
ಶಾಂತವಾಗಿದ್ದ ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದಲ್ಲೂ ಸ್ಫೋಟ ಸಂಭವಿಸಿದೆ. ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲೇ ಸ್ಫೋಟ ಸಂಭವಿಸಿದ್ದು, ಈ ಅವಘಡದಲ್ಲಿ ಕನಿಷ್ಟ 54 ಜನ ಗಾಯಗೊಂಡ ಬಗ್ಗೆ ವರದಿಯಾಗಿದೆ. ಉತ್ತರ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಶಾಲಾ ಮಕ್ಕಳು ಶಿಕ್ಷಕರು, ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ಭಕ್ತರು ಗಾಯಗೊಂಡಿದ್ದಾರೆ. ಶಾಲಾ ಆವರಣದಲ್ಲಿದ್ದ ಮಸೀದಿಯೊಳಗೆ ಈ ಸ್ಫೋಟ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ನಂತರ ಈ ದುರಂತ ಸಂಭವಿಸಿದೆ.
ಶುಕ್ರವಾರದ ಪ್ರಾರ್ಥನೆ ವೇಳೆ ಜಕರ್ತಾದ ಮಸೀದಿಯಲ್ಲಿ ಬ್ಲಾಸ್ಟ್
ಕೆಲಪಾ ಗೇಡಿಂಗ್ ಪ್ರದೇಶದ ನೌಕಾಪಡೆಯ ಕಾಂಪೌಂಡ್‌ನಲ್ಲಿ ಈ ಮಸೀದಿ ಇದ್ದು, ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರಲ್ಲಿ ಆಘಾತ ಉಂಟುಮಾಡಿದೆ. ಸ್ಫೋಟದ ಶಬ್ದ ಶಾಲಾ ಆವರಣದಲ್ಲಿ ಪ್ರತಿಧ್ವನಿಸುತ್ತಿದ್ದಂತೆ ತೀವ್ರ ಭೀತಿ ಸೃಷ್ಟಿಯಾಯ್ತು. ಇಡೀ ಕಟ್ಟಡ ನೆಲದಿಂದ ಮೇಲಕ್ಕೆತ್ತಿದಂತೆ ಭಾಸವಾಯಿತು ಎಂದು ಘಟನೆ ನಡೆದ ಮಸೀದಿ ಹತ್ತಿರದಲ್ಲಿಯೇ ವಾಸಿಸುವ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಸ್ಫೋಟದ ನಂತರ ಮಸೀದಿಯಿಂದ ದಟ್ಟ ಹೊಗೆ ಬರುತ್ತಿತ್ತು, ಮತ್ತು ತುರ್ತು ಎಚ್ಚರಿಕೆ ಗಂಟೆ ಮೊಳಗುತ್ತಿದ್ದಂತೆ ಭಯಭೀತರಾದ ವಿದ್ಯಾರ್ಥಿಗಳು ರಕ್ಷಣೆಗಾಗಿ ಹೊರಗೆ ಓಡಿದ್ದಾರೆ.
ಸ್ಥಳದಲ್ಲಿ ಸಿಕ್ಕ ಬಂದೂಕಿನಲ್ಲಿ ನರಕಕ್ಕೆ ಸ್ವಾಗತ ಎಂಬ ಬರಹ
ಘಟನಾ ಸ್ಥಳದಿಂದ ಗುಂಡು ಹಾರಿಸುವ ಗನ್‌ಗಳು, ಉರಿಯುವಂತಹ ಕಾಕ್‌ಟೇಲ್‌ಗಳು ದೇಹಕ್ಕೆ ಸುತ್ತುವ ಬಾಡಿ ವೆಸ್ಟ್‌ಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಈ ವಸ್ತುಗಳು ಸ್ಫೋಟಕ್ಕೆ ಸಂಬಂಧಿಸಿದ್ದ ಅಥವಾ ನಂತರ ಇರಿಸಿದ್ದ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲಿ ಸಿಕ್ಕ ಒಂದು ಬಂದೂಕಿನ ಮೇಲೆ ನರಕಕ್ಕೆ ಸ್ವಾಗತ ಎಂದು ಬರೆಯಲಾಗಿತ್ತು. ಸ್ಫೋಟವು ಉದ್ದೇಶಪೂರ್ವಕವಾಗಿರಬಹುದು ಎಂಬ ಅನುಮಾನ ಹೆಚ್ಚಾಗಿದ್ದರಿಂದ ಘಟನಾ ಸ್ಥಳದಲ್ಲಿನ ಜನ ಮತ್ತಷ್ಟು ಭಯಭೀತರಾಗಿದ್ದಾರೆ.
