ರಂಗೇರಿತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರ| ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಆಡಳಿತಾರೂಢ ಮೈತ್ರಿಕೂಟ| ಬಿಜೆಪಿ-ಶಿವಸೇನೆಗೆ ತಿರುಗೇಟು ನೀಡಲು ಸಜ್ಜಾದ ಪ್ರತಿಪಕ್ಷಗಳು| ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅಬ್ಬರದ ಪ್ರಚಾರ| ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಡುವದಿಲ್ಲ ಎಂದ ಒವೈಸಿ| ಬಿಜೆಪಿ-ಶಿವಸೇನೆಯಿಂದ ಜಾತ್ಯಾತೀತ ಸ್ವರೂಪದ ಮೇಲೆ ದಾಳಿ ಎಂದು ಆರೋಪಿಸಿದ ಸಂಸದ| ಕೊನೆಯ ಉಸಿರಿರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದ ಒವೈಸಿ| ರಾಷ್ಟ್ರಧ್ವಜದಲ್ಲೂ ಹಸಿರು ಬಣ್ಣ ಇರುವ ಸತ್ಯ ಶಿವಸೇನೆಗೆ ಗೊತ್ತಿಲ್ಲ ಎಂದು ಕಿಚಾಯಿಸಿದ ಒವೈಸಿ|
ಕಲ್ಯಾಣ್(ಅ.15): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿಯೇ ಇದೆ. ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಆಡಳಿತಾರೂಢ ಮೈತ್ರಿಕೂಟಕ್ಕೆ ಶಾಕ್ ಕೊಡಲು ಪ್ರತಿಪಕ್ಷಗಳೂ ಸಜ್ಜಾಗಿವೆ.
ಅದರಂತೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಒವೈಸಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಬಿಜೆಪಿ ಹಾಗೂ ಶಿವಸೇನೆ ಹುನ್ನಾರವನ್ನು ವಿಫಲಗೊಳಿಸುವುದಾಗಿ ಗುಡುಗಿದ್ದಾರೆ.
ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಇಲ್ಲ ಸರ್ವ ಧರ್ಮಗಳೂ ಸಮಾನ ಸ್ಥಾನ ಪಡೆದಿವೆ ಎಂದಿರುವ ಒವೈಸಿ, ಈ ಜಾತ್ಯಾತೀತ ಸ್ವರೂಪದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿ-ಶಿವಸೇನೆ ಮೈತ್ರಿಕೂಟವನ್ನು ಸೋಲಿಸುವಂತೆ ಜನತೆಗೆ ಕರೆ ನೀಡಿದರು.
ವೈವಿಧ್ಯತೆಯಿಂದ ಕೂಡಿರುವ ಭಾರತವನ್ನು ಏಕ ಸಂಸ್ಕೃತಿಯ ಗೂಡನ್ನಾಗಿ ಪರಿವರ್ತಿಸುವ ಬಿಜೆಪಿ-ಶಿವಸೇನೆ ಪ್ರಯತ್ನ ಎಂದಿಗೂ ಫಲಿಸದು ಎಂದಿರುವ ಒವೈಸಿ, ತಮ್ಮ ಕೊನೆಯ ಉಸಿರಿರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದರು.
ಶಿವಸೇನೆಗೆ ಹಸಿರು ಬಣ್ಣ ಕಂಡರೆ ಆಗುವುದಿಲ್ಲ. ಹಸಿರು ಬಣ್ಣ ಅಲ್ಪಸಂಖ್ಯಾತರದ್ದು ಎಂಬ ಭಾವನೆ ಅದರಲ್ಲಿದೆ. ಆದರೆ ಹಸಿರುವ ಬಣ್ಣ ಭಾರತದ ರಾಷ್ಟ್ರಧ್ವಜದಲ್ಲೂ ಇರುವ ಸತ್ಯ ಶಿವಸೇನೆಗೆ ಗೊತ್ತಿಲ್ಲ ಎಂದು ಒವೈಸಿ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.