್ತು ಪೇಸ್​ ಕಿತ್ತಾಡಿಕೊಂಡಿದ್ದರು. ಅದು ಹೇಗೋ ಎಲ್ಲವನ್ನೂ ನಿಭಾಯಿಸಿದ್ದ ಪೇಸ್​. 

ಆಟಗಾರನ ವೈಯಕ್ತಿಕ ಜೀವನ ಹದಗೆಟ್ಟರೆ ಆಟವೂ ಹದಗೆಡುತ್ತದೆ. ಪೇಸ್​ ಇದಕ್ಕೆ ಹೊರತಾಗಿರಲಿಲ್ಲ. ಲಂಡನ್​ ಒಲಿಂಪಿಕ್ಸ್​ ಆದಮೇಲೆ ಪೇಸ್​ಗೆ ಜೋಡಿಯಾಗಿದ್ದ ಸಾನಿಯಾ ಮಿರ್ಜಾ ಅದೇಕೋ ಮಾತಾಡುವುದನ್ನೇ ಬಿಟ್ಟುಬಿಟ್ಟಳು. ಮೂಗುತಿ ಸುಂದರಿ!

ಆಮೇಲೆ ಪೇಸ್​ಗೆ ಜೊತೆಯಾದವಳು ಸ್ವಿಟ್ಝರ್​ಲೆಂಡ್​ನ ಟೆನಿಸ್​ ದೇವತೆ ಮಾರ್ಟಿನಾ ಹಿಂಗಿಸ್​. ಸ್ವರ್ಗ ಸೌಂದರ್ಯ ಟೆನಿಸ್​ ಅಂಗಳದಲ್ಲಿ ಅವಳ ರೂಪದಲ್ಲಿ ಓಡಾಡುತ್ತಿಷ್ಟೇ. ಅಷ್ಟು ಹೊತ್ತಿಗೆ  ಲೆಕ್ಕಕ್ಕಿಲ್ಲದಷ್ಟು ಗ್ರಾಂಡ್​ ಸ್ಲಾಂಗಳ ಒಡತಿಯಾಗಿದ್ದವಳು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದವಳು. ಪೇಸ್​ಗೆ ಜೊತೆಯಾಗಿದ್ದಳು. ಸಹೋದರಿಯಂತೆ. ಅದನ್ನ ಪೇಸ್​ ಯಾವತ್ತೂ ಮರೆಯಲಾರ. 2015, 2016 ರಲ್ಲಿ ಅದ್ಯಾವ ಪರಿ ಈ ಜೋಡಿ ಆಡಿತ್ತೆಂದರೆ , ಕೇವಲ 16 ತಿಂಗಳ ಅಂತರದಲ್ಲಿ ಎಲ್ಲಾ ಗ್ರಾಂಡ್ ಸ್ಲಾಂಗಳ ಕಪ್​ನ​ ಆ ತುದಿಗೆ ಲಿಯಾಂಡರ್​ ಈ ತುದಿಗೆ ಹಿಂಗಿಸ್​ ಚುಂಬಿಸಿದ್ದರು. 

ಜೀವನ ಗೆದ್ದವರ ಮುತ್ತದು. ಹಿಂಗಿಸ್,​ ಪೇಸ್​ ಜೀವನದ ಅತಿದೊಡ್ಡ ತಿರುವು. ಸಹೋದರನಂತೆ ಸಲಹಿದವಳು. ಅಮ್ಮನಂತೆ ತಿದ್ದಿ ಹೇಳಿದ್ದಳು. ಫಿಟ್​ನೆಸ್​ ಬಗ್ಗೆ ಚಂದದ ಪಾಠ ಮಾಡಿದ್ದಳು. ಟೆನಿಸ್​ ಲೋಕದ ಮ್ಯಾಜಿಕ್​ ಗಳನ್ನ ಲಿಯಾಂಡರ್​ಗೆ ಮಾತ್ರ ಕೇಳಿಸುವಂತೆ ಧಾರೆಯೆರೆದಿದ್ದಳು. ವೈಯಕ್ತಿಕ ಜೀವನದ ಏರುಪೇರುಗಳ ಬಗ್ಗೆ ಜೀವ ಗೆಳತಿಯಾಗಿ ಹೆಗಲ ಮೇಲೆ ಕೈಹಾಕಿ ಸಲಹೆ ಕೊಟ್ಟಿದ್ದಳು. ಪೇಸ್​ ಸುಧಾರಿಸಿದ್ದ. ಮೊನ್ನೆ ಮೊನ್ನೆಯಷ್ಟೇ ಮಾರ್ಟಿನಾ ತನಗೆ ಟೆನಿಸ್​ ಸಾಕೆಂದುಬಿಟ್ಟಳು. ಪೇಸ್​ ಅವಳೊಂದಿಗೆ ಗ್ರಾಂಡ್​ ಸ್ಲಾಂ ಗೆದ್ದಿದ್ದೇ ಕೊನೆ. ಮತ್ತೆ ಗೆದ್ದಿಲ್ಲ.

