ಶೀಘ್ರದಲ್ಲೇ ವಾಯುಪಡೆಗೆ ಹೊಸ ಮುಖ್ಯಸ್ಥರ ನೇಮಕ| ಇದೇ ಸೆ.30ರಂದು ನಿವೃತ್ತಿ ಹೊಂದಲಿರುವ ವಾಯಪಡೆ ಮುಖ್ಯಸ್ಥ ಬಿಎಸ್ ಧನೋವಾ| ನೂತನ ವಾಯುಪಡೆ ಮುಖ್ಯಸ್ಥರಾಗಿ RKS ಬದೌರಿಯಾ ನೇಮಕ| ಬದೌರಿಯಾ ನೇಮಕ ಆದೇಶ ಪ್ರಕಟಿಸಿದ ರಕ್ಷಣಾ ಇಲಾಖೆ| 4,250 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿರುವ ಬದೌರಿಯಾ| ಸ್ಟಾಫ್ ಕಮಿಟಿ ಮುಖ್ಯಸ್ಥರಾಗಿ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೇಮಕ|
ನವದೆಹಲಿ(ಸೆ.19): ವಾಯುಪಡೆ ಉಪ ಮುಖ್ಯಸ್ಥ ಏರ್ ಮಾರ್ಷಲ್ RKS ಬದೌರಿಯಾ ಅವರನ್ನು ಮುಂದಿನ ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ರಕ್ಷಣಾ ಇಲಾಖೆ, ಇದೇ ಸೆ.30ರಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ನಿವೃತ್ತಿ ಹೊಂದಲಿದ್ದು RKS ಬದೌರಿಯಾ ವಾಯುಪಡೆಯ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿಸಿದೆ.
1980ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಬದೌರಿಯಾ, ಸ್ವಾರ್ಡ್ ಆಫ್ ಹಾನರ್ ಪ್ರಶಸ್ತಿಗೆ ಭಾಜನಾರಾದ ವಾಯಪಡೆ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
RKS ಬದೌರಿಯಾ 26 ವಿವಿಧ ಪ್ರಕಾರದ ಯುದ್ಧ ವಿಮಾನ, ಸರಕು ಸಾಗಾಣಿಕೆ ವಿಮಾನ ಸೇರಿ ಒಟ್ಟು 4,250 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.
ಇನ್ನು ಬಿಎಸ್ ಧನೋವಾ ನಿವೃತ್ತಿ ಬಳಿಕ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇವಾ ಹಿರಿತನದ ಆಧಾರದ ಮೇಲೆ ಸ್ಟಾಫ್ ಕಮಿಟಿ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ.