ಮೋದಿ ಅಂದಿದ್ರಂತೆ ಟ್ರಂಪ್ ಸರ್ಕಾರ್: ಹಾಗೇನಿಲ್ವಲ್ಲಾ ಅಂದ್ರು ಜೈಶಂಕರ್!

By Web DeskFirst Published Oct 1, 2019, 12:39 PM IST
Highlights

ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದಿದ್ದ ಪ್ರಧಾನಿ ಮೋದಿ| ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಪರ ಪ್ರಧಾನಿ ಪ್ರಚಾರ?| ಅಮೆರಿಕದಲ್ಲಿ 2020ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ| ಪ್ರಧಾನಿ ಮೋದಿ ಹೇಳಿಕೆಗೆ ಸ್ಪಷ್ಟನೆ ನೀಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್| ಅಧ್ಯಕ್ಷೀಯ ಚುನಾವಣೆ ಅಮೆರಿಕದ ಆಂತರಿಕ ವಿಚಾರ ಎಂದ ಜೈಶಂಕರ್| ‘ಭಾರತಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಇಲ್ಲ’|

ವಾಷಿಂಗ್ಟನ್(ಅ.01): 2020ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬ ಆರೋಪವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಲ್ಲಗಳೆದಿದ್ದಾರೆ.  

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂಬ ಪ್ರಧಾನಿ ಮೋದಿ ಹೇಳಿಕೆ ವಿವಾದ ಒಡೆದುಕೊಂಡಿತ್ತು.  ಟ್ರಂಪ್ ಕೈ ಹಿಡಿದು ವೇದಿಕೆಯೇರಿದ್ದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಈ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು.

ಇದೀಗ ಮೋದಿ ಹೇಳಿಕೆಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕದಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಬಳಿಸಿದ್ದ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಹೇಳಿಕೆಯನ್ನಷ್ಟೇ ಪ್ರಧಾನಿ ಮೋದಿ ಪುನರುಚ್ಛಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಬ್ ಕಿ ಬಾರ್ ಮೋದಿ ಸರ್ಕಾರ್ ಘೋಷಣೆ ಮೊಳಗಿಸಿತ್ತು. ಇದೇ ಘೋಷಣೆಯನ್ನು ಟ್ರಂಪ್ ಅಮೆರಿಕದಲ್ಲಿರುವ ಭಾರತೀಯರನ್ನು ಓಲೈಸಲು ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಬಳಸಿಕೊಂಡಿದ್ದರು.

ಪ್ರಧಾನಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಈ ಹಳೆಯ ಘೋಷಣೆಯನ್ನೆಷ್ಟೇ ಪುನರುಚ್ಛಿಸಿದ್ದಾರೆ ಎಂದಿರುವ ಜೈಶಂಕರ್, ಭಾರತಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಎಸ್.ಜೈಶಂಕರ್ ಪ್ರಧಾನಿ ಮೋದಿ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಅಧ್ಯಕ್ಷೀಯ ಚುನಾವಣೆ ಅಮೆರಿಕದ ಆತಂರಿಕ ವಿಷಯ ಎಂದು ಹೇಳಿದ್ದಾರೆ. ಇದೇ ವೇಳೆ ಕಾಶ್ಮೀರ ವಿಚಾರದಲ್ಲಿ ಭಾರತ ಯಾರ ಮಧ್ಯಸ್ಥಿಕೆಯನ್ನೂ ಬಯಸುವುದಿಲ್ಲ ಎಂದು ಜೈಶಂಕರ್ ಅಮೆರಿಕಕ್ಕೆ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!