ನವದೆಹಲಿಯಲ್ಲಿಂದು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಭಾರತದ 30 ಕುಸ್ತಿ ಪಟುಗಳು ಪಾಲ್ಗೊಳ್ಳುತ್ತಿದ್ದು, ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ನವದೆಹಲಿ(ಫೆ.18): ಏಷ್ಯಾ ಕುಸ್ತಿ ಚಾಂಪಿಯನ್‌ಶಿಪ್‌ಗೆ ಮಂಗಳವಾರ ಇಲ್ಲಿ ಕೆ.ಡಿ.ಜಾಧವ್ ಕುಸ್ತಿ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದ್ದು, 6 ದಿನಗಳ ಕಾಲ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ಭಾರತ 30 ಕುಸ್ತಿಪಟುಗಳನ್ನು ಕಣಕ್ಕಿಳಿಸುತ್ತಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದೆ. 2019ರಲ್ಲಿ ಚೀನಾದ ಕ್ಸಿಯಾನ್‌ನಲ್ಲಿ ನಡೆದ ಕೂಟದಲ್ಲಿ ಭಾರತ 16 ಪದಕಗಳನ್ನು ಗೆದ್ದುಕೊಂಡಿತ್ತು.
2020ರ ಒಲಿಂಪಿಕ್ಸ್‌ಗೆ ಕುಸ್ತಿಪಟು ಸುಶೀಲ್ ಅನುಮಾನ!
ಕಳೆದ ಆವೃತ್ತಿಯಲ್ಲಿ ದೀಪಕ್ ಪೂನಿಯಾ (65 ಕೆ.ಜಿ) ಭಾರತ ಪರ ಏಕೈಕ ಚಿನ್ನದ ಪದಕ ಜಯಿಸಿದ್ದರು. ಈ ಬಾರಿ ತಾರಾ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಾಟ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಉಳಿದಂತೆ ದೀಪಕ್ ಪೂನಿಯಾ, ರವಿ ದಹಿಯಾ, ಸಾಕ್ಷಿ ಮಲಿಕ್ ಕಣದಲ್ಲಿರುವ ಭಾರತದ ಪ್ರಮುಖ ಕುಸ್ತಿಪಟುಗಳೆನಿಸಿದ್ದಾರೆ.
ರೋಮ್ ರ‍್ಯಾಂಕಿಂಗ್ ಕುಸ್ತಿ ಸೀರಿಸ್: ಭಾರತದ ವಿನೇಶ್ ಫೋಗಟ್‌ಗೆ ಚಿನ್ನ!
ಫೆ.18ರಿಂದ 23ರ ವರೆಗೂ ಚಾಂಪಿಯನ್‌ಶಿಪ್ ನಡೆಯಲಿದೆ. ಮೊದಲೆರಡು ದಿನ ಗ್ರೀಕೋ ರೋಮನ್ ವಿಭಾಗದ ಸ್ಪರ್ಧೆಗಳು ನಡೆದರೆ, ನಂತರದ 2 ದಿನ ಮಹಿಳಾ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಪುರುಷರ ಫ್ರೀ ಸ್ಟೈಲ್ ಸ್ಪರ್ಧೆ ಕೊನೆ 2 ದಿನಗಳ ಕಾಲ ನಡೆಯಲಿದೆ.
ಪಾಕ್ ಕುಸ್ತಿಪಟುಗಳಿಗೆ ವೀಸಾ: ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕುಸ್ತಿಪಟುಗಳ ಪಾಲ್ಗೊಳ್ಳುವಿಕೆ ಅನುಮಾನವೆನಿಸಿತ್ತು. ಆದರೆ ಪಾಕಿಸ್ತಾನದ ನಾಲ್ವರು ಕುಸ್ತಿಪಟುಗಳು ಹಾಗೂ ಇಬ್ಬರು ಅಧಿಕಾರಿಗಳಿಗೆ ಭಾರತ ಸರ್ಕಾರ ವೀಸಾ ಮಂಜೂರು ಮಾಡಿದ್ದು, ಸ್ಪರ್ಧಿಗಳು ಹಾಗೂ ಅಧಿಕಾರಿಗಳು ನವದೆಹಲಿಗೆ ಆಗಮಿಸಿದ್ದಾರೆ.
ಕೊರೋನಾ ಭೀತಿ: ಚೀನಾ ಕುಸ್ತಿಪಟುಗಳಿಗಿಲ್ಲ ವೀಸಾ!
ಕೊರೋನಾ ವೈರಸ್ ವಿಶ್ವದೆಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಕುಸ್ತಿಪಟುಗಳು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಭಾರತ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಚೀನಾದ 40 ಸ್ಪರ್ಧಿಗಳಿಗೆ ವೀಸಾ ನೀಡಲು ಸರ್ಕಾರ ನಿರಾಕರಿಸಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.