ಪೇಸ್ ಆಟಕ್ಕಿಳಿದನೆಂದರೆ ಅದೆಂಥದ್ದೋ ಮಿಂಚು ಹರಿದಂತೆ. ಅವನ ವಾಲಿ, ಬ್ಯಾಕ್​ ಹ್ಯಾಂಡ್​,  ಏಸ್​ಗಿಂತ ನೆಟ್ಸ್​ನ ಬಳಿ ಅವನ ಆಕ್ರಮಣ ಇರುತ್ತಲ್ಲಾ, ಅದು ಎದುರಿಗಿದ್ದವನಿಗೆ ಅರ್ಥವಾಗುವಷ್ಟರಲ್ಲೇ ಮ್ಯಾಚ್​ ಮುಗಿಸಿ​ರುತ್ತಾನೆ. ಸೋತೇ ಹೋಗುತ್ತೇನೆ ಎನ್ನುವಾಗ ಎದ್ದುಬರುತ್ತಾನಲ್ಲ. ಅವನಿಗೆ ಮಾತ್ರ ಸಾಧ್ಯವಿರುವ ತಾಕತ್ತದು. 

ಪೇಸ್​ ಎಂದರೆ ಬರಿಯ ಗೆಲುವುಗಳಲ್ಲ ಟೆನಿಸ್​ ಲೋಕದ ಇತಿಹಾಸದಲ್ಲಿ ಅವನು ವಿಶಿಷ್ಟ ಪುಟ. ಭಾರತದ ಪರ ಆರು ಒಲಿಂಪಿಕ್​​ಗಳಲ್ಲಿ ಆಡಿರುವ ದಿಟ್ಟ. 7ನೇ ಒಲಿಂಪಿಕ್​ಗೆ ರೆಡಿ ಇರುವ ಗಟ್ಟಿಗ. ಧ್ವಜದ ಕೆಳಗೆ ಅವನಾಡಬೇಕಾದರೆ ಆ ಗತ್ತೇ ಬೇರೆ. ಅವನ ಆಟ ನೋಡಿ ಕನಿಷ್ಠ 1000 ಜನ ಟೆನಿಸ್​ ರಾಕೆಟ್​ ಹಿಡಿಯಬೇಕು. ಅಂಥ ಕಲಿ. ಕಳೆದ 28 ವರ್ಷಗಳಿಂದ ಅವನ ಕೋಚ್​ ಬದಲಾಗಿಲ್ಲ. ಅಪ್ಪನೇ ವೈದ್ಯ, ಅಪ್ಪನೇ ಸ್ನೇಹಿತ. ಯಾರನ್ನೂ ಬಿಟ್ಟುಕೊಡದ ಉತ್ಕಟ ಪ್ರೀತಿ.

 ಪೇಸ್​ ಕಮರ್ಷಿಯಲ್​ ಹುಡುಗ ಅಲ್ಲ. ಮನಿ ಮೈಂಡೆಡ್​ ಕೂಡಾ ಅಲ್ಲ. ಜೊತೆಗೆ ಆಡಿದ ಆಟಗಾರ ಡೇವಿಸ್​ ಕಪ್ ನಲ್ಲಿ ಕೋಚ್​ ಆಗಿ ಬಂದು ಬೇಡದ ಕಿರುಕುಳ ಕೊಟ್ಟರೂ ಸಹಿಸಿದವನು. ಅದು ದೇಶ ಮತ್ತು ದೇಶಕ್ಕಾಗಿ ಮಾತ್ರ. ಅವನು ಇವತ್ತಿಗೂ ಟೆನಿಸ್​ ಆಡುತ್ತಿರುವುದು ಪ್ರಶಸ್ತಿಗಲ್ಲ. ಟೆನಿಸ್​ ಮೇಲಿನ ಉತ್ಕಟ ಪ್ರೀತಿಗೆ. 2020 ತನ್ನ ಪಾಲಿನ ಕಟ್ಟಕಡೆಯ ಟೆನಿಸ್​ ಋತು ಎಂದಿದ್ದಾನೆ. ಈ ಋತು, ವಸಂತನಾಗಿ ಅವನನ್ನ ಬೀಳ್ಕೊಡಲಿ. ಪೇಸ್​ ಎಂದರೆ ಬರೀ ಟೆನಿಸ್​ ಅಲ್ಲ. ಅದೊಂದು ತಲೆಮಾರಿನ ತುಂಬು ಸ್ಫೂರ್ತಿ. ಮೊನ್ನೆ ಬೆಂಗಳೂರಿನಲ್ಲಿ ಅವನಾಡಿದ, ಗೆದ್ದ ಮ್ಯಾಚ್​ ನೋಡಿದೆ ಏಕೋ ಎಲ್ಲ ನೆನಪಾಯಿತು.

click me!