ಕೆಲ ಕನ್ನಡಪರ ಹೋರಾಟಗಾರರರು ಪ್ರಚಾರ ಪ್ರಿಯರು : ಚಿಮೂ

By Kannadaprabha NewsFirst Published Oct 1, 2019, 10:20 AM IST
Highlights

ಕನ್ನಡಪರ ಹೋರಾಟಗಾರರು ಪ್ರಚಾರ ಪ್ರಿಯರಾಗಿ ಹಣ ಸಂಪಾದನೆ ಮಾಡುವ ಮೂಲಕ ಹೋರಾಟಕ್ಕೆ ಕಳಂಕ ತರುತ್ತಿದ್ದಾರೆ ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು [ಸೆ.01]:  ಪ್ರಸ್ತುತ ಕೆಲವು ಕನ್ನಡಪರ ಹೋರಾಟಗಾರರು ಪ್ರಚಾರ ಪ್ರಿಯರಾಗಿ ಹಣ ಸಂಪಾದನೆ ಮಾಡುವ ಮೂಲಕ ಹೋರಾಟಕ್ಕೆ ಕಳಂಕ ತರುತ್ತಿದ್ದಾರೆ ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಸೋಮವಾರ ಹಂಪಿನಗರದಲ್ಲಿರುವ ಪಶ್ಚಿಮ ವಲಯದ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹೋರಾಟಗಾರ ‘ಜಿ. ನಾರಾಯಣ ಕುಮಾರ್‌ ಸಂಸ್ಮರಣೆ ಹಾಗೂ ‘ಜಿ.ನಾ.ಕು. ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ನಾರಾಯಣ ಕುಮಾರ್‌ ಕನ್ನಡದ ಅಂತಃಸತ್ವ ಅರಿತವರಾಗಿದ್ದರು. ಅಲ್ಲದೆ, ಕನ್ನಡ ಅಸ್ಮಿತೆ ಕಳೆದುಕೊಂಡಿದ್ದ ಕಾಲದಲ್ಲಿ ಯಾವುದೇ ರೀತಿಯಲ್ಲಿ ಕಳಂಕ ತಟ್ಟದ ಹಾಗೆ ರಾಜ್ಯಾದ್ಯಂತ ಕನ್ನಡಕ್ಕಾಗಿ ಶ್ರೇಷ್ಠ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಜಿನಾಕು ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ರಾಜ್ಯದ ಭಾಷಾ ಹೋರಾಟವಾದ ಗೋಕಾಕ್‌ ಚಳವಳಿ ಸೇರಿದಂತೆ ರೈತ ಚಳವಳಿ ಮತ್ತು ದಲಿತ ಚಳವಳಿ ಈ ಮೂರು ಹೋರಾಟಗಳನ್ನು ರಾಜ್ಯದ ರಾಜಕಾರಣಿಗಳು ತುಂಬಾ ವ್ಯವಸ್ಥಿತವಾಗಿ ತುಳಿದರು. ಅದರಲ್ಲಿಯೂ ಕನ್ನಡ ಚಳವಳಿಯನ್ನು ತುಸು ಹೆಚ್ಚಾಗಿಯೇ ತುಳಿದರು ಎಂದು ಬೇಸರ ವ್ಯಕ್ತಪಡಿಸಿದರು.

ಗೋಕಾಕ್‌ ಹೋರಾಟಕ್ಕೆ ಜಿ. ನಾರಾಯಣಕುಮಾರ್‌ ಅವರು ನಟ ಡಾ. ರಾಜಕುಮಾರ್‌ ಅವರನ್ನು ಕರೆತಂದಿದ್ದರಿಂದಲೇ ಮತ್ತೊಂದು ರೂಪ ಪಡೆಯಿತು. ಆದರೆ, ಹೋರಾಟದ ಬಳಿಕ ಚಳವಳಿ ಯಶಸ್ಸನ್ನು ಯಾರಾರ‍ಯರೋ ಪಡೆದುಕೊಂಡರು ಎಂದು ಹೋರಾಟದ ದಿನಗಳನ್ನು ಮೆಲಕು ಹಾಕಿದರು.

ಇಂದಿನ ಜನಪ್ರತಿನಿಧಿಗಳು ಹಮ್ಮು ಬಿಮ್ಮಿನಿಂದ ಮೆರೆಯುತ್ತಿದ್ದಾರೆ. ಆದರೆ, ಜಿ. ನಾರಾಯಣಕುಮಾರ್‌ ಶಾಸಕರಾಗಿದ್ದಾಗ ಕೂಡ ತುಂಬಾ ವಿನಯದಿಂದ ನಡೆದುಕೊಂಡು ಮಾದರಿ ವ್ಯಕ್ತಿಯಾಗಿದ್ದರು. ಕನ್ನಡ ಹೋರಾಟದಲ್ಲಿ ಅನಕೃ, ತರಾಸು ಮಟ್ಟಿಗೆ ಜಿ. ನಾರಾಯಣಕುಮಾರ್‌ ಅವರಿಗೂ ಅಭಿಮಾನಿಗಳಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಬಿ.ಕೆ. ಶಿವರಾಂ, ಚಿಂತಕ ಡಾ. ಬೈರಮಂಗಲ ರಾಮೇಗೌಡ, ಜಾನಪದ ಗಾಯಕ ಡಾ. ಅಬ್ಬಗೆರೆ ತಿಮ್ಮರಾಜು, ಕನ್ನಡ ಹೋರಾಟಗಾರ ನಾ. ಶ್ರೀಧರ್‌ ಹಾಗೂ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ವಿ. ಅವರಿಗೆ ‘ಜಿನಾಕು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಂ. ಮನು ಬಳಿಗಾರ್‌, ಹೋರಾಟಗಾರ ರಾ.ನಂ. ಚಂದ್ರಶೇಖರ್‌ ಉಪಸ್ಥಿತರಿದ್ದರು.

click me!