
ಸಮೀಪವೇ ಶೌಚಾಲಯಗಳಿದ್ದರೂ ಜನ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದನ್ನು ಬಿಡುವುದಿಲ್ಲ, 5 -10 ರೂಪಾಯಿ ಉಳಿಸುವುದಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಗಲೀಜು ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ದಂಡ ಇದ್ದರೂ ಕೂಡ ಈ ಕಾನೂನಿನ ಕೈಗೆ ಯಾರೂ ಸಿಗೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದ ವೀಡಿಯೋವೊಂದು ವೈರಲ್ ಆಗಿದೆ. ಮತ್ತೊಂದು ಕಡೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಯ ವೀಡಿಯೋ ವೈರಲ್ ಆದ ನಂತರ ಯುವಕ ಸಾವಿಗೆ ಶರಣಾದಂತಹ ಘಟನೆ ನಡೆದಿದೆ.
ಹೌದು ಒಂದು ಪ್ರಕರಣದಲ್ಲಿ ದೆಹಲಿಯ ಮೆಟ್ರೋ ಸ್ಟೇಷನ್ ಬಳಿ ಯುವಕನೋರ್ವ ಮೂತ್ರ ವಿಸರ್ಜನೆ ಮಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ. ದೆಹಲಿ ಮೆಟ್ರೋ ನಿಲ್ದಾಣದ ಮುಂಭಾಗ ಮೂತ್ರ ಮಾಡುತ್ತಿದ್ದವನನ್ನು ಜನ ವೀಡಿಯೋ ಮಾಡಿದ್ದಲ್ಲದೇ ಚಪ್ಪಾಳೆ ತಟ್ಟಿ ಕರೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ಸೀದಾ ಹೋಗಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ನಾವು ಮೂತ್ರ ವಿಸರ್ಜನೆಯನ್ನು ಹೀಗೆ ಮಾಡುವ ಮೂಲಕ ತಡೆಯಬೇಕು ಎಂದು ಹೇಳುತ್ತಾ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ದೆಹಲಿಯ ರೆಡ್‌ಪೋರ್ಟ್ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ವೀಡಿಯೋ ವೈರಲ್ ಬಳಿಕ ಯುವಕ ಸಾವು
ಆದರೆ ಮಹಾರಾಷ್ಟ್ರದಲ್ಲಿ ಯುವಕನೋರ್ವ ತಾನು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುತ್ತಿರುವ ವೀಡಿಯೋ ವೈರಲ್ ಆದ ನಂತರ ಸಾವಿಗೆ ಶರಣಾದಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಧೋಕ್ಮಲ್ ತಾಂಡಾದ 27 ವರ್ಷದ ಯುವಕ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣಾಗಿದ್ದಾನೆ. ಮೃತ ಯುವಕನನ್ನು ಮಹೇಶ್ ಅಧೆ ಎಂದು ಗುರುತಿಸಲಾಗಿದೆ. ಛತ್ರಪತಿ ಸಂಭಾಜಿನಗರದ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಸಂಭಾಜಿನಗರ ಎಂದು ಬರೆದಿರುವ ಫಲಕದ ಅಡಿಯಲ್ಲಿ ಮಹೇಶ್ ಅಧೆ ಮತ್ತು ಅವನ ಸ್ನೇಹಿತ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅಕ್ಟೋಬರ್ 30ರಂದು ಈ ವೀಡಿಯೋ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕ್ಷಮೆ ಕೇಳಿದರು ಬಿಡದೇ ಟ್ರೋಲ್: ನೊಂದು ಸಾವಿಗೆ ಶರಣಾದ ಯುವಕ
ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಕಾಮೆಂಟ್‌ಗಳಲ್ಲಿ ನಿಂದಿಸಿದ್ದರು. ಇದಾದ ನಂತರ ಮಹೇಶ್ ಅದೇ ಹಾಗೂ ಸ್ನೇಹಿತ ಕ್ಷಮೆಯಾಚಿಸುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಆದರೆ ಟ್ರೋಲಿಂಗ್ ಮಾತ್ರ ನಿಂತಿರಲಿಲ್ಲ. ಕ್ಷಮೆ ಯಾಚಿಸಿ ಟ್ರೋಲಿಂಗ್ ನಿಲ್ಲಿಸುವಂತೆ ಕೇಳಿದರು ವಿವಿಧ ಜಾಲತಾಣಗಳಲ್ಲಿ ತಮ್ಮ ವೀಡಿಯೋ ವೈರಲ್ ಆಗುತ್ತಿದ್ದಿದ್ದರಿಂದ ತೀವ್ರ ಬೇಸರ ಹಾಗೂ ಅವಮಾನಕ್ಕೆ ಒಳಗಾದ ಮಹೇಶ್ ಅಧೆ ಜೀವ ಬಿಡಲು ನಿರ್ಧರಿಸಿದ್ದಾರೆ ಎಂದು ಅಸ್ಥಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಗಣೇಶ್ ಸುರ್ವಾಸೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಿರಂತರ ಬೆದರಿಕೆಯ ಜೊತೆಗೆ ಆತ ಸಾವಿಗೆ ಶರಣಾದ ದಿನ ಮುಂಜಾನೆ ಆತನಿಗೆ ಕರೆಯೂ ಬಂದಿತ್ತು. ನಂತರ ಆತ ಬುಧವಾರ ಬೆಳಗ್ಗೆ ತನ್ನ ಸೋದರ ಸಂಬಂಧಿ ಹಾಗೂ ಚಿಕ್ಕಪ್ಪನಿಗೆ ಕರೆ ಮಾಡಿ ಈ ಒತ್ತಡವನ್ನು ನನಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದ್ದಾನೆ. ಇದಾದ ನಂತರ ಮುಂಜಾನೆ 6.30ಕ್ಕೆ ಆತ ಮನೆಬಿಟ್ಟು ಹೋಗಿದ್ದಾನೆ. ಆದರೆ 9.30 ಆದರೂ ಬಾರದೇ ಹೋದಾಗ ಕುಟುಂಬದವರು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಕೃಷಿ ಹೊಂಡದ ಬಳಿ ಆತನ ಚಪ್ಪಲಿ ಹಾಗೂ ಮೊಬೈಲ್ ಫೋನ್ ಸಿಕ್ಕಿದೆ. ಕೈಗಳನ್ನು ಕಟ್ಟಿಕೊಂಡು ಆತ ಕರೆಗೆ ಹಾರಿದ್ದಾನೆ. ಕೈ ಕಟ್ಟಿದ ಸ್ಥಿತಿಯಲ್ಲಿ ಆತನ ಮೃತದೇಹವಿತ್ತು.11ಗಂಟೆಗೆ ಆತನ ಶವವನ್ನು ಹೊಂಡದಿಂದ ತೆಗೆಯಲಾಗಿದೆ.
ನಂತರ ಬುಧವಾರ ತಡರಾತ್ರಿ ಮಹೇಶ್ ಅಧೆ ಸೋದರ ಸಂಬಂಧಿ ಅಖಿಲೇಶ್ ನೀಡಿದ ದೂರಿನ ಮೇರೆಗೆ ಜಲ್ನಾದ ಅಶ್ಥಿ ಪೊಲೀಸರು ಬಿಎಸ್‌ಎಸ್ ಕಾಯ್ದೆ ಸೆಕ್ಷನ್ 108ರ ಅಡಿ ಪ್ರಕರಣದ ದಾಖಲಿಸಿದ್ದಾರೆ. ಹಾಗೂ ಈ ವೀಡಿಯೋ ಪ್ರಸಾರ ಮಾಡಿದ 7 ಜನರ ವಿರುದ್ಧ ಕೇಸ್ ದಾಖಲಾಗಿದೆ. ಅಧೇಗೆ ಬೆದರಿಕೆ ಮತ್ತು ಟ್ರೋಲ್ ಮಾಡುತ್ತಲೇ ಇದ್ದ ಏಳು ಜನರ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಜಲ್ನಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಬನ್ಸಾಲ್ ದೃಢಪಡಿಸಿದ್ದಾರೆ.
ಇದನ್ನೂ ಓದಿ: ಶಾಂತವಾಗಿದ್ದ ಮುಸ್ಲಿಂ ರಾಷ್ಟ್ರದಲ್ಲೂ ಸ್ಫೋಟ: ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲೇ ಬ್ಲಾಸ್ಟ್
ಇದನ್ನೂ ಓದಿ: ಮಂಗಳೂರು: ಶಾಂಭವಿ ನದಿಗೆ ಹಾರಿ ಯುವ ಉದ್ಯಮಿ ಸಾವಿಗೆ ಶರಣು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.