ಘಟನೆಯ ನಂತರ ಅಲ್ಲಿ ಪೊಲೀಸ್ ವಾಹನಗಳು ಹಾಗೂ ರಕ್ಷಣಾ ಪಡೆಯ ವಾಹನಗಳು, ರಕ್ಷಣಾ ತಂಡಗಳು ಸಾಲು ಸಾಲಾಗಿ ಆಗಮಿಸಿದ್ದರಿಂದ ಅಲ್ಲಿ ಗೊಂದಲದ ವಾತಾವರಣವಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ್ದು, ಘಟನೆಯಲ್ಲಿ ಅನೇಕರಿಗೆ ಸುಟ್ಟ ಗಾಯಗಳಾಗಿವೆ. ಹಾಗು ಕೆಲವರು ಹೊಗೆಯ ಉಸಿರಾಡಿದ್ದರಿಂದ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಘಟನೆಯಲ್ಲಿ 54 ಜನರಿಗೆ ಗಾಯಗಳಾಗಿವೆ.
ನಮಗೆ ಬಂದಿರುವ ಆರಂಭಿಕ ಮಾಹಿತಿಯ ಪ್ರಕಾರ ಸುಮಾರು 54 ವ್ಯಕ್ತಿಗಳಿಗೆ ಹಾನಿಯಾಗಿದೆ ಎಂದು ಜಕಾರ್ತಾ ಪೊಲೀಸ್ ಮುಖ್ಯಸ್ಥ ಅಸೆಪ್ ಎಡಿ ಸುಹೇರಿ ಹೇಳಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರಿಗೆ ಮಧ್ಯಮ ಗಾಯಗಳಾಗಿವೆ ಮತ್ತು ಕೆಲವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಕಾರ್ತಾ ಪೊಲೀಸರು ಆ ಪ್ರದೇಶವನ್ನು ತ್ವರಿತವಾಗಿ ಸುತ್ತುವರೆದಿದ್ದು, ಅವಶೇಷಗಳನ್ನು ಶೋಧಿಸಲು ಬಾಂಬ್ ನಿಷ್ಕ್ರಿಯ ಘಟಕ ಸ್ಥಳದಲ್ಲಿದೆ. ತನಿಖೆಯ ಭಾಗವಾಗಿ ಅಧಿಕಾರಿಗಳು ಮಸೀದಿಯ ಅವಶೇಷಗಳನ್ನು ಸಂಗ್ರಹಿಸಿ ಮಸೀದಿಯ ಕಾಂಪೌಂಡ್ ಬಂದ್ ಮಾಡಿದ್ದಾರೆ. ಈ ಘಟನೆ ಇದೀಗ ನಡೆದಿರುವುದರಿಂದ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ಸುಹೇರಿ ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಶಾಂಭವಿ ನದಿಗೆ ಹಾರಿ ಯುವ ಉದ್ಯಮಿ ಸಾವಿಗೆ ಶರಣು
ಇದನ್ನೂ ಓದಿ: ನಿಮ್ಮ ಮಗನ ತಪ್ಪಿಲ್ಲ ದು:ಖಿಸಬೇಡಿ: ಅಪಘಾತಕ್ಕೀಡಾದ ಅಹ್ಮದಾಬಾದ್ ವಿಮಾನದ ಪೈಲಟ್‌ನ ತಂದೆಗೆ ಸುಪ್ರೀಂಕೋರ್ಟ್ ಸಾಂತ್ವಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