ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್‌ಗೆ ಬೆಂಗಳೂರಿನಲ್ಲಿ ಸ್ಮರಣೀಯ ಬೀಳ್ಕೊಡುಗೆ ಸಿಕ್ಕಿದೆ. ಈ ವೇಳೆ ಪೇಸ್ ಕೆಲಕಾಲ ಭಾವುಕರಾದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಬೆಂಗಳೂರು(ಫೆ.17): ಭಾರತದಲ್ಲಿ ಕ್ರೀಡೆ ಅಭಿವೃದ್ಧಿ ಕಾಣಲು ಉದಯೋನ್ಮುಖ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕು. ಆಗ ಮಾತ್ರ ದೇಶದಲ್ಲಿ ಕ್ರೀಡೆ ಉನ್ನತ ಮಟ್ಟಕ್ಕೇರಲು ಸಾಧ್ಯವಾಗಲಿದೆ ಎಂದು ಭಾರತ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಹೇಳಿದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ)ಯಲ್ಲಿ ಭಾನುವಾರ ಬೆಂಗಳೂರು ಓಪನ್ ಟೂರ್ನಿಯ ಆಯೋಜಕರು ಪೇಸ್‌ರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಪೇಸ್, ‘ಒನ್ ಲಾಸ್ಟ್ ರೋರ್, ನಿಜಕ್ಕೂ ಸ್ಮರಣೀಯವಾಗಿಸಿದ್ದೀರಿ. ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ. ಬೆಂಗಳೂರು ಓಪನ್ ಟೆನಿಸ್ ಟೂರ್ನಿಯನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ. ತವರಲ್ಲಿ ನಾನಾಡಿದ ಕೊನೆ ಟೂರ್ನಿ ವೇಳೆ ಅಭಿಮಾನಿಗಳು ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದರು.
ವಿದಾಯದಲ್ಲೂ ಘರ್ಜಿಸಿದ ಲಿಯಾಂಡರ್ ಪೇಸ್; 30 ವರ್ಷ ಮಿನುಗಿತು ಭಾರತೀಯ ಟೆನಿಸ್
ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕದ ತಾರಾ ಕ್ರೀಡಾಪಟುಗಳಾದ ಮಹಿಳಾ ಈಜು ಪಟು ನಿಶಾ ಮಿಲ್ಲೆಟ್ ಮತ್ತು ರೇಷಾ, ಮಾಜಿ ಅಥ್ಲೀಟ್‌ಗಳಾದ ಪ್ರಮೀಳಾ ಅಯ್ಯಪ್ಪ, ಅಶ್ವಿನಿ ನಾಚಪ್ಪ, ರೀತ್ ಅಬ್ರಾಹಂ, ಮಾಜಿ ಹಾಕಿ ಆಟಗಾರರಾದ ರಘುನಾಥ್ ವಿ.ಆರ್., ಅರ್ಜುನ್ ಹಾಲಪ್ಪ, ಜೂಡ್ ಫೆಲಿಕ್ಸ್ ಮತ್ತು ಡೇವಿಸ್ ಕಪ್ ಟೆನಿಸಿಗ ಪ್ರಹ್ಲಾದ್ ಶ್ರೀನಾಥ್ ಹಾಜರಿದ್ದರು. ‘ಈ ಎಲ್ಲಾ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಯುವ ಕ್ರೀಡಾಪಟುಗಳು ಕ್ರೀಡೆಯನ್ನು ವೃತ್ತಿಯಾಗಿಸಿಕೊಳ್ಳಬೇಕು. ಇದು ಹವ್ಯಾಸ ಆಗಬಾರದು, ಆಗ ಮಾತ್ರ ಕ್ರೀಡೆಯಲ್ಲಿ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಾಗಲಿದೆ. ಯುವ ಕ್ರೀಡಾಪಟುಗಳು ಮಾನಸಿಕವಾಗಿ ಸದೃಢರಾಗಿರಬೇಕು. ಆರಂಭದಲ್ಲೇ ಉತ್ತಮ ತರಬೇತಿ ಪಡೆದು ಅಂ.ರಾ. ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿಯುವಂತಾಗಬೇಕು’ ಎಂದು ಪೇಸ್ ಹೇಳಿದರು.
ತವರಲ್ಲಿ ಪೇಸ್‌ಗೆ ಸೋಲಿನ ವಿದಾಯ; ಭಾವುಕರಾದ ದಿಗ್ಗಜ!
ಯುವರಿಗೆ ತರಬೇತಿ ನೀಡಲು ರೂಪುರೇಷೆ
ನಿವೃತ್ತಿ ಬಳಿಕ ಕೋಚಿಂಗ್‌ನತ್ತ ಗಮನ ಹರಿಸುವುದಾಗಿ ಪೇಸ್ ಹೇಳಿದರು. ಮಾಜಿ ಸಚಿವ, ಬೆಂಗಳೂರು ಓಪನ್ ಆಯೋಜನ ಸಮಿತಿ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹಾಗೂ ಟೆನಿಸ್ ಸಂಸ್ಥೆಯ ಇನ್ನಿತರ ಅಧಿಕಾರಿಗಳ ಜತೆ ತಾವು 3 ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದು, ಯುವಕರಿಗೆ ತರಬೇತಿ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪೇಸ್ ತಿಳಿಸಿದರು.
ಲಿಯಾಂಡರ್ ಎನ್ನುವ ವಂಡರ್ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!
ಡಕ್ವರ್ತ್ ಚಾಂಪಿಯನ್
3ನೇ ಆವೃತ್ತಿಯ ಎಟಿಪಿ ಚಾಲೆಂಜರ್ ಟೂರ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಪ್ರೇಲಿಯಾದ ಜೇಮ್ಸ್ ಡಕ್ವರ್ತ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಳೆದ 2 ಆವೃತ್ತಿಯಲ್ಲಿ ಕ್ರಮವಾಗಿ ಭಾರತದ ಸುಮಿತ್ ನಗಾಲ್ ಹಾಗೂ ಎಡಗೈ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಮೊದಲ ಬಾರಿಗೆ ವಿದೇಶಿ ಆಟಗಾರನೊಬ್ಬ ಬೆಂಗಳೂರು ಓಪನ್ ಗೆದ್ದಿದ್ದಾರೆ.
ಭಾನುವಾರ ನಡೆದ ಸಿಂಗಲ್ಸ್ ಫೈನಲ್‌ನಲ್ಲಿ 4ನೇ ಶ್ರೇಯಾಂಕಿತ ಆಸ್ಪ್ರೇಲಿಯಾದ ಜೇಮ್ಸ್ ಡಕ್ವರ್ತ್, ಶ್ರೇಯಾಂಕ ರಹಿತ ಆಟಗಾರ ಫ್ರಾನ್ಸ್‌ನ ಬೆನ್ಜಮಿನ್ ಬೊನ್ಜಿ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
#NewsIn100Seconds: ಪ್ರಮುಖ ಸುದ್ದಿಗಳು