ಉಪ ಕುಲಪತಿಗೆ ಘೇರಾವ್ ಹಾಕಿ ಜೈಲಿಗೆ ಹೋಗಿದ್ದ ನೊಬೆಲ್ ಪುರಸ್ಕೃತ!

By Web DeskFirst Published Oct 15, 2019, 6:34 PM IST
Highlights

ಉಪ ಕುಲಪತಿ ಘೇರಾವ್ ಹಾಕಿ ಜೈಲಿಗೆ ಹೋಗಿದ್ದ ನೊಬೆಲ್ ಪುರಸ್ಕೃತ| ವಿದ್ಯಾರ್ಥಿ ದಿನಗಳನ್ನು ನೆನೆದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ| 1983ರಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದ ಬ್ಯಾನರ್ಜಿ| 10 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ದಿನ ಕಳೆದಿದ್ದ ಅಭಿಜಿತ್| ಮೂರು ವರ್ಷಗಳ ಹಿಂದೆ ಹಿಂದೂಸ್ಥಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ವಿಷಯ ತಿಳಿಸಿದ್ದ ಬ್ಯಾನರ್ಜಿ| ಪೊಲೀಸರಿಂದ ದೈಹಿಕ ಹಿಂಸೆ ಅನುಭವಿಸಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ|

ನವದೆಹಲಿ(ಅ.15): 2019ರ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗಿರುವ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಹಿಂದೊಮ್ಮೆ ತಿಹಾರ್ ಜೈಲಿನಲ್ಲಿ ದಿನ ಕಳೆದಿದ್ದರು ಎಂದರೆ ನೀವು ನಂಬಲೇಬೇಕು.

ಹೌದು, 1983ರಲ್ಲಿ ಜೆನ್'ಯು ವಿದ್ಯಾರ್ಥಿಯಾಗಿದ್ದ ಅಭಿಜಿತ್ ಬ್ಯಾನರ್ಜಿ, ಪ್ರತಿಭಟನೆ ಸಂದರ್ಭದಲ್ಲಿ ಅಂದಿನ ಉಪ ಕುಲಪತಿಗಳಿಗೆ ಘೇರಾವ್ ಹಾಕಿ ತಿಹಾರ್ ಜೈಲು ಸೇರಿದ್ದರು.

ಸುಮಾರು ಮೂರು ವರ್ಷಗಳ ಹಿಂದೆ ಹಿಂದೂಸ್ಥಾನ್ ಟೈಮ್ಸ್‌ಗೆ ನೀಡಿದ ಸಂದರ್ಶನಲ್ಲಿ ಈ ವಿಷಯ ತಿಳಿಸಿದ್ದ ಅಭಿಜಿತ್ ಬ್ಯಾನರ್ಜಿ, ಉಪ ಕುಲಪಪತಿಗಳಿಗೆ ಘೇರಾವ್ ಹಾಕಿದ ಪರಿಣಾಮ ತಮ್ಮನ್ನು 10 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಬಂಧಿಸಿ ಹಿಂಸಿಸಲಾಗಿತ್ತು ಎಂದು ಹೇಳಿದ್ದರು.

ಉಪ ಕುಲಪತಿಗಳಿಗೆ ಘೇರಾವ್ ಹಾಕಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಧಾವಿಸಿದ ಪೊಲೀಸರು, ಅಭಿಜಿತ್ ಬ್ಯಾನರ್ಜಿ ಹಾಗೂ ಅವರ ಸ್ನೇಹಿತರನ್ನು ಬಂಧಿಸಿದ್ದರು. ತಿಹಾರ್ ಜೈಲಿಗೆ ಕೊಂಡೊಯ್ದ ಪೊಲಿಸರು, ತಮಗೆ ಹಾಗೂ ತಮ್ಮ ಸಂಗಾತಿಗಳಿಗೆ 10 ದಿನಗಳ ಕಾಲ ದೈಹಿಕ ಹಿಂಸೆ ನೀಡಿದ್ದರು ಎಂದು ಬ್ಯಾನರ್ಜಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ಪ್ರಕರಣ ವಾಪಸ್ ಪಡೆದ ಬಳಿಕ ಅಭಿಜಿತ್ ಬ್ಯಾನರ್ಜಿ 10 ದಿನಗಳ ನರಕ ಯಾತನೆ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು. 1984ರಲ್ಲಿ ಅಭಿಜಿತ್ ತಮ್ಮ ಶಿಕ್ಷಣ ಮುಗಿಸಿ ಜೆಎನ್'ಯು ತೊರೆದಿದ್ದರು. ಪ್ರಸಕ್ತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಜಿತ್ ಅವರ ಜ್ಯೂನಿಯರ್ ಎಂಬುದು ಮತ್ತೊಂದು ವಿಶೇಷ.

click me!